ಪಹಲ್ಗಾಮ್ ದಾಳಿಯ ನಂತರ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಗಳ ಬಗ್ಗೆ ಮಿತ್ರರಾಷ್ಟ್ರಗಳಿಗೆ ಭಾರತದ ನಿಲುವನ್ನು ತಿಳಿಸಲು ಕೇಂದ್ರ ಸರ್ಕಾರವು ವಿದೇಶಗಳಿಗೆ 7 ನಿಯೋಗಗಳನ್ನು ಕಳಿಸಿದೆ. ನಿಯೋಗಗಳು ಮಿತ್ರರಾಷ್ಟ್ರಗಳ ರಾಜತಾಂತ್ರಿಕರನ್ನು ಭೇಟಿ ಮಾಡಿ, ಭಾರತ ನಿಲುವಿನ ಬಗ್ಗೆ ವಿವರಿಸುತ್ತಿದ್ದಾರೆ. ಈ ನಡುವೆ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, “ವಿವಿಧ ರಾಷ್ಟ್ರಗಳಿಗೆ ತೆರಳಿರುವ ನಿಯೋಗಗಳು ಅಲ್ಲಿ ಏನನ್ನು ಸಾಧಿಸಿವೆ” ಎಂದು ಪ್ರಶ್ನಿಸಿದೆ.
ಭಾರತ-ಪಾಕ್ ಸಂಘರ್ಷಕ್ಕೆ ಸಂಬಂಧಿಸಿದಂತೆ ವಿವರವಾದ ಚರ್ಚೆಗಾಗಿ ‘ವಿಶೇಷ ಸಂಸತ್ ಅಧಿವೇಶನ’ ಕರೆಯಬೇಕೆಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಆಗ್ರಹಿಸುತ್ತಲೇ ಇವೆ. ಆದರೆ, ವಿಶೇಷ ಅಧಿವೇಶನ ಕರೆಯಲು ಹಿಂದೇಟು ಹಾಕಿರುವ ಕೆಂದ್ರ ಸರ್ಕಾರ ತಮ್ಮ ನಿಯೋಗಗಳನ್ನು ವಿದೇಶಗಳಿಗೆ ಕಳಿಸಿದೆ. ನಿಯೋಗದಲ್ಲಿರುವವರು ಅಲ್ಲಿ ಸಾಧಿಸಿದ್ದಾದರೂ ಏನು? ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯು ‘ಭಾರೀ ವೈಫಲ್ಯ’ ಕಾಣುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
“ವಿದೇಶಗಳಿಗೆ ಸರ್ವಪಕ್ಷ ನಿಯೋಗಗಳನ್ನು ಕಳಿಸಲಾಗಿದೆ. ಇದರಿಂದ ಭಾರತಕ್ಕೆ ಏನು ಲಾಭ. ನಿಯೋಗಗಳನ್ನು ಕಳಿಸಿದ ಸರ್ಕಾರ ಸಾಧಿಸಿದ್ದಾದರೂ ಏನು? ಮೋದಿ ಸರ್ಕಾರವು ಪಾಲಿಸುತ್ತಿರುವ ‘ವಿದೇಶಾಂಗ ನೀತಿ’ಗಳು ವಿಫಲವಾಗಿದ್ದು, ಜಾಗತಿಕ ಪಟ್ಟದಲ್ಲಿ ಭಾರತ ಅವಮಾನಕ್ಕೆ ಗುರಿಯಾಗಿದೆ” ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಹೇಳಿದ್ದಾರೆ.
“ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮದ ಯಶಸ್ಸನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಸಂಘರ್ಷದ ಸಮಯದಲ್ಲಿ ನಮ್ಮ ಮಿತ್ರರಾಷ್ಟ್ರಗಳು ನಮಗೆ ಸ್ಪಷ್ಟವಾದ ಬೆಂಬಲ ನೀಡಲಿಲ್ಲ. ಮೋದಿ ಆಡಳಿತದಲ್ಲಿ ಭಾರತ ಜಾಗತಿಕವಾಗಿ ಏಕಾಂಗಿಯಾಗಿದೆ” ಎಂದು ಕಿಡಿಕಾರಿದ್ದಾರೆ.
“ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ, ಭಾರತೀಯರನ್ನು ಹತ್ಯೆಗೈದ ಭಯೋತ್ಪಾದಕರು ಏನಾದರು? ಅವರು ಎಲ್ಲಿದ್ದಾರೆ. ಅವರನ್ನು ಇನ್ನೂ ಬಂಧಿಸಿಲ್ಲ. ಭಯೋತ್ಪಾದಕರನ್ನು ಬಂಧಿಸದಿದ್ದರೆ, ದಾಳಿಯಲ್ಲಿ ಹತ್ಯೆಯಾದವರ ಕುಟುಂಬಗಳಿಗೆ ನ್ಯಾಯ ದೊರೆಯುವುದಿಲ್ಲ” ಎಂದು ಹೇಳಿದ್ದಾರೆ.
“ಮೋದಿ ಅವರು 11 ವರ್ಷಗಳಿಂದ ಕೇಂದ್ರ ಸರ್ಕಾರದಲ್ಲಿ ಅಧಿಕಾರದಲ್ಲಿದ್ದಾರೆ. ಈ ಅವಧಿಯಲ್ಲಿ ಅವರು 90ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. ಅವರ ಪ್ರವಾಸ ಮತ್ತು ಸರ್ಕಾರದ ವಿಫಲ ವಿದೇಶಾಂಗ ನೀತಿಯಿಂದಾಗಿ ಭಾರತಕ್ಕೆ ಯಾವುದೇ ಲಾಭವಿಲ್ಲ” ಎಂದಿದ್ದಾರೆ.