ತಮ್ಮ ಹಗರಣಗಳಿಗೆ ರಕ್ಷಣೆ ಇರಲಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ನಟೋರಿಯಸ್ ಗ್ಯಾಂಗ್ ಖೆಡ್ಡಾಗೆ ಕೆಡವಿಕೊಂಡಿದೆ. ನಾವು ಮಾತ್ರ ಸಿದ್ದರಾಮಯ್ಯ ಮೇಲೆ ಆರೋಪ ಮಾಡುತ್ತಿಲ್ಲ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ ಟಿ ರವಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಚಿಕ್ಕಮಗಳೂರಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, “ಕೇವಲ ಸಿದ್ದರಾಮಯ್ಯನವರ ಕುಟುಂಬ ಮಾತ್ರ ಮುಡಾ ಹಗರಣದಲ್ಲಿ ಭಾಗಿಯಾಗಿಲ್ಲ. 1,600ಕ್ಕೂ ಹೆಚ್ಚು ನಿವೇಶನಗಳನ್ನ ಇದೆ ರೀತಿ ಪರಬಾರಿ ಮಾಡಲಾಗಿದೆ ಎಂಬ ಆರೋಪ ಇದೆ” ಎಂದರು.
“ಮೈಸೂರಿನಂತಹ ಸ್ಥಳದಲ್ಲೇ ಹೀಗಾಗಿರುವಾಗ ಬೆಂಗಳೂರಿನಲ್ಲಿ ಎಷ್ಟಾಗಿರಬಹುದು? ಬೇರೆ ಬೇರೆ ನಗರ ಅಭಿವೃದ್ಧಿ ಪ್ರಾಧಿಕಾರದಲ್ಲೂ ಅಕ್ರಮ ನಡೆದಿರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ವಿಧಾನಸಭೆ, ವಿಧಾನ ಪರಿಷತ್ನಲ್ಲಿ ಚರ್ಚೆಗೆ ಒತ್ತಾಯ ಮಾಡಿದ್ದೇವು. ದುರ್ದೈವದ ಸಂಗತಿ ಎಂದರೆ ಆಡಳಿತ ಪಕ್ಷ ಚರ್ಚೆಗೂ ಅವಕಾಶ ಕೊಡಲಿಲ್ಲ” ಎಂದು ತಿಳಿಸಿದರು.
“ಸಿದ್ದರಾಮಯ್ಯ ಒಂದು ಪತ್ರ ಇದ್ದರೆ ತೋರಿಸಿ ಅಂತಾರೆ. ಅವರ ಪತ್ನಿಯೇ ಬರೆದ ಪತ್ರ ಇದೆ. ಕೆಸವೆ ಗ್ರಾಮದಲ್ಲಿ 2001ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಡೆವಲಪ್ ಮಾಡಿದೆ. ಎಲ್ಎನ್ಟಿ ಕಂಪನಿ ಅವರಿಗೆ ಗುತ್ತಿಗೆ ಕೊಟ್ಟಿರುವ ದಾಖಲೆಗಳಿವೆ” ಎಂದು ಹೇಳಿದರು.
“ಎಷ್ಟು ಡಿನೋಟಿಫೈ ಮಾಡಿದ್ದಾರೆ? ಯಾವ ಕಾರಣಗಳಿಗೆ ಮಾಡಿದ್ದಾರೆ? ಯಾರಿಗೆ ಬದಲಿ ನಿವೇಶನ ಕೊಟ್ಟಿದ್ದಾರೆ? ಎಲ್ಲವೂ ಹೊರಬರುತ್ತೆ. ಸೆಟ್ಲ್ಮೆಂಟ್ ಡೀಡ್ ಅನ್ನುವುದೇ ಪ್ರಾಧಿಕಾರದಲ್ಲಿ ಇರುವುದಿಲ್ಲ. ಎಲ್ಲರೂ ದೊಡ್ಡ ದೊಡ್ಡ ಪ್ರಭಾವಿಗಳೇ ಇರೋದು. ನಮ್ಮ ಬಳಿ ಆರೋಪ ಸಾಬೀತು ಮಾಡುವ ಕೆಲ ದಾಖಲೆಗಳಿವೆ” ಎಂದು ತಿಳಿಸಿದರು.
“ಮುಡಾ ಪ್ರಕರಣದಲ್ಲಿ ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಮೂರು ನಡೆದಿದೆ. ನಮ್ಮ ಹತ್ತಿರವು ಕೆಲ ದಾಖಲೆಗಳಿವೆ. ನ್ಯಾಯಾಲಯ ತನಿಖೆಗೆ ಆದೇಶ ನೀಡಿದ ಬಳಿಕ ದಾಖಲೆಗಳನ್ನು ನೀಡುತ್ತೇವೆ. ನ್ಯಾಯಾಲಯದ ತೀರ್ಪನ್ನು ಎದುರು ನೋಡುತ್ತಿದ್ದೇವೆ” ಎಂದರು.
“12 ನಿವೇಶನಗಳನ್ನ 2003ರಲ್ಲಿ ಹಂಚಿಕೆ ಆಗಿರುವುದಕ್ಕೆ ದಾಖಲೆಗಳಿವೆ. ಅಭಿವೃದ್ಧಿ ಆಗಿರುವ ಜಾಗವನ್ನು ಇವರ ಭಾವ ತೆಗೆದುಕೊಂಡಿರುವುದೇ ಅಪರಾಧ. ಮೂಲ ವಾರಸುದಾರರು ಅಲ್ಲದವರ ಬಳಿ ಜಾಗ ತೆಗೆದುಕೊಂಡಿದ್ದಾರೆ. ಜಾಗ ಖರೀದಿ ಇಂದ ಹಿಡಿದು ಕನ್ವರ್ಷನ್ವರೆಗೂ ಅಕ್ರಮವೇ ನಡೆದಿದೆ. ಸಿದ್ದರಾಮಯ್ಯ ಅರ್ಧ ಸತ್ಯ ಹೇಳುತ್ತಿದ್ದಾರೆ” ಎಂದು ಹೇಳಿದರು.
“ಮುಡಾ ಪ್ರಕರಣ ಬೆಳಕಿಗೆ ಬಂದ ತಕ್ಷಣ ನಗರ ಅಭಿವೃದ್ಧಿ ಸಚಿವ ಬೈರತಿ ಸುರೇಶ್ ಮೈಸೂರಿಗೆ ಹೋಗಿ ದಾಖಲೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಇದೆ. ತನಿಖೆ ಕೊಡುವ ಮೂರು ದಿನದ ಮುಂಚೆ ವಾರಗಟ್ಟಲೆ ಮೈಸೂರಿನಲ್ಲಿ ಕುಳಿತ್ತಿದ್ದರು. ಕೆಲವು ದಾಖಲೆಗಳನ್ನು ಇಲ್ಲದಂತೆ ಮಾಡಿದ್ದಾರೆ. ಹಳೆಯ ಅಧಿಕಾರಿಗಳನ್ನು ಕರೆಸಿ ಸಹಿ ಮಾಡಿಸಿದ್ದಾರೆ ಎಂಬ ದೂರು ನಮಗೆ ಬಂದಿತ್ತು ಹೀಗಾಗಿ ನಾವು ತನಿಖೆಗೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರುವರೆಗೂ ಪಾದಯಾತ್ರೆ ಮಾಡಿದ್ದೇವೆ” ಎಂದು ತಿಳಿಸಿದರು.