ಜಿ20 ಔತಣಕೂಟಕ್ಕೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸದಿರುವ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಜಾಪ್ರಭುತ್ವ ಅಥವಾ ವಿರೋಧ ಪಕ್ಷವಿಲ್ಲದ ದೇಶಗಳಲ್ಲಿ ಮಾತ್ರ ಈ ರೀತಿ ಘಟನೆಗಳು ನಡೆಯಲು ಸಾಧ್ಯ ಎಂದು ಹೇಳಿದ್ದಾರೆ.
ಇಂಡಿಯಾ, ಅದು ಭಾರತ, ಪ್ರಜಾಪ್ರಭುತ್ವ ಮತ್ತು ವಿರೋಧವು ಅಸ್ತಿತ್ವದಲ್ಲಿಲ್ಲದ ಹಂತವನ್ನು ತಲುಪಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಚಿದಂಬರಂ ಹೇಳಿದರು.
“ಇತರ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದ ಸರ್ಕಾರವು ಮಾನ್ಯತೆ ಪಡೆದ ವಿರೋಧ ಪಕ್ಷದ ನಾಯಕನನ್ನು ವಿಶ್ವ ನಾಯಕರಿಗೆ ರಾಜ್ಯ ಔತಣಕೂಟಕ್ಕೆ ಆಹ್ವಾನಿಸುವುದಿಲ್ಲ ಎಂದು ನಾನು ಊಹಿಸಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವ ಅಥವಾ ವಿರೋಧ ಪಕ್ಷಗಳಿಲ್ಲದ ದೇಶಗಳಲ್ಲಿ ಮಾತ್ರ ಸಂಭವಿಸಬಹುದು” ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಅಧ್ಯಕ್ಷ ದ್ರೌಪದಿ ಮುರ್ಮು ಅವರು ವಿಶ್ವ ನಾಯಕರ ಜಿ20 ಶೃಂಗಸಭೆಯ ಭಾರತ್ ಮಂಟಪ ಸ್ಥಳದಲ್ಲಿ ಶನಿವಾರ ಔತಣಕೂಟವನ್ನು ಆಯೋಜಿಸಿದ್ದರು. ಈ ಸಮಾರಂಭಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಿರಲಿಲ್ಲ.
ಒನ್ ಮ್ಯಾನ್, ಒನ್ ಗವರ್ನಮೆಂಟ್, ಒನ್ ಬ್ಯುಸಿನೆಸ್ ಗ್ರೂಪ್: ಜೈರಾಮ್ ರಮೇಶ್ ಟೀಕೆ
ಅದಾನಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಿ20ರ ವಿಷಯ ವಸ್ತು ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಆದರೆ ಪ್ರಧಾನಿ ನರೇಂದ್ರ ಮೋದಿ ವಾಸ್ತವವಾಗಿ ‘ಒನ್ ಮ್ಯಾನ್, ಒಂದು ಗವರ್ನಮೆಂಟ್, ಒನ್ ಬ್ಯುಸಿನೆಸ್ ಗ್ರೂಪ್’ ಎಂದು ನಂಬಿರುವಂತೆ ತೋರುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 2023ರ ಜಿ20 ಶೃಂಗಸಭೆ ದೆಹಲಿಯಲ್ಲಿ ಆರಂಭವಾಗುತ್ತಿದ್ದಂತೆ, ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಕಡಿವಾಣ ಹಾಕಲು ಅಂತಾರಾಷ್ಟ್ರೀಯ ಸಮುದಾಯದ ಹಿಂದಿನ ಸಭೆಗಳಲ್ಲಿ ಮೋದಿ ಅವರು ನೀಡಿದ ಹಲವು ಉಪದೇಶಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜಿ20 ಶೃಂಗಸಭೆ | ಪ್ರಧಾನಿ ಮೋದಿ ಕುಳಿತ ಸ್ಥಳದಲ್ಲಿ ಪ್ರತ್ಯಕ್ಷಗೊಂಡ ‘ಭಾರತ್’ ಹೆಸರು
2018 ರ ಬ್ಯೂನಸ್ ಐರಿಸ್ ಜಿ20 ಶೃಂಗಸಭೆಯಲ್ಲಿ ಮೋದಿ ಅವರು ‘ಪರಾರಿಯಾಗಿರುವ ಆರ್ಥಿಕ ಅಪರಾಧಗಳ ವಿರುದ್ಧ ಕ್ರಮ ಮತ್ತು ಆಸ್ತಿ ಮುಟ್ಟುಗೋಲಿಗಾಗಿ’ ಒಂಬತ್ತು ಅಂಶಗಳ ಕಾರ್ಯಸೂಚಿಯನ್ನು ಮಂಡಿಸಿದರು. ಆದರೆ ಪ್ರಸ್ತುತ ಸಂದರ್ಭದಲ್ಲಿ ಉನ್ನತ ಮಟ್ಟದ ಭ್ರಷ್ಟಾಚಾರ ಮತ್ತು ಆರ್ಥಿಕ ಅಪರಾಧಗಳಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಗಂಭೀರ ಕ್ರಮ ಜರುಗಿಸದಿದ್ದರೆ ಪ್ರಧಾನಮಂತ್ರಿಯ ನಿರ್ಲಜ್ಜತನ ನಗು ತರಿಸುತ್ತದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ತನ್ನ ಆಪ್ತ ಮಿತ್ರರಾದ ಅದಾನಿಗಳಿಗೆ ಬಂದರುಗಳು, ವಿಮಾನ ನಿಲ್ದಾಣಗಳು, ವಿದ್ಯುತ್ ಮತ್ತು ರಸ್ತೆಗಳಂತಹ ನಿರ್ಣಾಯಕ ವಲಯಗಳಲ್ಲಿ ತನ್ನ ಬಳಿಯಿರುವ ಎಲ್ಲ ಅಧಿಕಾರವನ್ನು ಬಳಸಿಕೊಂಡು ಅನುಕೂಲ ಮಾಡಿಕೊಟ್ಟಿದ್ದಾರೆ. ಜೊತೆಗೆ ಯಾವುದೇ ರೀತಿಯಲ್ಲೂ ವಂಚನೆಯ ಹಗರಣ ಹೊರಗೆ ಬಾರದಂತೆ ಸೆಬಿ, ಸಿಐಡಿ, ಇಡಿ ಮುಂತಾದ ತನಿಖಾ ಸಂಸ್ಥೆಗಳಿಗೆ ವ್ಯವಸ್ಥಿತವಾಗಿ ನಿರ್ಬಂಧಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
ಮೋದಿಯವರ ನಿಕಟ ಸ್ನೇಹಿತರಿಗೆ ತೆರಿಗೆ ಸ್ವರ್ಗಗಳು ಸುರಕ್ಷಿತವಾಗಿದೆ ಮತ್ತು ಅವರು ಮಿತಿಮೀರಿದ ಬ್ಯಾಂಕಿಂಗ್ ಗೌಪ್ಯತೆ ಮತ್ತು ಸಂಕೀರ್ಣ ಅಂತಾರಾಷ್ಟ್ರೀಯ ನಿಯಮಗಳ ರಕ್ಷಣೆಯನ್ನು ಆನಂದಿಸುವುದನ್ನು ಮುಂದುವರಿಸುತ್ತಿದ್ದಾರೆ ಎಂದು ಜೈರಾಮ್ ರಮೇಶ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಚೋಕ್ಸಿ ಮತ್ತು ವಿಜಯ್ ಮಲ್ಯ ಅವರಂತಹ ಆರ್ಥಿಕ ಅಪರಾಧಿಗಳನ್ನು ದೇಶದಿಂದ ಪಲಾಯನ ಮಾಡಲು ಬಿಜೆಪಿ ಅನುಮತಿಸಿದಂತೆಯೇ ಪ್ರಧಾನಿಯವರ ‘ಒಂಬತ್ತು ಅಂಶಗಳ ಅಜೆಂಡಾ’ ನಗೆಪಾಟಲಿಗೀಡಾಗಿದೆ. ಇತ್ತೀಚಿನ ವರ್ಷಗಳಲ್ಲಿ 72 ಪ್ರಮುಖ ಆರ್ಥಿಕ ಅಪರಾಧಿಗಳ ಪೈಕಿ ಸರ್ಕಾರ ಇಬ್ಬರನ್ನು ಮಾತ್ರ ಮರಳಿ ಕರೆತರಲು ಸಾಧ್ಯವಾಗಿದೆ ಎಂದು ಆರೋಪಿಸಿದರು.
ಇವೆಲ್ಲವನ್ನು ಗಮನಿಸಿದರೆ ಜಿ20 ಘೋಷಣೆ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ದ ಬದಲು ಪ್ರಧಾನಿಯವರು ನಿಜವಾಗಿ ‘ಒನ್ ಮ್ಯಾನ್, ಒನ್ ಗವರ್ನಮೆಂಟ್, ಒನ್ ಬ್ಯುಸಿನೆಸ್ ಗ್ರೂಪ್’ ಎಂದು ನಂಬಿರುವಂತೆ ತೋರುತ್ತಿದೆ ಎಂದು ಜೈರಾಮ್ ರಮೇಶ್ ಕಿಡಿಕಾರಿದ್ದಾರೆ.