- ಬಿಜೆಪಿ ನಾಯಕನ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಟಿಎಂಸಿ ಸಂಸದೆ ಮಹುವಾ
- ಇಂದೋರ್‌ನಲ್ಲಿ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ವರ್ಗೀಯ ಟೀಕೆ
ಮಹಿಳೆಯರು ಧರಿಸುವ ಉಡುಗೆಗಳ ಬಗ್ಗೆ ಟೀಕಿಸಿ ವ್ಯಂಗ್ಯವಾಗಿ ಮಾತನಾಡಿದ್ದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗೀಯ ಅವರನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ ಶುಕ್ರವಾರ (ಏಪ್ರಿಲ್ 14) ತರಾಟೆಗೆ ತೆಗೆದುಕೊಂಡಿದ್ದಾರೆ.
ಅರೆಬರೆ ಬಟ್ಟೆಗಳ ಧರಿಸುವ ಯುವತಿಯರು ರಾಮಾಯಣದಲ್ಲಿ ಬರುವ ರಾಕ್ಷಸಿ ಶೂರ್ಪನಖಿಯಂತೆ ಕಾಣುತ್ತಾರೆ ಎಂದು ವಿಜಯ ವರ್ಗೀಯ ಟೀಕಿಸಿದ್ದರು.
ಈ ಕುರಿತು ಮಹುವಾ ಮೊಯಿತ್ರಾ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. “ನಾವು ತೊಡುವ ಉಡುಗೆಗಳು ಕೊಳಕಲ್ಲ, ನಿಮ್ಮ ಆಲೋಚನೆ ಕೊಳಕಾಗಿದೆ” ಎಂದು ವರ್ಗೀಯ ಅವರಿಗೆ ತಿರುಗೇಟು ನೀಡಿದ್ದಾರೆ.
ತಮ್ಮ ಹೇಳಿಕೆಯ ವಿಡಿಯೊವನ್ನು ಮಹುವಾ ಅವರು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
“ಶುಕ್ರವಾರ ಬೆಳಿಗ್ಗೆ ಬಿಜೆಪಿ ನಾಯಕರು ಮತ್ತು ಭಕ್ತರಿಗೆ ಒಂದು ಸಂದೇಶ ನೀಡಿರುವೆ. ನಾವು ಬೆಂಗಾಲಿ ಮಹಿಳೆಯರು, ನಮಗೆ ಯಾವುದು ಬೇಕೋ ಅದನ್ನು ಹಾಕಿಕೊಳ್ಳುತ್ತೇವೆ, ನಮಗೆ ಏನು ಬೇಕೋ ಅದನ್ನು ತಿನ್ನುತ್ತೇವೆ. ನಮಗೆ ಯಾರನ್ನು ಪೂಜಿಸಬೇಕೆನಿಸುತ್ತದೋ ಅವರನ್ನು ಪೂಜಿಸುತ್ತೇವೆ. ನಮ್ಮ ಬಟ್ಟೆಗಳು ಕೊಳಕಲ್ಲ, ನಿಮ್ಮ ಆಲೋಚನೆ ಕೊಳಕಾಗಿದೆ” ಎಂದು ಕಟುವಾಗಿ ಉತ್ತರಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಹನುಮ ಜಯಂತಿ ಪ್ರಯುಕ್ತ ನಡೆದ ಸಮಾರಂಭದಲ್ಲಿ ಭಾಗವಹಿಸಿ ಕೈಲಾಶ್ ವಿಜಯ ವರ್ಗೀಯ ಯುವತಿಯರ ಉಡುಗೆ ಬಗ್ಗೆ ಟೀಕಿಸಿದ್ದರು.
ಈ ಸುದ್ದಿ ಓದಿದ್ದೀರಾ? ನಾಗಾಲ್ಯಾಂಡ್ ನಾಗರಿಕರ ಹತ್ಯೆ | 30 ಸೇನಾ ಸಿಬ್ಬಂದಿ ವಿಚಾರಣೆಗೆ ನಿರಾಕರಿಸಿದ ರಕ್ಷಣಾ ಸಚಿವಾಲಯ
“ರಾತ್ರಿ ವೇಳೆ ನಾನು ಹೊರಗೆ ಹೋಗುವಾಗ ಅನೇಕ ಯುವಕ– ಯುವತಿಯರು ಕುಡಿದ ಅಮಲಿನಲ್ಲಿ ತೇಲಾಡುತ್ತಿರುತ್ತಾರೆ. ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಅವರನ್ನು ನಿಲ್ಲಿಸಿ ಕೆನ್ನೆಗೆ ಬಾರಿಸಬೇಕೆಂದು ಎನ್ನಿಸುತ್ತದೆ. ಮಹಿಳೆಯರು ಮತ್ತು ಯುವತಿಯರನ್ನು ನಾವು ದೇವತೆಗಳೆಂದು ಕರೆಯುತ್ತೇವೆ. ಆದರೆ ಯುವತಿಯರು ಅರೆಬರೆ ಬಟ್ಟೆಗಳನ್ನು ಧರಿಸಿ ಓಡಾಡುತ್ತಾರೆ. ಈಗ ಅವರು ದೇವತೆಯ ಹಾಗೆ ಕಾಣುವುದಿಲ್ಲ. ರಾಕ್ಷಸಿ ಶೂರ್ಪನಖಿ ಹಾಗೆ ಕಾಣುತ್ತಾರೆ” ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಯನ್ನು ಮಹುವಾ ಮಯಿತ್ರಾ ಸೇರಿದಂತೆ ಅನೇಕರು ಖಂಡಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು.