- ಡ್ರಗ್ಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಮಕ್ಕಳಿಗೆ ತಿಳಿವಳಿಕೆ ಮೂಡಿಸಲು ಈ ಪ್ರಯತ್ನ
- ಪೊಲೀಸ್ ಅಧಿಕಾರಿಗಳಿಗೆ ಹೊಸ ಟಾಸ್ಕ್ ನೀಡಿದ ಡಾ.ಜಿ ಪರಮೇಶ್ವರ್
ಶಾಲಾ ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸುವ ಸಲುವಾಗಿ ಇನ್‌ಸ್ಪೆಕ್ಟರ್ ಮೇಲಿನ ಹಂತದ ಅಧಿಕಾರಿಗಳು ಇನ್ನು ಮುಂದೆ ಶಾಲೆಗಳಿಗೆ ತೆರಳಿ ನೀತಿ ನಿಯಮಗಳ ಪಾಠ ಮಾಡುವುದನ್ನು ಗೃಹ ಸಚಿವ ಪರಮೇಶ್ವರ್ ಕಡ್ಡಾಯಗೊಳಿಸಿದ್ದಾರೆ.
ತುಮಕೂರಿನಲ್ಲಿ ಸೋಮವಾರ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಸಭೆ ನಡೆಸಿದ ಅವರು ಹಿರಿಯ ಅಧಿಕಾರಿಗಳಿಗೆ ಹೊಸ ಜವಾಬ್ಧಾರಿ ಹಂಚಿಕೆ ಮಾಡಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಮಕ್ಕಳಿಗೆ ತಿಳಿವಳಿಕೆ ಮೂಡಿಸಲು ಈ ಪ್ರಯತ್ನ ಮಾಡುತ್ತಿದ್ದೇವೆ. ಇದರ ಭಾಗವಾಗಿ ತಿಂಗಳಿಗೊಮ್ಮೆ ಹಿರಿಯ ಪೊಲೀಸ್ ಅಧಿಕಾರಿಗಳು ಶಾಲೆಗೆ ತೆರಳಿ ಮಕ್ಕಳಿಗೆ ಕಾನೂನು ಶಿಕ್ಷಣ ನೀಡಬೇಕೆಂದು ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಮುಂದಾಗಿರುವ ಗೃಹ ಸಚಿವರು, ಅದರ ಪೈಲಟ್ ಪ್ರಾಜೆಕ್ಟ್ ಅನ್ನು ತುಮಕೂರು ಜಿಲ್ಲೆಯಿಂದ ಆರಂಭಿಸಲು ಯೋಜನೆ ರೂಪಿಸಿದ್ದಾರೆ. ಸೋಮವಾರ ತಡರಾತ್ರಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಪರಮೇಶ್ವರ್ ಸಭೆ ನಡೆಸಿ ಕೆಲ ಕಾರ್ಯಸೂಚಿಗಳನ್ನು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ 24 ಗಂಟೆಯೊಳಗೆ ನೀರು ಒದಗಿಸಿ: ಮುಖ್ಯಮಂತ್ರಿ
ರಾಜ್ಯಕ್ಕೆ ತಮ್ಮ ತವರು ಜಿಲ್ಲೆ ತುಮಕೂರು ಮಾದರಿಯಾಗಬೇಕು ಎನ್ನುವ ಕಾರಣದಿಂದಲೇ “ಡ್ರಗ್ಸ್ ಮುಕ್ತ ರಾಜ್ಯ”ದ ಅಭಿಯಾನವನ್ನು ಇಲ್ಲಿಂದಲೇ ಆರಂಭಿಸಲು ತಾವು ಮುಂದಾಗಿರುವುದಾಗಿ ಪರಮೇಶ್ವರ್ ಹೇಳಿಕೊಂಡಿದ್ದಾರೆ.
ಕರ್ನಾಟಕದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆ. ಹೀಗಾಗಿ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸುವುದರ ಜೊತೆಗೆ ಯುವ ಜನತೆಗೂ ಅಗತ್ಯ ಕಾನೂನು ತಿಳಿವಳಿಕೆ ಮೂಡಿಸಲಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದರು.
ನಿನ್ನೆಯ ಸಭೆಯಲ್ಲಿ ಐಜಿಪಿ ರವಿಕಾಂತೇಗೌಡ, ಎಸ್ಪಿ ರಾಹುಲ್ ಕುಮಾರ್ ಸೇರಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.
Drugs ನಿಯಂತ್ರಣ ಶಾಲೆಗಳಲ್ಲಿ ಅತಿ ಅಗತ್ಯ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು, ಸಾರ್.