ಬಿಹಾರ ಸರ್ಕಾರವು ಜಾತಿ ಸಮೀಕ್ಷೆಯನ್ನು ಬಿಡುಗಡೆ ಮಾಡಿರುವುದನ್ನು ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯಾ’ ಸ್ವಾಗತಿಸಿದ್ದು, ಆಡಳಿತಾರೂಢ ಬಿಜೆಪಿಯು ಇಂತಹ ಮಹತ್ತರ ಯೋಜನೆಯಿಂದ ಓಡಿಹೋಗುತ್ತಿದೆ ಎಂದು ಸೋಮವಾರ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಬಿಹಾರದ ಜಾತಿ ಗಣತಿಯು ಒಬಿಸಿಗಳು, ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆಯ ಶೇ. 84 ರಷ್ಟಿದೆ ಎಂದು ಬಹಿರಂಗಪಡಿಸಿದೆ. ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳಲ್ಲಿ, ಕೇವಲ 3 ಒಬಿಸಿಗಳು ಮಾತ್ರ ಇದ್ದಾರೆ. ಅವರು ಭಾರತದ ಬಜೆಟ್‌ನ ಶೇ. 5 ರಷ್ಟನ್ನು ಮಾತ್ರ ನಿರ್ವಹಿಸುತ್ತಾರೆ. ಆದ್ದರಿಂದ, ಭಾರತದ ಜಾತಿಯ ಅಂಕಿಅಂಶಗಳನ್ನು ತಿಳಿದುಕೊಳ್ಳಲು ಜಾತಿ ಗಣತಿ ಮುಖ್ಯವಾಗಿದೆ. ಹೆಚ್ಚಿನ ಜನಸಂಖ್ಯೆ, ಹೆಚ್ಚಿನ ಹಕ್ಕುಗಳು – ಇದು ನಮ್ಮ ಪ್ರತಿಜ್ಞೆ” ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಕೂಡ ಹೊಸ ಜಾತಿ ಗಣತಿ ಮತ್ತು ಯುಪಿಎ-2 ಅಡಿಯಲ್ಲಿ ನಡೆದ ಇದೇ ರೀತಿಯ ಕಸರತ್ತಿನ ಅಂಕಿಅಂಶವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಬಿಹಾರದಲ್ಲಿ ಈಗಷ್ಟೆ ಜಾತಿ ಗಣತಿಯನ್ನು ಬಿಡುಗಡೆ ಮಾಡಲಾಗಿದೆ. ಕಾಂಗ್ರೆಸ್ ಈ ಉಪಕ್ರಮವನ್ನು ಸ್ವಾಗತಿಸಲಿದ್ದು, ಕೇಂದ್ರ ಸರ್ಕಾರವು ರಾಷ್ಟ್ರೀಯ ಜಾತಿಗಣತಿಯನ್ನು ಶೀಘ್ರವಾಗಿ ನಡೆಸಬೇಕೆಂಬ ತನ್ನ ಬೇಡಿಕೆಯನ್ನು ಕಾಂಗ್ರೆಸ್ ಪುನರುಚ್ಚರಿಸುತ್ತದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಹಿರಂಗಗೊಂಡ ಬಿಹಾರದ ಜಾತಿಗಣತಿ ವರದಿ: ಯಾವ್ಯಾವ ಸಮುದಾಯ ಎಷ್ಟೆಷ್ಟು ಗೊತ್ತೆ?
‘ಯುಪಿಎ-2 ಸರ್ಕಾರವು ವಾಸ್ತವವಾಗಿ ಈ ಜಾತಿಯ ಜನಗಣತಿಯನ್ನು ಪೂರ್ಣಗೊಳಿಸಿದೆ. ಆದರೆ ಅದರ ಫಲಿತಾಂಶಗಳನ್ನು ಮೋದಿ ಸರ್ಕಾರವು ಪ್ರಕಟಿಸಲಿಲ್ಲ. ಸಾಮಾಜಿಕ ಸಬಲೀಕರಣ ಕಾರ್ಯಕ್ರಮಗಳಿಗೆ ದೃಢವಾದ ಅಡಿಪಾಯವನ್ನು ಒದಗಿಸಲು ಮತ್ತು ಸಾಮಾಜಿಕ ನ್ಯಾಯವನ್ನು ಆಳಗೊಳಿಸಲು ಇಂತಹ ಜನಗಣತಿಯು ಅತ್ಯಗತ್ಯವಾಗಿದೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಬಿಜೆಪಿ ಮತ್ತು ಪ್ರಧಾನಿ ಜಾತಿಯ ಗಣತಿ ನಡೆಸದೆ ಓಡಿ ಹೋಗುತ್ತಿದ್ದಾರೆ ಎಂದು ಎಎಪಿಯ ಸಂಜಯ್ ಸಿಂಗ್ ಆರೋಪಿಸಿದರು.
ಬಿಜೆಪಿಯವರು ಯಾವಾಗಲೂ ಒಬಿಸಿ, ದಲಿತ, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ವಿರೋಧಿಗಳು. ಆದ್ದರಿಂದ ಜಾತಿಯ ಗಣತಿಯಿಂದ ದೂರ ಓಡುತ್ತಿದ್ದಾರೆ. ದೇಶಾದ್ಯಂತ ಜಾತಿಗಣತಿ ನಡೆಯಬೇಕು. ನೀವು ದೇಶದಲ್ಲಿ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ನ್ಯಾಯ ನೀಡಬೇಕಾದರೆ ಜಾತಿಗಣತಿ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಸಂಜಯ್ ಸಿಂಗ್ ಒತ್ತಾಯಿಸಿದ್ದಾರೆ.