ಒಡಿಶಾದ ಬಾಲಸೋರ್ನ ಫಕೀರ್ ಮೋಹನ್ (ಸ್ವಾಯತ್ತ) ಕಾಲೇಜಿನ 20 ವರ್ಷದ ವಿದ್ಯಾರ್ಥಿನಿ ಲೈಂಗಿಕ ದೌರ್ಜನ್ಯ ತಾಳಲಾರದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾ ಮಾತ್ರವಲ್ಲದೇ ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಾಧ್ಯಾಪಕರೊಬ್ಬರು ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ನೀಡಿದರೂ ನಿರ್ಲಕ್ಷಿಸಲಾಗಿದೆ ಎಂದು ನೊಂದು ವಿದ್ಯಾರ್ಥಿನಿ ಕ್ಯಾಂಪಸ್ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಜುಲೈ 14ರಂದು ಭುವನೇಶ್ವರದ ಏಮ್ಸ್ನಲ್ಲಿ ಮೃತಪಟ್ಟಿದ್ದಾಳೆ.
ಇದೀಗ ಈ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವಿರೋಧ ಪಕ್ಷಗಳು ಜುಲೈ 17ರಂದು ಒಡಿಶಾ ಬಂದ್ಗೆ ಕರೆ ನೀಡಿದೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ಸರ್ಕಾರ ಭರವಸೆ ನೀಡಿದ್ದರೂ ವಿರೋಧ ಪಕ್ಷಗಳು ಈ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದೆ. ಹಾಗೆಯೇ ಉನ್ನತ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿ ಸೂರ್ಯವಂಶಿ ಸೂರಜ್ ಮತ್ತು ಮುಖ್ಯಮಂತ್ರಿ ಮೋಹನ್ ಚರಣ್ ಮಾಜ್ಹಿ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ.
ಇದನ್ನು ಓದಿದ್ದೀರಾ? ಪಿಯುಸಿ ಪರೀಕ್ಷೆ | ನಕಲು ಆರೋಪ; ವಿದ್ಯಾರ್ಥಿನಿ ಆತ್ಮಹತ್ಯೆ
ಏನಿದು ಪ್ರಕರಣ, ಈವರೆಗೆ ನಡೆದಿದ್ದೇನು?
ಪ್ರಾಧ್ಯಾಪಕರೊಬ್ಬರು ಲೈಂಗಿಕ ಕಿರುಕುಳದ ದೂರನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಜುಲೈ 13ರಂದು ಕ್ಯಾಂಪಸ್ನಲ್ಲಿ ಬಾಲಸೋರ್ನ ಫಕೀರ್ ಮೋಹನ್ (ಸ್ವಾಯತ್ತ) ಕಾಲೇಜಿನ 20 ವರ್ಷದ ಎರಡನೇ ವರ್ಷದ ಬಿ.ಎಡ್ ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಿದ್ಯಾರ್ಥಿನಿಯನ್ನು ಭುವನೇಶ್ವರದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶೇಕಡ 95ರಷ್ಟು ದೇಹ ಸುಟ್ಟು ಹೋಗಿತ್ತು. ಜುಲೈ 14ರಂದು ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ಪ್ರಾಂಶುಪಾಲ ದಿಲೀಪ್ ಘೋಷ್ ಮತ್ತು ಶಿಕ್ಷಣ ಇಲಾಖೆಯ ಮುಖ್ಯಸ್ಥೆ ಸಮೀರ ಕುಮಾರ್ ಸಾಹು ಬಂಧನವಾಗಿದೆ. ಆಂತರಿಕ ದೂರು ಸಮಿತಿಯು ಪ್ರಾಧ್ಯಾಪಕರಿಗೆ ಕ್ಲೀನ್ ಚಿಟ್ ನೀಡಿದ ನಂತರ ಪ್ರಾಂಶುಪಾಲರು ದೂರನ್ನು ಹಿಂಪಡೆಯುವಂತೆ ವಿದ್ಯಾರ್ಥಿನಿಗೆ ಹೇಳಿದ್ದಾರೆ ಎನ್ನಲಾಗಿದೆ. ಪ್ರಾಂಶುಪಾಲ ದಿಲೀಪ್ ಘೋಷ್ ಆರೋಪಿಯ ರಕ್ಷಣೆಗೆ ನಿಂತಿದ್ದರು ಎಂದು ಪೋಷಕರು ಆರೋಪಿಸಲಾಗಿದೆ.
ಸದ್ಯ ಒಡಿಶಾ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಇದು ಆತ್ಮಹತ್ಯೆಯಲ್ಲ; ಇದು ವ್ಯವಸ್ಥೆಯಿಂದ ನಡೆದ ಸಂಘಟಿತ ಕೊಲೆ. ಮೋದಿ ಅವರೇ, ದೇಶದ ಹೆಣ್ಣುಮಕ್ಕಳಿಗೆ ಸುರಕ್ಷತೆ ಮತ್ತು ನ್ಯಾಯ ಬೇಕು. ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದ ಸಂತ್ರಸ್ತೆ ಬೆದರಿಕೆ, ಕಿರುಕುಳ ಮತ್ತು ಪದೇ ಪದೇ ಅವಮಾನಕ್ಕೆ ಒಳಗಾಗಿದ್ದಾರೆ” ಎಂದು ರಾಹುಲ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಇಎಂಐ ತುಂಬದಿದ್ದಕ್ಕೆ ಕಿರುಕುಳ; ವಿದ್ಯಾರ್ಥಿ ಆತ್ಮಹತ್ಯೆ
ಸದ್ಯ ಈ ಪ್ರಕರಣದಲ್ಲಿ ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಯಾಗಿಯೂ ಸೇವೆ ಸಲ್ಲಿಸುತ್ತಿರುವ ರಾಜ್ಯಪಾಲ ಹರಿ ಬಾಬು ಕಂಭಂಪತಿ ಮಧ್ಯಪ್ರವೇಶಿಸಿದ್ದಾರೆ. ಸರ್ಕಾರದಿಂದ ಈ ಪ್ರಕರಣಕ್ಕೆ ಸಂಬಂಧಿಸಿದ ಪೂರ್ಣ ವಿವರ ಕೋರಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಜ್ಯಪಾಲರು, “ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಸೂರಜ್ ಸೂರ್ಯವಂಶಿ ಅವರೊಂದಿಗೆ ಮಾತನಾಡಿದ್ದೇನೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಅಧಿಕಾರಿಗಳು ತುರ್ತು, ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ನಾನು ಒತ್ತಾಯಿಸಿದ್ದೇನೆ” ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಮಾಡುವ ಮುನ್ನ ರಾಜ್ಯಪಾಲರು ಏಮ್ಸ್ನ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ.
Spoke to Higher Education Minister Shri Suryabanshi Suraj (@suryabanshibjp) regarding the unfortunate incident involving the girl student of FM (Autonomous) College, Balasore, who is currently undergoing treatment at AIIMS Bhubaneswar. I sought details about the circumstances…
— Dr. Hari Babu Kambhampati (@DrHariBabuK) July 14, 2025
ಸದ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಮತ್ತು ಬಿಜೆಡಿ ನಾಯಕರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. “ಪೊಲೀಸರ ಸಹಾಯದಿಂದ ಸರ್ಕಾರವು ರಾತ್ರಿಯಲ್ಲಿ ಶವವನ್ನು ಸದ್ದಿಲ್ಲದೆ ತೆಗೆದುಕೊಂಡು ಹೋಗಲು ಯತ್ನಿಸಿತ್ತು” ಕಾಂಗ್ರೆಸ್ ನಾಯಕ ಯಾಶಿರ್ ದೂರಿದ್ದಾರೆ.
ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿಗೆ ಹೊಂದಿಕೆಯಾಗುವಂತೆ ಅಧಿಕೃತ ಸಾವಿನ ಘೋಷಣೆ ವಿಳಂಬವಾಗಿ ಮಾಡಲಾಗಿದೆ ಎಂದು ಬಿಜೆಡಿಯ ಎಲಿನಾ ಡ್ಯಾಶ್ ಆರೋಪಿಸಿದ್ದಾರೆ. ಬಿಜೆಡಿ ಶಾಸಕಿ ಸ್ನೇಹಂಗಿನಿ ಚುರಿಯಾ ಸರ್ಕಾರವನ್ನು ಟೀಕಿಸಿದ್ದು, “ಕೇಂದ್ರದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಘೋಷಣೆ ಒಡಿಶಾದಲ್ಲಿ ‘ಬೇಟಿ ಪಡಾವೋ, ಬೇಟಿ ಜಲವೋ’ ಆಗಿ ದುರಂತವಾಗಿ ಬದಲಾಗಿದೆ” ಎಂದು ಹೇಳಿದ್ದಾರೆ. “ಯಾರೂ ಸಂತ್ರಸ್ತೆಯ ಮಾತನ್ನು ಕೇಳಿಲ್ಲ. ಅದರಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಳು. ಈ ಘಟನೆಯು ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಕ್ಷೀಣಿಸುತ್ತಿರುವುದಕ್ಕೆ ಒಂದು ಸ್ಪಷ್ಟ ಉದಾಹರಣೆ” ಎಂದೂ ಹೇಳಿದ್ದಾರೆ.
ಇವೆಲ್ಲವುದರ ನಡುವೆ ಮರಣೋತ್ತರ ಪರೀಕ್ಷೆ ವಿವಾದಕ್ಕೆ ಕಾರಣವಾಗಿದೆ. ಏಮ್ಸ್ನಲ್ಲಿ ಬೆಳ್ಳಂಬೆಳಗ್ಗೆ (ಮಧ್ಯರಾತ್ರಿ) 2 ಗಂಟೆಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಈ ಬಗ್ಗೆ ಪ್ರತಿಭಟನೆ ಭುಗಿಲೆದ್ದಿದೆ. ಸಾಕ್ಷ್ಯಗಳನ್ನು ಮುಚ್ಚಿಡಲು ಈ ರೀತಿ ನಡುರಾತ್ರಿ 2 ಗಂಟೆಗೆ ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ವಿಪಕ್ಷಗಳು ಆರೋಪಿಸಿದೆ.
ಇಂದು(ಜುಲೈ 16) ಈ ಘಟನೆ ಖಂಡಿಸಿ ಒಡಿಶಾ ಸೆಕ್ರಟರಿಯೇಟ್ ಹೊರಗೆ ಬಿಜು ಜನತಾ ದಳ(ಬಿಜೆಡಿ) ಬೃಹತ್ ಪ್ರತಿಭಟನೆ ನಡೆಸಿದ್ದು, ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್ ಮತ್ತು ಜಲಫಿರಂಗಿಗಳನ್ನು ಪ್ರಯೋಗಿಸಿದ್ದಾರೆ. ಪ್ರತಿಭಟನೆಯ ನಂತರ ನೂರಾರು ಬಿಜೆಡಿ ಕಾರ್ಯಕರ್ತರನ್ನು ಸುತ್ತುವರೆದರು. ತಮ್ಮ ಬೇಡಿಕೆ ಈಡೇರುವವರೆಗೆ ಪ್ರತಿಭಟನೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಸೇರಿ ಎಂಟು ವಿಪಕ್ಷಗಳು ನಾಳೆ(ಜುಲೈ 17) ಒಡಿಶಾ ಬಂದ್ ಘೋಷಿಸಿದೆ.
