ಬಿಜೆಪಿ ಶಾಸಕ ಮುನಿರತ್ನ ತನ್ನ ಬೆಂಬಲಿಗರೊಂದಿಗೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ, ಜೊತೆಗೆ ಜೀವನಪರ್ಯಂತ ಗುಣಮುಖವಾಗದ ಕಾಯಿಲೆಯ ವೈರಸ್ ಇಂಜೆಕ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದು, ಬಿಜೆಪಿ ಶಾಸಕರ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಶಾಸಕ ಮುನಿರತ್ನ, ಅವರ ಬೆಂಬಲಿಗರಾದ ವಸಂತ, ಚನ್ನಕೇಶವ, ಕಮಲಾ ಹಾಗೂ ಅಪರಿಚಿತ ಸೇರಿ ಐವರ ವಿರುದ್ದ ಎಫ್‌ಐಆರ್ ದಾಖಲಾಗಿದೆ. ಇನ್ನು ಮಹಿಳೆ ಬಿಜೆಪಿ ಕಾರ್ಯಕರ್ತೆ, ರಾಜಕೀಯ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಬಿಜೆಪಿ ಶಾಸಕ ಮುನಿರತ್ನ ಮತ್ತೆ ಬಂಧನ
ಈ ಅತ್ಯಾಚಾರವು 2023ರಲ್ಲಿ ನಡೆದಿದೆ. ಆದರೆ ಆರೋಪಿಗಳ ಬೆದರಿಕೆಯಿಂದಾಗಿ ಮಹಿಳೆ ಈವರೆಗೂ ದೂರು ನೀಡಿರಲಿಲ್ಲ ಎಂದು ಮಹಿಳೆ ಪೊಲೀಸರಿಗೆ ತಿಳಿಸಿರುವುದಾಗಿ ವರದಿಯಾಗಿದೆ.
“ನಾನು ಈ ಹಿಂದೆ ಬಿಜೆಪಿ ಕಾರ್ಯಕರ್ತೆಯಾಗಿದ್ದೆ. ನನ್ನ ಗಂಡ ನನ್ನನ್ನು ಬಿಟ್ಟು ಹೋದ ಕಾರಣ ಇನ್ನೊಂದು ವಿವಾಹವಾಗಿದ್ದೆ. ಆದರೆ ನಾನು ವೇಶ್ಯಾವಾಟಿಕೆ ನಡೆಸಿತ್ತಿರುವುದಾಗಿ ಆರೋಪ ಮಾಡಿ ನನ್ನನ್ನು ಜೈಲಿಗೆ ಕಳುಹಿಸಿದ್ದರು” ಎಂದು ಮಹಿಳೆ ತಿಳಿಸಿದ್ದಾರೆ.
“ಜಾಮೀನು ಪಡೆದು ಹೊರಗೆ ಬಂದ ಬಳಿಕ ಮುನಿರತ್ನ ಬೆಂಬಲಿಗರು ಪ್ರಕರಣದ ಇತ್ಯರ್ಥಕ್ಕಾಗಿ ಕರೆದರು. ಅದನ್ನು ನಂಬಿ ಶಾಸಕರ ಕಚೇರಿಗೆ ಹೋದೆ. ಅಲ್ಲಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ನನ್ನ ಮುಖದ ಮೇಲೆ ಮುನಿರತ್ನ ಮೂತ್ರ ವಿಸರ್ಜಿಸಿದ್ದಾರೆ” ಎಂದು ದೂರಲಾಗಿದೆ.
“ಬಳಿಕ ದ್ರವವೊಂದನ್ನು ತೆಗೆದು ಇಂಜೆಕ್ಟ್ ಮಾಡಿದ್ದಾರೆ. ಜೀವನಪರ್ಯಂತ ನರಳುತ್ತೀಯಾ ಎಂದು ಬೆದರಿಕೆ ಹಾಕಿದ್ದಾರೆ. 2025ರ ಜನವರಿ 14ರಂದು ಹೊಟ್ಟೆನೋವಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗಿ ಪರಿಶೀಲಿಸಿದಾಗ ನನಗೆ ಇಡಿಆರ್ ವೈರಸ್ ಕಾಯಿಲೆ ಇರುವುದು ತಿಳಿದುಬಂದಿದೆ. ಇದು ವಾಸಿಯಾಗದ ಕಾಯಿಲೆ ಎಂದು ವೈದ್ಯರು ಹೇಳಿದ್ದಾರೆ” ಎಂದು ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.’
ಇದನ್ನು ಓದಿದ್ದೀರಾ? ಬಿಜೆಪಿ ಶಾಸಕ ಮುನಿರತ್ನಗೆ ಮೊಟ್ಟೆ ಏಟು!
ಇನ್ನು ಇಡಿಆರ್ ವೈರಸ್ ಬಗ್ಗೆ ತಿಳಿದು ಮಾನಸಿಕವಾಗಿ ನೊಂದು ಸಂತ್ರಸ್ತೆ ಮೇ 19ರಂದು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ರಕ್ಷಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯಿಂದ ಹೇಳಿಕೆ ಪಡೆದು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ಚೆಲುವರಾಜು ಅವರಿಂದ ಹಣ ಪಡೆದು ವಂಚಿಸಿದ ಮತ್ತು ಅವರ ಜಾತಿ ನಿಂದನೆ ಮಾಡಿದ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಕಾರಣ ಪ್ರಕರಣ ದಾಖಲಾಗಿದೆ. ಇದಾದ ಬಳಿಕ ಮುನಿರತ್ನ ಅವರ ಒಂದೊಂದೇ ಆಘಾತಕಾರಿ ಕೃತ್ಯಗಳು ಬಯಲಾಗಿದೆ.
ಎಚ್‌ಐವಿ ಸೋಂಕಿತರ ಮೂಲಕ ಹನಿಟ್ರ್ಯಾಪ್ ಮಾಡಿಸುವುದು, ಎಚ್‌ಐವಿ ಇಂಜೆಕ್ಟ್ ಮಾಡುವುದು ಮೊದಲಾದ ನೀಚ ಕೃತ್ಯಗಳನ್ನು ಎಸಗಿರುವುದರ ವಿರುದ್ಧ ಈಗಾಗಲೇ ತನಿಖೆ ನಡೆಯುತ್ತಿದೆ. 2024ರಲ್ಲಿ ಮುನಿರತ್ನರ ವಿರುದ್ಧ ಅತ್ಯಾಚಾರ, ಜಾತಿ ನಿಂದನೆ ಹಾಗೂ ಸುಲಿಗೆ, ಜೀವ ಬೆದರಿಕೆ ಸೇರಿದಂತೆ ನಾನಾ ಆರೋಪಗಳಡಿ ಐದು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.
