ಹಿನ್ನೋಟ | ಕೇಂದ್ರದ ವಿರುದ್ಧ ವಿಪಕ್ಷಗಳ ಜಂಟಿ ಹೋರಾಟ ಫಲ ನೀಡುವುದೇ?

Date:

Advertisements
ಮೋದಿ ಸರ್ಕಾರ ಆಡಳಿತದಲ್ಲಿರುವ ಕಳೆದ ಒಂಭತ್ತು ವರ್ಷಗಳಲ್ಲಿ ವಿಪಕ್ಷಗಳು ಅನೇಕ ವಿಚಾರಗಳಲ್ಲಿ ಒಕ್ಕೊರಲಿನ ಹೋರಾಟ ಮುಂದಿಡಲು ವಿಫಲವಾಗಿವೆ. ಆದರೆ, ಕೆಲವು ಪ್ರಮುಖ ವಿಚಾರಗಳಲ್ಲಿ ವಿಪಕ್ಷಗಳ ಜಂಟಿ ಹೋರಾಟ ಫಲ ನೀಡಿದೆ ಮತ್ತು ಕೇಂದ್ರ ಸರ್ಕಾರಕ್ಕೆ ಸೋಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸತ್ ಭವನ ಉದ್ಘಾಟಿಸುವುದನ್ನು ವಿರೋಧಿಸಿ 20ಕ್ಕೂ ಹೆಚ್ಚು ಪ್ರತಿಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. “ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉದ್ಘಾಟನೆಗೆ ಆಹ್ವಾನಿಸದಿರುವುದು ರಾಷ್ಟ್ರಪತಿ ಸ್ಥಾನಕ್ಕೆ ತೋರಿದ ಅಗೌರವ. ರಾಷ್ಟ್ರಪತಿಯವರೇ ಸಂಸತ್ ಭವನ ಉದ್ಘಾಟಿಸಬೇಕು” ಎಂದು ವಿಪಕ್ಷಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಆಪ್ ಮೊದಲಾಗಿ 19 ಪಕ್ಷಗಳು ಒಗ್ಗಟ್ಟಿನಿಂದ ಮೇ 28ರ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಮೋದಿ ಸರ್ಕಾರ ಆಡಳಿತದಲ್ಲಿರುವ ಕಳೆದ ಒಂಭತ್ತು ವರ್ಷಗಳಲ್ಲಿಅನೇಕ ವಿಚಾರಗಳಲ್ಲಿ ವಿಪಕ್ಷಗಳ ಜಂಟಿ ಹೋರಾಟ ಕಂಡುಬಂದಿದೆ. ಕೆಲವೊಮ್ಮೆ ಪ್ರಮುಖ ವಿಚಾರಗಳಲ್ಲಿ ಜಂಟಿ ಹೋರಾಟಕ್ಕೆ ಫಲ ಸಿಕ್ಕಿದೆ ಮತ್ತು ಕೇಂದ್ರ ಸರ್ಕಾರಕ್ಕೆ ಸೋಲಾಗಿದೆ. ಆದರೆ, ಬಹುತೇಕ ಬಾರಿ ವಿಪಕ್ಷಗಳ ಜಂಟಿ ಹೋರಾಟಗಳು ವಿಫಲವಾಗಿವೆ.

2014ರಲ್ಲಿ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಪ್ರಮುಖ ವಿಪಕ್ಷಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳ ನಡುವೆಯೂ ಸಮಾನ ಅಂಶಗಳಲ್ಲಿ ಒಕ್ಕೊರಲಿನ ವಿರೋಧ ಮುಂದಿಟ್ಟಿವೆ. ಅಂತಹ ಕೆಲವು ಉದಾಹರಣೆಗಳು ಇಲ್ಲಿವೆ.

Advertisements

2015 ಮಾರ್ಚ್‌ನ ಭೂಸ್ವಾಧೀನ ಸುಗ್ರೀವಾಜ್ಞೆ ವಿರುದ್ಧ ಪ್ರತಿಭಟನೆ

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಆರಂಭದಲ್ಲೇ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರುದ್ಧ ವಿಪಕ್ಷಗಳು ಒಗ್ಗಟ್ಟಿನ ಹೋರಾಟ ಮುಂದಿಟ್ಟಿದ್ದವು. ಕಂಪನಿಗಳು ವಾಣಿಜ್ಯ ಉದ್ದೇಶಕ್ಕಾಗಿ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ನೆರವಾಗುವ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ತರಲು ಸರ್ಕಾರ ಮುಂದಾದಾಗ ಕಾಂಗ್ರೆಸ್ ನೇತೃತ್ವದಲ್ಲಿ 14 ಪಕ್ಷಗಳು ಸಂಸತ್ತಿನಿಂದ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ಸಾಗಿ ವಿರೋಧಿಸಿದ್ದವು. ಸರ್ಕಾರ ನಂತರ ಈ ಕಾಯ್ದೆಯನ್ನು ಹಿಂಪಡೆದಿತ್ತು.

2020 ಡಿಸೆಂಬರ್‌ನಲ್ಲಿ ಸಂಸತ್ ಭವನದ ಶಂಕುಸ್ಥಾಪನೆ ಬಹಿಷ್ಕಾರ

2020ರಂದು ಪ್ರಧಾನಿ ಮೋದಿ ನೂತನ ಸಂಸತ್ ಭವನಕ್ಕೆ ಶಂಕು ಸ್ಥಾಪನೆ ಮಾಡಿದ್ದರು. ಕೋವಿಡ್ ಸಂದರ್ಭದಲ್ಲಿ ಬೊಕ್ಕಸ ಬರಿದಾಗಿದ್ದಾಗ ಅದ್ದೂರಿ ಸಂಸತ್ ಭವನ ನಿರ್ಮಾಣಕ್ಕೆ ಹಣ ಸುರಿಯುವುದನ್ನು ವಿರೋಧಿಸಿ ಕಾಂಗ್ರೆಸ್, ಟಿಎಂಸಿ ಹಾಗೂ ಡಿಎಂಕೆ ಮೊದಲಾದ ಪಕ್ಷಗಳು ಸಮಾರಂಭದಿಂದ ದೂರ ಉಳಿದಿದ್ದವು. ಆದರೆ ಜಂಟಿ ಹೇಳಿಕೆ ಹೊರಡಿಸಿರಲಿಲ್ಲ.

2021 ಜನವರಿಯಲ್ಲಿ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನೆ

2020ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶದ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಒಂದು ವರ್ಷ ನಡೆದ ಈ ಪ್ರತಿಭಟನೆಯ ಕಾವಿಗೆ ಮೋದಿ ಸರ್ಕಾರ ಕೃಷಿ ಕಾನೂನುಗಳನ್ನು ಹಿಂಪಡೆದಿತ್ತು. ರೈತರ ಪ್ರತಿಭಟನೆಯನ್ನು 17 ವಿರೋಧ ಪಕ್ಷಗಳು ಬೆಂಬಲಿಸಿದ್ದವು. 2021 ಜನವರಿಯಲ್ಲಿ ಕೃಷಿ ಕಾನೂನು ವಿರೋಧಿಸುತ್ತಿರುವ ರೈತರನ್ನು ಬೆಂಬಲಿಸಲು ಕಾಂಗ್ರೆಸ್, ಎನ್‌ಸಿಪಿ, ಟಿಎಂಸಿ, ಡಿಎಂಕೆ, ಶಿವಸೇನೆ, ಸಮಾಜವಾದಿ ಪಕ್ಷ, ಆರ್‌ಜೆಡಿ, ಸಿಪಿಎಂ, ಸಿಪಿಐ, ಆರ್‌ಎಸ್‌ಪಿ, ಪಿಡಿಪಿ, ಎಂಡಿಎಂಕೆ, ಮುಸ್ಲಿಂ ಲೀಗ್, ಎಐಯುಡಿಎಫ್‌ ಹಾಗೂ ಕೇರಳ ಕಾಂಗ್ರೆಸ್ (ಎಂ) ಮೊದಲಾಗಿ 17 ವಿಪಕ್ಷಗಳು ಲೋಕಸಭೆ-ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣ ಬಹಿಷ್ಕರಿಸಿದ್ದವು.

2021 ಮೇ ತಿಂಗಳಲ್ಲಿ ಕೋವಿಡ್ ಕುರಿತು ಜಂಟಿ ಹೇಳಿಕೆ

2021 ಮೇನಲ್ಲಿ ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ ಮೊದಲಾದ 13 ವಿಪಕ್ಷಗಳು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಪರಸ್ಪರರ ವಿರುದ್ಧ ಹೋರಾಡಿದ್ದರೂ, ಮೋದಿ ಸರ್ಕಾರದ ವಿರುದ್ಧ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುವಂತೆ ಒತ್ತಾಯಿಸಿ ಜಂಟಿ ಹೇಳಿಕೆ ನೀಡಿದ್ದವು. ಆಮ್ಲಜನಕ ಸಿಲಿಂಡರ್‌ಗಳ ಸೌಲಭ್ಯ ಒದಗಿಸುವುದು, ಇತರ ಕೋವಿಡ್ ನೆರವಿನ ಬಗ್ಗೆ ಈ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿತ್ತು.

18-44 ವಯೋವರ್ಗಕ್ಕೆ ಲಸಿಕೆ ಮುಂದುವರಿಸುವುದು

ಬಹುತೇಕ ರಾಜ್ಯಗಳು 18-44 ವಯಸ್ಸಿನವರಿಗೆ ಕೋವಿಡ್ ಲಸಿಕೆ ನೀಡುವ ವಿಚಾರದಲ್ಲಿ ಕೇಂದ್ರದ ಉಪೇಕ್ಷೆಯನ್ನು ಪ್ರಶ್ನಿಸಿದ್ದವು. ಕಾಂಗ್ರೆಸ್, ಟಿಎಂಸಿ, ಶಿವಸೇನೆ, ಡಿಎಂಕೆ, ಜೆಎಂಎಂ, ಜೆಡಿಎಸ್, ಎನ್‌ಸಿಪಿ, ಎಸ್‌ಪಿ, ಆರ್‌ಜೆಡಿ, ಸಿಪಿಎಂ, ಸಿಪಿಐ ಹಾಗೂ ಎನ್‌ಸಿ ಮೊದಲಾಗಿ 12 ವಿಪಕ್ಷಗಳು ಕೇಂದ್ರ ಸರ್ಕಾರವೇ ವಿದೇಶಗಳಿಂದ ಲಸಿಕೆ ಸಂಗ್ರಹಿಸಿ ಈ ವಯೋವರ್ಗದವರಿಗೆ ನೀಡಬೇಕು ಎಂದು ಒತ್ತಾಯಿಸಿ ಜಂಟಿ ಪತ್ರ ಬರೆದಿದ್ದವು.

ಸ್ಟಾನ್‌ ಸ್ವಾಮಿ ಮರಣದ ನ್ಯಾಯಾಂಗ ತನಿಖೆ

ಫಾದರ್ ಸ್ಟಾನ್ ಸ್ವಾಮಿ ನ್ಯಾಯಾಂಗ ವಶದಲ್ಲಿ ಮೃತಪಟ್ಟಿರುವುದಕ್ಕೆ ತೀವ್ರ ವಿಷಾದ ಮತ್ತು ಆಕ್ರೋಶ ವ್ಯಕ್ತಪಡಿಸಿ ವಿಪಕ್ಷಗಳು ರಾಷ್ಟ್ರಪತಿಗಳಿಗೆ ಜಂಟಿ ಪತ್ರ ಬರೆದಿದ್ದವು. ಸ್ಟಾನ್ ಸ್ವಾಮಿ ಸಾವಿಗೆ ಕಾರಣರಾದವರು ಮತ್ತು ಜೈಲಿನಲ್ಲಿ ಅವರನ್ನು ಅಮಾನವೀಯವಾಗಿ ನಡೆಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಒತ್ತಾಯಿಸಲಾಗಿತ್ತು. ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಬಂಧಿತರಾದ ಎಲ್ಲರನ್ನೂ ಬಿಡುಗಡೆ ಮಾಡುವಂತೆ ಪತ್ರ ಒತ್ತಾಯಿಸಿತ್ತು. ಈ ಪತ್ರಕ್ಕೆ ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಜೆಎಂಎಂ, ಜೆಡಿಎಸ್, ಎನ್‌ಸಿ, ಎನ್‌ಸಿಪಿ, ಆರ್‌ಜೆಡಿ, ಸಿಪಿಐ(ಎಂ), ಹಾಗೂ ಸಿಪಿಐ ಸಹಿ ಹಾಕಿದ್ದವು.

ದ್ವೇಷ ಭಾಷಣದ ಬಗ್ಗೆ ಪ್ರಧಾನಿ ಮೌನದ ಬಗ್ಗೆ ಪ್ರಶ್ನೆ

2022 ಏಪ್ರಿಲ್‌ನಲ್ಲಿ 13 ವಿಪಕ್ಷಗಳು ಜಂಟಿ ಹೇಳಿಕೆ ನೀಡಿ ದ್ವೇಷ ಭಾಷಣದ ಬಗ್ಗೆ ಪ್ರಧಾನಿ ಮೌನವನ್ನು ಪ್ರಶ್ನಿಸಿದ್ದವು. ಕಾಂಗ್ರೆಸ್, ಎನ್‌ಸಿಪಿ, ಟಿಎಂಸಿ, ಡಿಎಂಕೆ, ಜೆಎಂಎಂ, ಆರ್‌ಜೆಡಿ, ಎನ್‌ಸಿ, ಸಿಪಿಎಂ, ಸಿಪಿಐ, ಫಾರ್ವರ್ಡ್ ಬ್ಲಾಕ್, ಆರ್‌ಎಸ್‌ಪಿ, ಮುಸ್ಲಿಂ ಲೀಗ್ ಹಾಗೂ ಸಿಪಿಐ (ಎಂಎಲ್‌) ಜಂಟಿ ಹೇಳಿಕೆ ನೀಡಿದ್ದವು.

ಸರ್ಕಾರಿ ಸಂಸ್ಥೆಗಳ ದುರುಪಯೋಗದ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ

2023 ಮಾರ್ಚ್‌ನಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುವ ವಿರುದ್ಧ ವಿಪಕ್ಷಗಳು ಸುಪ್ರೀಂಕೋರ್ಟ್‌ಗೆ ಜಂಟಿ ಅರ್ಜಿ ಸಲ್ಲಿಸಿದ್ದವು. ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಆರ್‌ಜೆಡಿ, ಆಪ್, ಬಿಆರ್‌ಎಸ್, ಎನ್‌ಸಿಪಿ, ಶಿವಸೇನೆ, ಜೆಎಂಎಂ, ಜೆಡಿಯು, ಸಿಪಿಎಂ, ಸಿಪಿಐ, ಎಸ್‌ಪಿ ಹಾಗೂ ಎನ್‌ಸಿ ಅರ್ಜಿಗೆ ಸಹಿ ಹಾಕಿದ್ದವು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X