ಲೋಕಸಭಾ ಚುನಾವಣೆಯು ಸಮೀಪಿಸುತ್ತಿರುವಾಗಲೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದೇಶಾದ್ಯಂತ ಜಾರಿ ಮಾಡಿದೆ. ಇದು ವ್ಯಾಪಕ ವಿರೋಧಕ್ಕೆ ಕಾರಣವಾಗುತ್ತಿದೆ.
ಈ ನಡುವೆ ತಮಿಳುನಾಡು ಹಾಗೂ ಕೇರಳ ಸರ್ಕಾರವು ,”ನಮ್ಮ ರಾಜ್ಯದಲ್ಲಿ ಈ ಕಾಯ್ದೆ (ಸಿಎಎ) ಜಾರಿ ಮಾಡಲ್ಲ” ಎಂದಿದೆ.
ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಲ್ಪಟ್ಟ ಐದು ವರ್ಷಗಳ ನಂತರ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಮಾ.11ರಂದು ಕೇಂದ್ರ ಸರ್ಕಾರವು ಹೊರಡಿಸಿರುವ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.
The Leader of Opposition in the Assam Assembly, Mr. Debabrata Saika, and Congress MP from Assam, Mr. Abdul Khaleque, have filed an interim application in the Supreme Court seeking a stay on the implementation of the Citizenship Amendment Rules 2024 notified on March 11.
Read… pic.twitter.com/BoLSvndKxr— Live Law (@LiveLawIndia) March 13, 2024
ಅಸ್ಸಾಂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಾ ಮತ್ತು ಅಸ್ಸಾಂನ ಕಾಂಗ್ರೆಸ್ ಸಂಸದ ಅಬ್ದುಲ್ ಖಲೀಕ್ ಅವರು ಸಿಎಎ ಅನುಷ್ಠಾನಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ನಿಯಮಗಳು ಅಸಾಂವಿಧಾನಿಕ ಮತ್ತು ಅಸ್ಸಾಂ ಒಪ್ಪಂದವನ್ನು ಉಲ್ಲಂಘಿಸುತ್ತವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ, ಸಿಎಎಯ ಮೂಲಕ ಎನ್‌ಆರ್‌ಸಿಯಿಂದ ಮುಸ್ಲಿಮರನ್ನು ಮಾತ್ರ ಹೊರಗಿಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಮಾನತೆ, ಜಾತ್ಯತೀತತೆ ಮತ್ತು ತಾರತಮ್ಯದಂತಹ ಸಾಂವಿಧಾನಿಕ ತತ್ತ್ವಗಳ ಉಲ್ಲಂಘನೆಯ ಬಗ್ಗೆ ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಅಸ್ಸಾಂನಲ್ಲಿ ಸಿಎಎ ವಿರುದ್ಧ ಮತ್ತೊಮ್ಮೆ ಪ್ರತಿಭಟನೆಗಳು ಪ್ರಾರಂಭವಾಗಿರುವ ಬೆನ್ನಲ್ಲೇ ಈ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ.
2019ರಲ್ಲಿ ಕಾಯ್ದೆಗೆ ಸಂಸತ್ ಒಪ್ಪಿಗೆ ನೀಡಿದ ಸಮಯದಲ್ಲೂ ಸಹ ಐಯುಎಂಎಲ್ ಸಂಘಟನೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ಬಗ್ಗೆ ತೀರ್ಪು ಇನ್ನಷ್ಟೇ ಬರಬೇಕಿದೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮತ್ತು ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಸಂಘಟನೆಗಳು ಕೂಡ ಅರ್ಜಿ ಸಲ್ಲಿಕೆ ಮಾಡಿವೆ. ಸಿಎಎ ಕಾನೂನು ಸಂವಿಧಾನ ವಿರೋಧಿಯಾಗಿದ್ದು, ಮುಸ್ಲಿಮರನ್ನು ತಾರತಮ್ಯ ಮಾಡುತ್ತದೆ. ಇದನ್ನು ಸ್ವೇಚ್ಛಾಚಾರದಿಂದ ಜಾರಿ ಮಾಡಲಾಗಿದೆ ಎಂದು ಈ ಸಂಘಟನೆಗಳು ಹೇಳಿದ್ದು, ಸಿಎಎ ಜಾರಿಗೆ ತಡೆ ನೀಡಬೇಕು ಎಂದು ಮಧ್ಯಂತರ ಅರ್ಜಿಯಲ್ಲಿ ಕೋರಿವೆ.
