ಇಂದು ಪ್ರಕಟಗೊಂಡ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವುಗಳು ಸ್ವಾಭಾವಿಕ. ಪ್ರತಿಯೊಂದು ಚುನಾವಣಾ ಫಲಿತಾಂಶದಲ್ಲಿ ರಾಜಕೀಯ ಪಕ್ಷಗಳು ಕಲಿಯುವ ಪಾಠ ಇದೆ. ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ’ ಎಂದು ತಿಳಿಸಿದ್ದಾರೆ.
‘ನಾಲ್ಕು ರಾಜ್ಯಗಳ ಚುನಾವಣೆಗಳ ಪೈಕಿ ತೆಲಂಗಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಗೆಲುವು ಸಾಧಿಸಿದೆ. ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‌ಘಡಗಳಲ್ಲಿ ಹಿನ್ನಡೆ ಆಗಿದೆ. ಒಂದು ವರ್ಷದ ಹಿಂದೆ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ’ ಎಂದು ಸಿಎಂ ಹೇಳಿದರು.
‘ತೆಲಂಗಾಣ ನಮ್ಮ ನೆರೆಯ ರಾಜ್ಯವಾಗಿರುವ ಕಾರಣ ಅಲ್ಲಿನ ಗೆಲುವಿನಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸು ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ಶ್ರಮದ ದೊಡ್ಡ ಪಾತ್ರ ಇದೆ. ವರ್ಷದ ಹಿಂದೆ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಕಾರ್ಯಕ್ರಮ ಅಲ್ಲಿನ ಪಕ್ಷದ ಕಾರ್ಯಕರ್ತರನ್ನು ಇನ್ನಷ್ಟು ಹುರಿದುಂಬಿಸಿದ್ದು ನಿಜ’ ಎಂದು ಸಿದ್ದರಾಮಯ್ಯ ತಿಳಿಸಿದರು.
నిన్న, నేడు, రేపు మీరే నా బలం..
తెలంగాణ రక్షణ కై కదిలిన కాంగ్రెస్ దళం.#TelanganaElectionResults #CongressWinningTelangana#ByeByeKCR pic.twitter.com/kcH1jJt87b
— Revanth Reddy (@revanth_anumula) December 3, 2023
‘ಭಾರತ್ ಜೋಡೋ ಕಾರ್ಯಕ್ರಮದ ನಂತರ ಬಹಳ ವ್ಯವಸ್ಥಿತವಾದ ಪ್ರಚಾರ ನಡೆಯಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಮತ್ತು ನುಡಿದಂತೆ ನಡೆದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ತೆಲಂಗಾಣದ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಡುವಂತಾಯಿತು. ಬಿಜೆಪಿ, ಬಿಆರ್‌ಎಸ್ ಪಕ್ಷದ ಜೊತೆ ಒಳ ಒಪ್ಪಂದ ಮಾಡಿಕೊಂಡದ್ದು ಮತದಾರರು ಎರಡು ಪಕ್ಷಗಳ ಮೇಲೆ ಭರವಸೆ ಕಳೆದುಕೊಳ್ಳುವಂತೆ ಮಾಡಿತು. ಈ ಒಳ ಒಪ್ಪಂದದ ತಂತ್ರಗಾರಿಕೆಯನ್ನು ಕಾಂಗ್ರೆಸ್ ಪಕ್ಷ ಪ್ರಚಾರದ ಸಮಯದಲ್ಲಿ ಬಯಲು ಮಾಡಿದ್ದು ಕೂಡಾ ನಮ್ಮ ಗೆಲುವಿಗೆ ಕಾರಣ’ ಎಂದು ಅಭಿಪ್ರಾಯಿಸಿದರು.
‘ಉಳಿದ ಮೂರು ರಾಜ್ಯಗಳಲ್ಲಿ ಬಿಜೆಪಿಯ ಗೆಲುವಿನಲ್ಲಿ ಹಣ ಮತ್ತು ಕೋಮುವಾದಿ ರಾಜಕಾರಣದ ಪಾತ್ರ ಕೂಡಾ ಇದೆ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಅಕ್ರಮ ಗಳಿಕೆಯನ್ನು ನೀರಿನಂತೆ ಚೆಲ್ಲಿದೆ. ಅದರ ಜೊತೆ ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವ ತಮ್ಮ ಹಳೆಯ ಆಟವನ್ನು ಮುಂದುವರಿಸಿದೆ. ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಯೇ ಇಲ್ಲದೆ ಇರುವ ಕಾರಣಕ್ಕೆ ಬಿಜೆಪಿ ಅಲ್ಲಿ ಹೆಚ್ಚು ಹಣವನ್ನು ವ್ಯರ್ಥಮಾಡಲು ಹೋಗಿಲ್ಲ. ಅಲ್ಲಿ ಬಿಜೆಪಿ ಕೋಮುವಾದಿ ರಾಜಕಾರಣಕ್ಕೆ ಕೂಡಾ ಅವಕಾಶ ಇರಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Excerpts of today’s meeting in Kamareddy graced by Chief Minister of Karnataka shri @siddaramaiah garu for BC Declaration. #MaarpuKavaliCongressRavali#CongressVijayabheriYatra #CongressWinningTelangana#Congress6Guarantees#KCRNeverAgain #ByeByeKCR pic.twitter.com/a91pe61QXa
— Revanth Reddy (@revanth_anumula) November 10, 2023
‘ರಾಜಸ್ತಾನದಲ್ಲಿ ಸಾಮಾನ್ಯವಾಗಿ ಪ್ರತಿ ಚುನಾವಣೆಯಲ್ಲಿ ಪಕ್ಷವನ್ನು ಬದಲಾಯಿಸುವ ಕಾರಣದಿಂದಾಗಿ ಅಶೋಕ್ ಗೆಹ್ಲೋತ್ ಸರ್ಕಾರ ಒಳ್ಳೆಯ ಕೆಲಸ ಮಾಡಿದ್ದರೂ ಮರಳಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ರಾಜಸ್ತಾನ ಮತ್ತು ಛತ್ತೀಸ್‌ಘಡ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಆಡಳಿತ ವಿರೋಧಿ ಅಲೆ ಕೂಡಾ ಕಾರಣ. ಇತ್ತೀಚಿನ ವರ್ಷಗಳಲ್ಲಿ ರಾಜಸ್ತಾನದಲ್ಲಿ ಯಾವುದೇ ಆಡಳಿತ ಪಕ್ಷ ಮರಳಿ ಅಧಿಕಾರಕ್ಕೆ ಬಂದಿರುವ ಉದಾಹರಣೆ ಇಲ್ಲ. ಅಲ್ಲಿನ ಮತದಾರರು ಪ್ರತಿ ಚುನಾವಣೆಯಲ್ಲಿ ಆಡಳಿತ ಪಕ್ಷವನ್ನು ಸೋಲಿಸುತ್ತಾ ಬಂದಿದ್ದಾರೆ. ಈ ಚುನಾವಣೆಯಲ್ಲಿಯೂ ಆ ಪರಂಪರೆಯನ್ನು ಮುಂದುವರಿಸಿದ್ದಾರೆ’ ಎಂದು ಸಿಎಂ ತಿಳಿಸಿದರು.