- ಆನ್ಲೈನ್ ಮೂಲಕ ಮತ್ತು ಭೌತಿಕವಾಗಿ ಅರ್ಜಿ ಸಲ್ಲಿಕೆಗೆ ಅವಕಾಶ
- ಯೋಜನೆಯ ಲಾಭ ಪಡೆಯಲಿವೆ 1.28 ಕೋಟಿ ಕುಟುಂಬಗಳು
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ವಿಳಂಬ ಆಗಲಿದೆ. ಆದರೆ, ಆಗಸ್ಟ್ 18ರ ಒಳಗೆ ಮನೆಯೊಡತಿಯ ಬ್ಯಾಂಕ್ ಖಾತೆಗೆ ಹಣ ಹಾಕುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆ ದತ್ತಾಶ್ರಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಆಗಸ್ಟ್ 18ರಂದು ಗೃಹಲಕ್ಷ್ಮಿಯರ ಖಾತೆಗೆ ಹಣ ಸಂದಾಯ ಮಾಡುವುದು ಖಚಿತ. ಆದರೆ, ಅರ್ಜಿ ಸಲ್ಲಿಕೆ ಮಾತ್ರ ಸ್ವಲ್ಪ ತಡವಾಗಲಿದೆ. ಆಗಸ್ಟ್ 17 ಅಥವಾ 18ಕ್ಕೆ ಖಂಡಿತ ಹಣ ಅವರ ಖಾತೆ ಸೇರುತ್ತೆ” ಎಂದು ಸ್ಪಷ್ಟಪಡಿಸಿದ್ದಾರೆ.
“ಗೃಹಲಕ್ಷ್ಮಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡುತ್ತಿರುವುದರಿಂದ ಅರ್ಜಿ ಸಲ್ಲಿಕೆ ವಿಳಂಬವಾಗುತ್ತಿದೆ ಅಷ್ಟೇ. ಯೋಜನೆ ಜನರಿಗೆ ಸರಳವಾಗಿ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಹಾಗಾಗಿ, ಅಧಿಕಾರಿಗಳಿಗೆ ಕೆಲವು ಬದಲಾವಣೆಗಳ ಕುರಿತು ಸೂಚನೆ ನೀಡಿದ್ದೇವೆ” ಎಂದು ವಿವರಿಸಿದರು.
“ಮೊದಲು ಗ್ರಾಮ ಒನ್ ಕರ್ನಾಟಕ, ಬೆಂಗಳೂರು ಒನ್‌ನಲ್ಲಿ ಇದರ ಸೇವೆ ಪಡೆಯಬಹುದಾಗಿತ್ತು. ಆದರೆ, ಈಗ ಬಾಪೂಜಿ ಸೇವಾ ಕೇಂದ್ರವನ್ನು ಸೇರಿಸಿದ್ದೇವೆ, ಗ್ರಾಮ ಪಂಚಾಯಿತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರ ಇದೆ. ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಆಸಕ್ತಿ ಇರುವವರನ್ನು ಪ್ರಜಾಪ್ರತಿನಿಧಿ ಮಾಡುತ್ತೇವೆ” ಎಂದು ತಿಳಿಸಿದರು.
“ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುವ ಮಹಿಳೆಯರು ಯಾವ ಖಾತೆಗೆ ಬೇಕೋ ಅದೇ ಬ್ಯಾಂಕ್ ಖಾತೆಗೆ ಹಣ ನೀಡುತ್ತೇವೆ. ನಿನ್ನೆ ಕೆಲವು ಬದಲಾವಣೆ ಮಾಡಿದ್ದೇವೆ. ಅಧಿಕಾರಿಗಳು ಈಗಾಗಲೇ ಸಾಫ್ಟ್ವೇರ್ ಸಿದ್ಧ ಮಾಡುತ್ತಿದ್ದಾರೆ. ಶೀಘ್ರದಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಕಾರ್ಯಕ್ಕೆ ಚಾಲನೆ ನೀಡುತ್ತೇವೆ” ಎಂದು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ನೀರು ಪೂರೈಕೆಗೆ ಆಗ್ರಹ; ಖಾಲಿ ಕೊಡ ಹಿಡಿದು ಗ್ರಾ.ಪಂ ಕಚೇರಿಗೆ ಮುತ್ತಿಗೆ
“ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಯನ್ನು ರಾಜ್ಯ ಸರ್ಕಾರ 6 ದಿನ ಮುಂದೂಡಿತ್ತು. ಜೂನ್ 16ರಿಂದ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ ಆಗಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಯೋಜನೆಯನ್ನು ಮುಂದೂಡಿದ್ದರು. 1 ಕೋಟಿ 28 ಲಕ್ಷ ಕುಟುಂಬಗಳ ಯಜಮಾನಿ ಪಡೆದುಕೊಳ್ಳುತ್ತಾರೆ. ಆದ್ದರಿಂದ ಆನ್ಲೈನ್ ಮೂಲಕ ಮತ್ತು ಭೌತಿಕವಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ” ಎಂದು ವಿವರಿಸಿದರು.