ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವ ಕಾರ್ಯತಂತ್ರಗಳ ಪ್ರತಿಪಕ್ಷಗಳ ಒಗ್ಗಟ್ಟಿನ ಮಹಾಸಭೆ ಜುಲೈ 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷರಾದ ಶರದ್ ಪವಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 23 ರಂದು ಪಾಟ್ನಾದಲ್ಲಿ ನಡೆದ ಮೊದಲ ಪ್ರತಿಪಕ್ಷ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ವಿರುದ್ಧ ಒಗ್ಗಟ್ಟಿನ ಕಾರ್ಯತಂತ್ರ ರೂಪಿಸಲು ಮುಂದಿನ ಸಭೆಯನ್ನು ಶಿಮ್ಲಾದಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದರು. ಆದರೆ ಈಗ ಸ್ಥಳವನ್ನು ಬದಲಾಯಿಸಲಾಗಿದೆ ಎಂದು ಶರದ್ ಪವಾರ್ ಹೇಳಿದ್ದಾರೆ.
2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸುವ ಸಲುವಾಗಿ 16 ವಿರೋಧ ಪಕ್ಷಗಳು ಪಾಟ್ನಾದಲ್ಲಿ ಸಭೆ ಸೇರಿದ್ದವು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದ ವಿರೋಧ ಪಕ್ಷದ ನಾಯಕರು ಜುಲೈ 10-12 ರಂದು ಶಿಮ್ಲಾದಲ್ಲಿ ಭೇಟಿಯಾಗುವುದಾಗಿ ಈ ಹಿಂದೆ ಘೋಷಿಸಿದ್ದರು.
2024 ರಲ್ಲಿ ಬಿಜೆಪಿಯ ವಿರುದ್ಧ ಹೋರಾಡಲು ಆಯಾ ರಾಜ್ಯಗಳಲ್ಲಿ ಕೆಲಸ ಮಾಡುವಾಗ ಒಟ್ಟಾಗಿ ಮುನ್ನಡೆಯುವ ಕಾರ್ಯಸೂಚಿಯನ್ನು ಸಿದ್ಧಪಡಿಸಲು ಬೆಂಗಳೂರಿನಲ್ಲಿ ಎರಡನೆ ಸಭೆ ನಡೆಯಲಿದೆ.
ಈ ಸುದ್ದಿ ಓದಿದ್ದೀರಾ? ಮಣಿಪುರ | ಬೆಂಗಾವಲು ವಾಹನ ತಡೆ; ಹೆಲಿಕಾಪ್ಟರ್ ಮೂಲಕ ಸಂತ್ರಸ್ತರ ಶಿಬಿರಗಳಿಗೆ ತೆರಳಿದ ರಾಹುಲ್ ಗಾಂಧಿ
ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ವಿಪಕ್ಷ ನಾಯಕರು ಭಾಗವಹಿಸಿದ್ದರು.
ಪ್ರಸ್ತುತ ಲೋಕಸಭೆಯಲ್ಲಿ, ಪ್ರತಿಪಕ್ಷಗಳ ಒಟ್ಟು ಬಲವು 543 ಸ್ಥಾನಗಳಲ್ಲಿ 200 ಕ್ಕಿಂತ ಕಡಿಮೆಯಿದೆ. ಆದರೂ ಈ ಬಾರಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಬಿಜೆಪಿಗೆ ಸೆಡ್ಡು ಹೊಡೆಯುವ ಭರವಸೆಯಲ್ಲಿದ್ದಾರೆ.