ಆಪರೇಷನ್ ಕಮಲ | ಕಾಂಗ್ರೆಸ್‌ ಶಾಸಕರಿಗೆ 50 ಕೋಟಿ ಆಫರ್; ಬಿಜೆಪಿ ಅಧಿಕಾರ ದಾಹಕ್ಕೆ ರಾಜ್ಯಗಳು ಬಲಿ!

Date:

Advertisements
50 ಶಾಸಕರು ಬಿಜೆಪಿಗೆ ಹೋದರೂ, ಅವರೆಲ್ಲರೂ ಅನರ್ಹರಾಗುತ್ತಾರೆ. ಆ ಎಲ್ಲ ಕ್ಷೇತ್ರಗಳಿಗೆ ಮತ್ತೆ ಉಪಚುನಾವಣೆ ನಡೆಯಬೇಕಾಗುತ್ತದೆ. ಆ ಚುನಾವಣೆಯಲ್ಲಿ ಬಹುತೇಕ ಎಲ್ಲ ಸ್ಥಾನಗಳನ್ನು ಬಿಜೆಪಿಯೇ ಗೆಲ್ಲಬೇಕಾಗುತ್ತದೆ. ಇದೆಲ್ಲವೂ ಸಾಧ್ಯವೇ? ಹಾಗಿದ್ದರೂ, ಬಿಜೆಪಿ ಇಂತಹ ಪ್ರಹಸನಕ್ಕೆ ಕೈಹಾಕುತ್ತಿದೆ. ರಾಜ್ಯ ರಾಜಕಾರಣ ಮತ್ತು ಸರ್ಕಾರವನ್ನು ಅಭದ್ರಗೊಳಿಸಲು ಹವಣಿಸುತ್ತಿದೆ.

ಮುಂಬಾಗಿಲಿನಿಂದ ಬಂದರೂ ಸರಿ, ಹಿಂಬಾಗಿಲಿನಿಂದ ಬಂದರೂ ಸರಿಯೇ. ಒಟ್ಟಿನಲ್ಲಿ ಅಧಿಕಾರದಲ್ಲಿರಬೇಕು. ಸುಳ್ಳು ಭರವಸೆ, ಪೊಳ್ಳು ಅಭಿವೃದ್ಧಿ ಹೆಸರಿನಲ್ಲಿ ಆಡಳಿತ ನಡೆಸಬೇಕು. ಸ್ವಾರ್ಥ ಸಾಧನೆ ಮಾಡಿಕೊಳ್ಳಬೇಕು– ಇದು ಬಿಜೆಪಿಯ ಪರಮ (ದುರ್)ಉದ್ದೇಶ. ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಆಪರೇ‍ಷನ್ ಕಮಲವೆಂಬ ಅಸಾಂವಿಧಾನಿಕ (ಕು)ತಂತ್ರದ ಮೂಲಕ ಬಿಜೆಪಿ ಅಧಿಕಾರಕ್ಕೇರಿದೆ. ಅದಕ್ಕಾಗಿ, ಹಲವು ಸ್ಥಳೀಯ ಪಕ್ಷಗಳನ್ನು ಅಳಿವಿನ ಅಂಚಿಗೆ ದೂಡಿದೆ. ನಾನಾ ಪಕ್ಷಗಳನ್ನು ಒಡೆದು, ಇಬ್ಬಾಗಿಸಿದೆ.

ಈಗ ಮತ್ತೆ ಕರ್ನಾಟಕದಲ್ಲಿ ಶಾಸಕರ ಕುದುರೆ ವ್ಯಾಪಾರ ಸದ್ದು ಮಾಡುತ್ತಿದೆ. ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಕಾಂಗ್ರೆಸ್‌ ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸುತ್ತಿದೆ. ಕಾಂಗ್ರೆಸ್‌ನ 50 ಶಾಸಕರಿಗೆ ತಲಾ 50 ಕೋಟಿ ರೂ.ಗಳ ಆಮಿಷವೊಡ್ಡಿದೆ’ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪವನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೂಡ ಪುನರುಚ್ಚರಿಸಿದ್ದಾರೆ. ತಮ್ಮ 50 ಶಾಸಕರನ್ನು ಖರೀದಿಸಲು ಬಿಜೆಪಿಗರು ಹವಣಿಸುತ್ತಿದ್ದಾರೆ. ಆದರೆ, ನಮ್ಮ ಶಾಸಕರು ಆಮಿಷಕ್ಕೆ ಬಲಿಯಾಗಿಲ್ಲ ಎಂದಿದ್ದಾರೆ.

Advertisements

ಅಂದರೆ, 50 ಶಾಸಕರನ್ನು ಖರೀದಿಸಲು ಬಿಜೆಪಿಗೆ 2,500 ಕೋಟಿ ರೂ. ಹಣಬೇಕು. ಈ ಹಣ ಎಲ್ಲಿಂದ ಬರುತ್ತದೆ, ಯಾರು ಕೊಡುತ್ತಾರೆ? ಅಂದಹಾಗೆ, ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ 5,000 ಕೋಟಿ ರೂ. ವಿಶೇಷ ಅನುದಾನ ನೀಡಬೇಕೆಂದು 15ನೇ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಆದರೆ, ಕೇಂದ್ರ ಅದನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿರುವ ಒಂದು ರಾಜ್ಯಕ್ಕೆ ವಿಶೇಷ ಅನುದಾನದಡಿ ನೀಡಬೇಕಾದ ಮೊತ್ತದ ಅರ್ಧದಷ್ಟು ಹಣವನ್ನು 50 ಶಾಸಕರ ಖರೀದಿಗೆ ಬಿಜೆಪಿ ಸುರಿಯುತ್ತದೆ ಎಂದಾದರೆ, ಆ ಹಣ ಯಾರದು? ಸಿದ್ದರಾಮಯ್ಯ ಅವರು ಕೇಳುವಂತೆ ರಾಜ್ಯದ ಬಿಜೆಪಿ ನಾಯಕರಾದ ಯಡಿಯೂರಪ್ಪ, ಬೊಮ್ಮಾಯಿ, ಆರ್ ಅಶೋಕ್ ಪ್ರಿಂಟ್ ಹಾಕಿದ್ದಾರಾ/ಹಾಕುತ್ತಿದ್ದಾರಾ?

ಪ್ರಸ್ತುತ, ಭಾರತದಲ್ಲಿ ಬಿಜೆಪಿ ಮತ್ತು ಅದರ ಮಿತ್ರಗಳು 20 ರಾಜ್ಯಗಳಲ್ಲಿ ಅಧಿಕಾರದಲ್ಲಿವೆ. ಅವುಗಳ ಪೈಕಿ 4 ರಾಜ್ಯಗಳಲ್ಲಿ ಹಿಂಬಾಗಿಲಿನಿಂದ ಸರ್ಕಾರ ರಚಿಸಿದೆ. ಮಾತ್ರವಲ್ಲದೆ, ಈ ಹಿಂದೆ ಇದೇ ರೀತಿ ಅಸಂವಿಧಾನಿಕವಾಗಿ ಸರ್ಕಾರ ರಚಿಸಿದ್ದ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. ಅದರಲ್ಲಿ ಕರ್ನಾಟಕವೂ ಒಂದು.

ಬಿಜೆಪಿಗೆ ಆಪರೇಷನ್ ಕಮಲ ಚಾಳಿ ನಿನ್ನೆ-ಮೊನ್ನೆ ಬಂದಿದ್ದಲ್ಲ. 2008ರಲ್ಲಿಯೇ ಆಪರೇಷನ್ ಕಮಲವನ್ನು ಬಿಜೆಪಿ ಆರಂಭಿಸಿತ್ತು. 2008ರಲ್ಲಿ ಕರ್ನಾಟಕದಲ್ಲಿ ಸ್ವಂತ ಬಲವಿಲ್ಲದೆ, ಬಹುಮತಕ್ಕಾಗಿ ಸ್ವತಂತ್ರ ಶಾಸಕರ ಬೆಂಬಲ ಪಡೆದು ಬಿಜೆಪಿ ಸರ್ಕಾರ ರಚಿಸಿತ್ತು. ಅದಾದ ಬಳಿಕ, ಏಳು- ಕಾಂಗ್ರೆಸ್‌(4), ಜೆಡಿಎಸ್‌(3) ಶಾಸಕರನ್ನು ಖರೀದಿಸಿ, ತನ್ನ ಸರ್ಕಾರವನ್ನು ಸುಭದ್ರ ಸರ್ಕಾರವನ್ನಾಗಿಸಿತ್ತು.

ಅದಾದ ಬಳಿಕ, 2019ರಲ್ಲಿ ಗೋವಾದಲ್ಲಿ ಆಪರೇಷನ್ ಕಮಲ ನಡೆಸಿದ ಬಿಜೆಪಿ, ಕಾಂಗ್ರೆಸ್‌ನ 14 ಶಾಸಕರನ್ನು ಬಿಜೆಪಿಗೆ ಸೇರಿಸಿಕೊಂಡು ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೇರಿತು. ಸಾಲದೆಂಬಂತೆ 2022ರಲ್ಲಿ ಮತ್ತೆ ಆಪರೇಷನ್ ಕಮಲ ನಡೆಸಿ, ಕಾಂಗ್ರೆಸ್‌ 8 ಶಾಸಕರನ್ನು ಸೆಳೆದುಕೊಂಡಿತು. ಗೋವಾದಲ್ಲಿ ಪ್ರಬಲ ವಿಪಕ್ಷವೇ ಇಲ್ಲದಂತೆ ಮಾಡಿತು.

ಇನ್ನು, 2019ರಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಆಪರೇಷನ್ ಕಮಲ ನಡೆಸಿದ ಬಿಜೆಪಿ, ಆಡಳಿತದಲ್ಲಿದ್ದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಉರುಳಿಸಿತು. 17 ಮಂದಿ- ಕಾಂಗ್ರೆಸ್‌(15), ಜೆಡಿಎಸ್‌(2) ಶಾಸಕರನ್ನು ಮುಂಬೈಗೆ ಹೊತ್ತೊಯ್ಯಿತು. (ಕು)ತಂತ್ರದಿಂದ ಸರ್ಕಾರ ರಚಿಸಿತು. ಆ 17 ಮಂದಿಯೂ ಅನರ್ಹರಾಗಿ, ಬಿಜೆಪಿ ಸೇರಿ, ಉಪಚುನಾವಣೆಯಲ್ಲಿ ಗೆದ್ದರು.

2020ರಲ್ಲಿ ಮಧ್ಯಪ್ರದೇಶದ ಸುಭದ್ರ ಕಾಂಗ್ರೆಸ್‌ ಸರ್ಕಾರವನ್ನು ಕೊರೋನ ಆಕ್ರಮಣದ ನಡುವೆಯೂ ಬಿಜೆಪಿ ಉರುಳಿಸಿತು. ಅಲ್ಲಿ, ಕಾಂಗ್ರೆಸ್‌ನ ಪ್ರಭಾವಿ ನಾಯಕನಾಗಿದ್ದ ಜೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ 22 ಮಂದಿಯನ್ನು ಬಿಜೆಪಿ ದೆಹಲಿಗೆ ಪಲಾಯನ ಮಾಡಿಸಿತು. ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಿತು.

ಬಿಜೆಪಿಯ ಅಧಿಕಾರದಾಹಿ ರಾಜಕಾರಣದ ಗಂಭೀರ ಪರಿಣಾಮ ಎದುರಿಸಿದ್ದು ಮಹಾರಾಷ್ಟ್ರ. ಬಿಜೆಪಿ ಕುತಂತ್ರಕ್ಕೆ ಅಲ್ಲಿನ ಎರಡು ಪ್ರಾದೇಶಿಕ ಪಕ್ಷಗಳೇ ಒಡೆದು ಇಬ್ಬಾಗವಾದವು. 2022ರಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಕಾಂಗ್ರೆಸ್‌, ಶಿವಸೇನೆ, ಎನ್‌ಸಿಪಿ) ಸರ್ಕಾರವನ್ನು ಬಿಜೆಪಿ ಉರುಳಿಸಿತು. ಏಕನಾಥ್ ಶಿಂದೆ ನೇತೃತ್ವದಲ್ಲಿ ಶಿವಸೇನೆಯನ್ನೂ, ಅಜಿತ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿಯನ್ನೂ ಬಿಜೆಪಿ ಇಬ್ಭಾಗಿಸಿತು. ಶಿವಸೇನೆಯ ಶಿಂದೆ ಬಣ, ಎನ್‌ಸಿಪಿಯ ಅಜಿತ್ ಬಣವನ್ನು ಸೇರಿಸಿಕೊಂಡು ‘ಮಹಾಯುತಿ’ ಮೈತ್ರಿ ಸರ್ಕಾರ ರಚಿಸಿತು. ಶಿಂದೆಯನ್ನು ಮುಖ್ಯಮಂತ್ರಿ ಮಾಡಿ, ಅಜಿತ್ ಪವಾರ್‌ರನ್ನು ಉಪಮುಖ್ಯಮಂತ್ರಿ ಮಾಡಿತು.

ಇನ್ನು, ‘ಆರು ಕೊಟ್ಟರೆ ಅಣ್ಣನ ಕಡೆಗೆ, ಮೂರು ಕೊಟ್ಟರೆ ತಮ್ಮನ ಕಡೆಗೆ’ ಎಂಬಂತೆ ತನ್ನ ಸ್ವಹಿತಾಸಕ್ತಿಯನ್ನೇ ನೋಡುವ ಬಿಹಾರದ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ 2022ರಲ್ಲಿ ಕಾಂಗ್ರೆಸ್‌, ಆರ್‌ಜೆಡಿ ಜೊತೆಗೂಡಿ ಸರ್ಕಾರ ರಚಿಸಿದ್ದರು. 2024ರ ಲೋಕಸಭಾ ಚುನಾವಣೆಯ ವೇಳೆಗೆ ನಿತೀಶ್‌ಗೆ ಬಿಜೆಪಿ ಮತ್ತೆ ಗಾಳ ಹಾಕಿತು. ಜೆಡಿಯು, ಕಾಂಗ್ರೆಸ್‌, ಆರ್‌ಜೆಡಿ ಮೈತ್ರಿ ಸರ್ಕಾರವನ್ನು ಉರುಳಿಸಿತು. ನಿತೀಶ್‌ರನ್ನು ಜೊತೆ ಸೇರಿಸಿಕೊಂಡು ಮತ್ತೆ ಸರ್ಕಾರ ರಚಿಸಿತು.

ಈ ವರದಿ ಓದಿದ್ದೀರಾ?: ವಕ್ಫ್‌ ವಿವಾದದಲ್ಲಿ ಜೆಪಿಸಿ | ಹಿಂದು ವಿರೋಧಿ, ರೈತ ವಿರೋಧಿ ನೀತಿಗೇಕೆ ಬಿಜೆಪಿ ಅಂಟಿಕೊಳ್ಳುತ್ತಿದೆ?

ಬಿಜೆಪಿ ಸರ್ಕಾರವನ್ನೇ ಉರುಳಿಸಿದ ರಾಜ್ಯಗಳಿವು. ಇವಲ್ಲದೆ, ಹಲವಾರು ರಾಜ್ಯಗಳಲ್ಲಿ ಬಿಜೆಪಿ ನಿರಂತರವಾಗಿ ‘ಆಪರೇಷನ್ ಕಮಲ’ದ ದಾಳ ಪ್ರಯೋಗಿಸುತ್ತಲೇ ಇದೆ. ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬಲಗೈ ಭಂಟನಂತಿದ್ದ ಸುವೇಂದು ಅಧಿಕಾರಿಯನ್ನೇ ಬಿಜೆಪಿ ತನ್ನತ್ತ ಸೆಳೆದುಕೊಂಡಿತು. ಮಮತಾ ವಿರುದ್ಧದ ರಾಜಕಾರಣದಲ್ಲಿ ಸುವೇಂದು ಅಧಿಕಾರಿಯೇ ಬಿಜೆಪಿಗೆ ಪ್ರಬಲ ಅಸ್ತ್ರವಾದರು.

ರಾಜಸ್ತಾನದಲ್ಲೂ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಲು 2021ರಲ್ಲಿ ಬಿಜೆಪಿ ಭಾರೀ ಪ್ರಯತ್ನ ಹಾಕಿತು. ಆದರೆ, ಕಾಂಗ್ರೆಸ್‌ ನಾಯಕರ ತಂತ್ರಗಳ ಕಾರಣಕ್ಕಾಗಿ ರಾಜಸ್ತಾನದ ಕಾಂಗ್ರೆಸ್‌ ಸರ್ಕಾರ ಉಳಿದುಕೊಂಡಿತು.

ಇದೀಗ, ಕರ್ನಾಟಕದಲ್ಲಿ 136 ಸ್ಥಾನಗಳೊಂದಿಗೆ ಭದ್ರವಾಗಿರುವ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಲು ಬಿಜೆಪಿ ಮತ್ತೆ ಯತ್ನಿಸುತ್ತಿದೆ. 224 ಸ್ಥಾನಗಳ ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಕೇವಲ 66 ಸ್ಥಾನಗಳನ್ನು ಮಾತ್ರವೇ ಹೊಂದಿದೆ. ಅದರ ಮಿತ್ರ ಪಕ್ಷ ಜೆಡಿಎಸ್ 18 ಸ್ಥಾನಗಳನ್ನು ಹೊಂದಿದೆ. ಇಟ್ಟು 84 ಶಾಸಕರನ್ನು ಬಿಜೆಪಿ-ಜೆಡಿಎಸ್‌ ಮೈತ್ರಿ ಹೊಂದಿದೆ. ಈ ಮೈತ್ರಿ ಅಧಿಕಾರಕ್ಕೇರಲು ಇನ್ನೂ ಕನಿಷ್ಠ 30 ಶಾಸಕರು ಬೇಕು. ಬಿಜೆಪಿಯೇ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು 50 ಶಾಸಕರೇ ಬೇಕು.  

ಇಷ್ಟು ದೊಡ್ಡ ಸಂಖ್ಯೆಯಲ್ಲಿ ಒಂದು ಪಕ್ಷದ ಶಾಸಕರನ್ನು ಖರೀದಿಸಿ, ಅಧಿಕಾರಕ್ಕೇರುವುದು ಸುಲಭದ ಮಾತಲ್ಲ. 50 ಶಾಸಕರು ಬಿಜೆಪಿಗೆ ಹೋದರೂ, ಅವರೆಲ್ಲರೂ ಅನರ್ಹರಾಗುತ್ತಾರೆ. ಆ ಎಲ್ಲ ಕ್ಷೇತ್ರಗಳಿಗೆ ಮತ್ತೆ ಉಪಚುನಾವಣೆ ನಡೆಯಬೇಕಾಗುತ್ತದೆ. ಆ ಚುನಾವಣೆಯಲ್ಲಿ ಬಹುತೇಕ ಎಲ್ಲ ಸ್ಥಾನಗಳನ್ನು ಬಿಜೆಪಿಯೇ ಗೆಲ್ಲಬೇಕಾಗುತ್ತದೆ. ಇದೆಲ್ಲವೂ ಸಾಧ್ಯವೇ? ಹಾಗಿದ್ದರೂ, ಬಿಜೆಪಿ ಇಂತಹ ಪ್ರಹಸನಕ್ಕೆ ಕೈಹಾಕುತ್ತಿದೆ. ರಾಜ್ಯ ರಾಜಕಾರಣ ಮತ್ತು ಸರ್ಕಾರವನ್ನು ಅಭದ್ರಗೊಳಿಸಲು ಹವಣಿಸುತ್ತಿದೆ. ಇದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಬಿಜೆಪಿಯ ಅಧಿಕಾರ ದಾಹಕ್ಕೆ ಎಳ್ಳು-ನೀರು ಬಿಡಲಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

Download Eedina App Android / iOS

X