ಆಪರೇಷನ್ ಸಿಂಧೂರ | ವಿಪಕ್ಷಗಳ ಗಂಭೀರ ಪ್ರಶ್ನೆಗಳಿಗೆ ಮೋದಿ ನಿರುತ್ತರ!

Date:

Advertisements
ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿನ ವೈಫಲ್ಯ, ಕಾರಣಗಳು ಹಾಗೂ ಗಂಭೀರ ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಮಾತನಾಡಲಿಲ್ಲ. ಬದಲಾಗಿ, ಕಳೆದ 11 ವರ್ಷಗಳಿಂದ ಸಂಸತ್‌ನಲ್ಲಿ ಮಾಡುತ್ತಿರುವಂತೆಯೇ, ಈ ಬಾರಿಯೂ ಕಾಂಗ್ರೆಸ್ ಮತ್ತು ನೆಹರೂ ಅವರನ್ನು ಪದೇ ಪದೇ ಟೀಕಿಸಿದರು.

2025ರ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ನಂತರದಲ್ಲಿ ನಡೆದ ಆಪರೇಷನ್ ಸಿಂಧೂರ ಕುರಿತು ಸಂಸತ್‌ ಅಧಿವೇಶನದಲ್ಲಿ ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಎರಡು ದಿನಗಳ ಕಾಲ ನಡೆದ ಚರ್ಚೆಯಲ್ಲಿ ವಿಪಕ್ಷಗಳ ಸದಸ್ಯರು ಹಲವಾರು ಗಂಭೀರ ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಉತ್ತರ ಬಯಸಿದ್ದಾರೆ. ಆದರೆ, ವಿಪಕ್ಷಗಳ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಆದಿಯಾಗಿ ಸರ್ಕಾರದ ಸಚಿವರು ಸಮರ್ಪಕ ಉತ್ತರ ನೀಡುವಲ್ಲಿ ವಿಫಲರಾಗಿದ್ದಾರೆ. ಹಾರಿಕೆಯ ಉತ್ತರಗಳು ಮತ್ತು ದೀರ್ಘ ಭಾಷಣಗಳನ್ನು ಮಾಡಿ, ಚರ್ಚೆಯಿಂದ ನುಣುಚಿಕೊಂಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಸೋಮವಾರ ಮತ್ತು ಮಂಗಳವಾರ ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 16 ಗಂಟೆಗಳ ಕಾಲ ಚರ್ಚೆ ನಡೆದಿದೆ. ಲೋಕಸಭೆಯಲ್ಲಿ ಮೊದಲಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖಾರ್ಗೆ ಚರ್ಚೆ ಆರಂಭಿಸಿದರು. ಆದರೆ, ಗಂಭೀರ ಚರ್ಚೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳದೇ ಇರುವ ಬಗ್ಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು. ಚರ್ಚೆಯ ಸಂದರ್ಭದಲ್ಲಿ, ಸರ್ಕಾರವು ಕಾರ್ಯಾಚರಣೆಯ ಯಶಸ್ಸನ್ನು ಎತ್ತಿಹಿಡಿದರೆ, ವಿಪಕ್ಷಗಳು ಭದ್ರತಾ ವೈಫಲ್ಯಗಳು, ವಿದೇಶಾಂಗ ಒತ್ತಡಗಳು ಹಾಗೂ ಸರ್ಕಾರದ ರಾಜಕೀಯ ಉದ್ದೇಶಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದವು.

ಚರ್ಚೆ ವೇಳೆ, ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಭಾರತದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಕುರಿತು ಚರ್ಚೆಗಳು ನಡೆದಿವೆ. ಮೇ 7ರಂದು ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (PoK) 9 ಭಯೋತ್ಪಾದಕ ನೆಲೆಗಳ ಮೇಲೆ ಭಾರತ ದಾಳಿ ಮಾಡಿದ್ದು, 11 ಪಾಕಿಸ್ತಾನಿ ವಾಯುನೆಲೆಗಳು ಮತ್ತು ರಾಡಾರ್ ಕೇಂದ್ರಗಳನ್ನು ಧ್ವಂಸಗೊಳಿಸಲಾಗಿದೆ. ಇದು ಭಾರತವು ‘ಯುದ್ಧವನ್ನು ಆರಂಭಿಸುವ ಉದ್ದೇಶ ಹೊಂದಿಲ್ಲ. ಆದರೆ, ಭಯೋತ್ಪಾದನೆ ಕುರಿತು ಶೂನ್ಯ ಸಹಿಷ್ಣುತೆ ಹೊಂದಿದೆ’ ಎಂಬ ಸಂದೇಶವನ್ನು ನೀಡಲು ನಡೆಸಿದ ಕಾರ್ಯಾಚರಣೆಯಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದಾಗ್ಯೂ, ಭಾರತ-ಪಾಕ್ ಕದನ ವಿರಾಮದಲ್ಲಿ ತಮ್ಮದೇ ಪ್ರಮುಖ ಪಾತ್ರವೆಂದು ಹೇಳಿಕೊಂಡಿರುವ ಟ್ರಂಪ್‌ ಹೇಳಿಕೆಯನ್ನು ಸರ್ಕಾರ ಅಲ್ಲಗಳೆದಿಲ್ಲ. ಬದಲಾಗಿ, ಹಾರಿಕೆಯ ಉತ್ತರ ನೀಡಿ, ಜಾರಿಕೊಂಡಿದೆ.

Advertisements

ಆಪರೇಷನ್ ಸಿಂಧೂರ ಮತ್ತು ನಂತರದ ಬೆಳವಣಿಗೆಗಳ ಸಂಬಂಧ ವಿಪಕ್ಷಗಳು ಗಂಭೀರ ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟವು.

ಭದ್ರತಾ ಲೋಪಗಳ ಬಗ್ಗೆ ಪ್ರಶ್ನಿಸಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ”ಪಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರು ಭಾರತಕ್ಕೆ ಹೇಗೆ ಪ್ರವೇಶಿಸಿದರು. 26 ನಾಗರಿಕರ ಸಾವಿಗೆ ಕಾರಣವಾದ ಭದ್ರತಾ ವೈಫಲ್ಯಗಳ ಬಗ್ಗೆ ಯಾವ ತನಿಖೆ ನಡೆದಿದೆ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ. ಆದರೆ, ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸರ್ಕಾರವು ದಾಳಿಯ ಹೊಣೆಗಾರಿಕೆಯನ್ನು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ಗೆ ಮೇಲೆ ಹೇರುವ ಮೂಲಕ ತಪ್ಪಿಸಿಕೊಳ್ಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕದನ ವಿರಾಮದ ವಿಚಾರವಾಗಿ ತನ್ನ ಬೆನ್ನು ತಟ್ಟಿಕೊಳ್ಳುತ್ತಿರುವ ಟ್ರಂಪ್‌ ಕುರಿತು ಪ್ರಶ್ನಿಸಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ”ಪ್ರಧಾನಿ ಮೋದಿ ಅವರು ಭಾರತ-ಪಾಕ್ ನಡುವೆ ಶಾಂತಿ ಒಪ್ಪಂದವನ್ನು ಟ್ರಂಪ್ ಮಾಡಿಸಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ಇದೇ ಸತ್ಯ. ಇಡೀ ಜಗತ್ತಿಗೆ ಇದು ಗೊತ್ತಿದೆ. ಆದರೆ, ಮೋದಿ ಮೌನವಾಗಿದ್ದಾರೆ” ಎಂದು ಛೇಡಿಸಿದರು.

ಜೊತೆಗೆ, ”ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತೀಯ ಯುದ್ಧವಿಮಾನಗಳು (ಎರಡು) ನಾಶವಾಗಿರುವುದು ಸತ್ಯವೇ? ಈ ಬಗ್ಗೆ ಸರ್ಕಾರ ಯಾಕೆ ಪಾರದರ್ಶಕವಾಗಿಲ್ಲ. ಸತ್ಯವನ್ನು ಯಾಕೆ ಹೇಳುತ್ತಿಲ್ಲ” ಎಂದು ಪ್ರಶ್ನಿಸಿದರು.

ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಮಯ ಮತ್ತು ಉದ್ದೇಶಗಳನ್ನು ಪ್ರಶ್ನಿಸಿದ ಕಾಂಗ್ರೆಸ್ ಸಂಸದ ಮಾನಿಕಂ ತಾಗೋರ್ ಮತ್ತು ಪ್ರಮೋದ್ ತಿವಾರಿ, ”ಜೂನ್ 28ರಂದು ನಡೆದ 2ನೇ ಕಾರ್ಯಾಚರಣೆ ‘ಆಪರೇಷನ್ ಮಹಾದೇವ್’ ಯಾಕೆ ‘ಸಾವನ್ ಕಾ ಸೋಮವಾರ’ ದಿನದಂದು ನಡೆಯಿತು. ಇದರ ಹಿಂದಿನ ರಾಜಕೀಯ ಉದ್ದೇಶವೇನು” ಎಂದು ಕೇಳಿದರು.

ಡಿಎಂಕೆ ಸಂಸದ ಎ. ರಾಜಾ, ”ಸರ್ಕಾರವು ರಾಷ್ಟ್ರೀಯ ಭದ್ರತೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಈ ಕಾರ್ಯಾಚರಣೆಯಿಂದ ಪ್ರಧಾನಮಂತ್ರಿ ಮೋದಿಯವರ ವೈಯಕ್ತಿಕ ಚಿತ್ರಣವನ್ನು ಹೆಚ್ಚಿಸಲು ಪ್ರಯತ್ನ ನಡೆದಿದೆ” ಎಂದು ಆರೋಪಿಸಿದರು. ಅಲ್ಲದೆ, ಭಾರತವು ಯಾವುದೇ ವಿದೇಶಾಂಗ ಒತ್ತಡದಿಂದಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತೇ ಎಂದು ವಿಪಕ್ಷಗಳು ಪ್ರಶ್ನಿಸಿದವು.

ವಿಪಕ್ಷಗಳ ಪ್ರಮುಖ ಪ್ರಶ್ನೆಗಳಿಗೆ ಹಾರಿಕೆ ಉತ್ತರಗಳೊಂದಿಗೆ ಚರ್ಚೆಯನ್ನು ಮುಗಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ”ಕಾರ್ಯಾಚರಣೆಯು ಅತ್ಯಂತ ಯಶಸ್ವಿ ಮತ್ತು ನಿಖರವಾಗಿತ್ತು. ಭಾರತವು ಯುದ್ಧ ಆರಂಭಿಸುವ ಉದ್ದೇಶ ಹೊಂದಿರಲಿಲ್ಲ, ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿದೆ” ಎಂದು ಹೇಳಿಕೊಂಡರು.

”ವಿದೇಶಗಳ ಹೇಳಿಕೆಯನ್ನು ವಿಪಕ್ಷಗಳು ನಂಬುತ್ತಿವೆ. ನಾವು ಭಯೋತ್ಪಾದಕರ ಧರ್ಮದ ಬಗ್ಗೆ ಚಿಂತಿಸದೆ, ಅವರನ್ನು ತೊಡೆದುಹಾಕಿದ್ದೇವೆ. ಕಾರ್ಯಾಚರಣೆಯಲ್ಲಿ ದೇಶೀಯ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಲಾಗಿದೆ. ಇದು ‘ಆತ್ಮನಿರ್ಭರ ಭಾರತ’ದ ಯಶಸ್ಸು” ಎಂದು ಹೇಳುವ ಮೂಲಕ, ಗಂಭೀರ ಪ್ರಶ್ನೆಗಳನ್ನು ಕಡೆಗಣಿಸಿದರು.

ಆದಾಗ್ಯೂ, ಟ್ರಂಪ್ ಹೇಳಿಕೆಯ ಕುರಿತು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಮಾತ್ರವೇ ಮಾತನಾಡಿದರು. ಏಪ್ರಿಲ್ 22ರಿಂದ ಜೂನ್‌ 17ರವರೆಗೆ ಟ್ರಂಪ್ ಮತ್ತು ಮೋದಿ ನಡುವೆ ಯಾವುದೇ ಫೋನ್‌ ಕರೆ, ಸಂಭಾಷಣೆ ನಡೆದಿಲ್ಲ ಎಂದಷ್ಟೇ ಹೇಳಿದರು.

ಅಲ್ಲದೆ, ಪ್ರಧಾನಿ ಮೋದಿ ಅವರು ಟ್ರಂಪ್ ಹೇಳಿಕೆಗಳ ಬಗ್ಗೆ ಉತ್ತರಿಸಲಿಲ್ಲ. ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಲೋಕಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಮೋದಿ ಸದನದಲ್ಲಿ ಇರಲಿಲ್ಲ. ರಾಹುಲ್‌ ಗಾಂಧಿ ಅವರ ಮಾತುಗಳು ಮುಗಿಯುತ್ತಿದ್ದಂತೆಯೇ ಸದನಕ್ಕೆ ಬಂದ ಮೋದಿ ಅವರು ತಮ್ಮ ವಾಕ್ಚಾತುರ್ಯ ಬಳಸಿ ಮಾತನಾಡಿದರು. ಆದರೆ, ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.

ಬರೋಬ್ಬರಿ 100 ನಿಮಿಷ ಮಾತನಾಡಿದ ಮೋದಿ, ”ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಕೇವಲ 22 ನಿಮಿಷಗಳಲ್ಲಿ ‘ಪಹಲ್ಗಾಮ್ ದಾಳಿ’ಯ ಸೇಡು ತೀರಿಸಿಕೊಂಡಿತು. ಕಾರ್ಯಾಚರಣೆಯು ಭಯೋತ್ಪಾದಕರಿಗೆ ಮತ್ತು ಅವರ ಬೆಂಬಲಿಗರಿಗೆ ಎಚ್ಚರಿಕೆಯ ಸಂದೇಶ ನೀಡಿತು. ಭಾರತವು ಅಣ್ವಸ್ತ್ರ ಬೆದರಿಕೆಗೆ ಒಳಗಾಗದೆ, ಭಯೋತ್ಪಾದಕರನ್ನು ಮತ್ತು ಅವರನ್ನು ಬೆಂಬಲಿಸುವ ಸರ್ಕಾರಗಳನ್ನು ಒಂದೇ ಎಂದು ಪರಿಗಣಿಸಿದೆ” ಎಂದು ಹೇಳಿದರು.

ಯಥಾಪ್ರಕಾರ ಕಾಂಗ್ರೆಸ್‌ಅನ್ನು ಟೀಕಿಸಿದ ಮೋದಿ, ”ಕಾಂಗ್ರೆಸ್‌ ನಾಯಕರು ಪಾಕಿಸ್ತಾನ ಸೃಷ್ಟಿಸಿದ ಕಥೆಗಳನ್ನು ನಂಬುತ್ತಿದ್ದಾರೆ. ಕಾಂಗ್ರೆಸ್‌ನ ಹಿಂದಿನ ಸರ್ಕಾರಗಳು, ವಿಶೇಷವಾಗಿ ಜವಾಹರಲಾಲ್ ನೆಹರೂರವರ ಇಂಡಸ್ ಜಲ ಒಪ್ಪಂದ ಮಾಡಿಕೊಂಡದ್ದು ‘ದೊಡ್ಡ ತಪ್ಪು’. ಕಾಂಗ್ರೆಸ್‌ನ ಕೆಲವು ನಾಯಕರು ಭಯೋತ್ಪಾದಕರ ಸಾವಿಗೆ ‘ಕಣ್ಣೀರು’ ಸುರಿಸಿದ್ದಾರೆ” ಎಂದು ಆರೋಪಿಸಿದರು.

ಈ ಲೇಖನ ಓದಿದ್ದೀರಾ?: ಆಪರೇಷನ್ ಸಿಂಧೂರ | ಕಾಂಗ್ರೆಸ್‌ – ತರೂರ್ ನಡುವೆ ವಾಗ್ಯುದ್ಧ; ಬೇಳೆ ಬೇಯಿಸಿಕೊಳ್ಳುತ್ತಿದೆ ಬಿಜೆಪಿ

”ಯಾವುದೇ ಜಾಗತಿಕ ನಾಯಕರು ಕಾರ್ಯಾಚರಣೆ ನಿಲ್ಲಿಸುವಂತೆ ಭಾರತಕ್ಕೆ ಒತ್ತಡ ಹಾಕಿಲ್ಲ. ಮೇ 9ರ ರಾತ್ರಿ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಜೊತೆಗೆ ಫೋನ್‌ ಕರೆಯಲ್ಲಿ ಮಾತನಾಡಿದಾಗ, ‘ಪಾಕಿಸ್ತಾನದಿಂದ ದಾಳಿಯಾದರೆ ಭಾರತವು ಇನ್ನಷ್ಟು ತೀವ್ರವಾಗಿ ಪ್ರತಿಕ್ರಿಯಿಸುತ್ತದೆ’ ಎಂಬುದಾಗಿ ನಾವು ಸ್ಪಷ್ಟಪಡಿಸಿದ್ದೆವು” ಎಂದು ಮೋದಿ ಹೇಳಿಕೊಂಡರು. ಆದರೆ, ಟ್ರಂಪ್‌ ಪದೇ-ಪದೇ ಕದನ ವಿರಾಮದ ಶ್ರೇಯಸ್ಸನ್ನು ಪಡೆದುಕೊಳ್ಳುತ್ತಿರುವ ಬಗ್ಗೆ ಮೋದಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಮುಖ್ಯವಾಗಿ, ಪಹಲ್ಗಾಮ್ ದಾಳಿಯ ಭದ್ರತಾ ಲೋಪಗಳ ಬಗ್ಗೆ ಸ್ಪಷ್ಟ ಉತ್ತರಗಳನ್ನು ನೀಡಲಿಲ್ಲ. ಟ್ರಂಪ್ ಹೇಳಿಕೆಗಳನ್ನು ಸ್ಪಷ್ಟವಾಗಿ ತಳ್ಳಿಹಾಕಲಿಲ್ಲ. ಟ್ರಂಪ್ ಹೆಸರನ್ನೇ ಸರ್ಕಾರ ಉಲ್ಲೇಖಿಸಲಿಲ್ಲ. ಕಾರ್ಯಾಚರಣೆಯಲ್ಲಿ ಭಾರತದ ಯುದ್ಧ ವಿಮಾನ/ಡ್ರೋನ್‌ಗಳ ನಷ್ಟದ ಕುರಿತ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.

ಬದಲಾಗಿ, ಮೋದಿಯವರ ಭಾಷಣವು ಕಾರ್ಯಾಚರಣೆ ಮತ್ತು ಸಾಧಕ-ಬಾಧಕಗಳ ಮೇಲೆ ಕೇಂದ್ರೀಕರಿಸದೆ, ರಾಜಕೀಯ ಲಾಭದ ಗುರಿಯನ್ನು ಹೊಂದಿತ್ತು. ಅವರು ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿನ ವೈಫಲ್ಯ, ಕಾರಣಗಳು ಹಾಗೂ ಗಂಭೀರ ವಿಚಾರಗಳ ಬಗ್ಗೆ ಮಾತನಾಡಲಿಲ್ಲ. ಬದಲಾಗಿ, ಕಳೆದ 11 ವರ್ಷಗಳಿಂದ ಸಂಸತ್‌ನಲ್ಲಿ ಮಾಡುತ್ತಿರುವಂತೆಯೇ, ಈ ಬಾರಿಯೂ ಕಾಂಗ್ರೆಸ್ ಮತ್ತು ನೆಹರೂ ಅವರನ್ನು ಪದೇ ಪದೇ ಟೀಕಿಸಿದರು. ‘ರಾಷ್ಟ್ರೀಯತೆ’ಯನ್ನು ಭಾಷಣದಲ್ಲಿ ತುರುಕಿ, ಪ್ರಶ್ನಿಸುವವರೇ ದೇಶದ್ರೋಹಿಗಳು ಎಂಬಂತೆ ಆರೋಪಿಸಿದರು. ಮುಂದಿನ ಚುನಾವಣೆಯಲ್ಲಿ ಜನರ ಮನ ಸೆಳೆಯಲು ಅಗತ್ಯವಿರುವ ವರ್ಣರಂಜಿತ ಭಾಷಣ ಮಾಡಿ, ಮುಗಿಸಿದರು.

ವಿಪಕ್ಷಗಳು ಮತ್ತು ದೇಶದ ಜನರು ಎದುರು ನೋಡುತ್ತಿದ್ದ ಹಲವು ಪ್ರಶ್ನೆಗಳಿಗೆ ಪ್ರಧಾನಿ ಮತ್ತು ಸರ್ಕಾರ ಉತ್ತರಿಸದೆ, ಜಾರಿಕೊಳ್ಳಲಾಯಿತು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X