ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತವಾದ ವಿಚಾರದಲ್ಲಿ ವಿಪಕ್ಷ ನಾಯಕರುಗಳು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಹಾರಾಷ್ಟ್ರದಲ್ಲಿ ಸೆಲೆಬ್ರೆಟಿಗಳೇ ಸುರಕ್ಷಿತವಾಗಿಲ್ಲ, ಇನ್ನು ಜನ ಸಾಮಾನ್ಯರ ಗತಿಯೇನು” ಎಂದು ವಿಪಕ್ಷ ನಾಯಕರುಗಳು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ವಿಪಕ್ಷ ನಾಯಕರುಗಳು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತ: ರಾತ್ರಿ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್, “ಇಲ್ಲಿ ಯಾರೂ ಕೂಡಾ ಸುರಕ್ಷಿತರಾಗಿಲ್ಲ. ಒಂಟಿಯಾಗಿರುವ ಜನ ಸಾಮಾನ್ಯರ ವಿಚಾರ ಬಿಡಿ, ಇಲ್ಲಿ ಭದ್ರತೆ ಹೊಂದಿರುವ ಸೆಲೆಬ್ರೆಟಿಗಳು ಕೂಡಾ ಸುರಕ್ಷಿತವಾಗಿಲ್ಲ” ಎಂದು ಹೇಳಿದ್ದಾರೆ.
ಸೈಫ್ ಅಲಿ ಖಾನ್ ಪದ್ಮಶ್ರೀ ಪುರಸ್ಕೃತರು ಮತ್ತು ಇತ್ತೀಚೆಗೆ ಕುಟುಂಬ ಸಮೇತವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ ಎಂಬುದನ್ನು ಕೂಡಾ ರಾವತ್ ಉಲ್ಲೇಖಿಸಿದ್ದಾರೆ.
“ರಾಜ್ಯದಲ್ಲಿ ರಾಜಕಾರಣಿಗಳ ಭದ್ರತೆಗಾಗಿ, ಅದರಲ್ಲೂ ಮುಖ್ಯವಾಗಿ ಏನಾದರೂ ತಪ್ಪು ಮಾಡಿರುವ ರಾಜಕಾರಣಿಗಳ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗುತ್ತದೆ. ರಾಜ್ಯದಲ್ಲಿ ಕಾನೂನಿನ ಭಯವೇ ಇಲ್ಲ. ಸರ್ಕಾರದ ನಿಲುವು ಈಗ ಬಯಲಾಗಿದೆ” ಎಂದು ಸಂಜಯ್ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಧೈರ್ಯಶಾಲಿ ರಾಜಕಾರಣಿ’ : ರಾಹುಲ್ ಗಾಂಧಿಯನ್ನು ಹಾಡಿಹೊಗಳಿದ ನಟ ಸೈಫ್ ಅಲಿ ಖಾನ್
ಇನ್ನು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ, “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಧಿಕ ಭದ್ರತೆಯನ್ನು ಹೊಂದಿರುವ ನಟರಾದ ಸೈಫ್ ಅಲಿ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಮೇಲೆಯೇ ದಾಳಿ ನಡೆಯುತ್ತದೆ. ಬುಲೆಟ್ ಪ್ರೂಫ್ ಕಿಟಕಿಗಳನ್ನು ಹಾಕಬೇಕಾದ ಸ್ಥಿತಿ ಬಂದೊದಗಿದೆ. ಯಾರೂ ಕೂಡಾ ಸರ್ಕಾರವನ್ನು ನಂಬುವುದಿಲ್ಲ ಎಂಬುದೇ ಇದರರ್ಥ” ಎಂದು ಅಭಿಪ್ರಾಯಿಸಿದ್ದಾರೆ.
ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಬಾಂದ್ರಾ ಅಪಾರ್ಟ್‌ಮೆಂಟ್‌ನ ಕಿಟಕಿಗಳಿಗೆ ಬುಲೆಟ್ ಪ್ರೂಫ್ ಕಿಟಕಿಗಳನ್ನು ಅಳವಡಿಸಲಾಗಿದೆ. ಇದಕ್ಕೂ ಮುನ್ನ ಏಪ್ರಿಲ್‌ನಲ್ಲಿ ಸಲ್ಮಾನ್ ಖಾನ್ ನಿವಾಸದ ಬಳಿ ಲಾರೆನ್ಸ್ ಬಿಷ್ಣೋಯ್ ತಂಡದ ಇಬ್ಬರು ಗುಂಡಿನ ದಾಳಿ ನಡೆಸಿದ್ದರು.
“ಸೆಲೆಬ್ರೆಟಿಗಳೇ ಸುರಕ್ಷಿತವಾಗಿಲ್ಲವೆಂದರೆ ಇನ್ನು ಜನಸಾಮಾನ್ಯರ ಕಥೆಯೇನು? ಸಿಎಂ ದೇವೇಂದ್ರ ಫಡ್ನವೀಸ್ ಅವರ ತವರೂರಲ್ಲೇ ಹಲವು ಕೊಲೆ, ಅತ್ಯಾಚಾರ ಪ್ರಕರಣಗಳು ಕಳೆದ ಹತ್ತು ದಿನಗಳಲ್ಲಿ ದಾಖಲಾಗಿದೆ” ಎಂದು ನಾಗ್ಪುರ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ದುಷ್ಕರ್ಮಿಗಳು ಇಂದು ಚಾಕು ಇರಿದಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಗುತ್ತಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
