ಎಲ್ಲರಿಗೂ ಒಬ್ಬರೆ ಸಾಕು ಎಂದು ಸಂಸತ್ತಿನಲ್ಲಿ ಹೇಳುತ್ತಿದ್ದ ನರೇಂದ್ರ ಮೋದಿ ಅವರಿಗೆ 29 -30 ಪಕ್ಷಗಳು ಏಕೆ ಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅವರು, “ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಮಾತನಾಡುವಾಗ ‘ನಿಮ್ಮೆಲ್ಲರಿಗೂ ನಾನೊಬ್ಬನೆ ಸಾಕು’ ಎಂದು ಹೇಳಿದ್ದರು. ಆದರೆ ಅವರೀಗ 30 ಪಕ್ಷಗಳನ್ನು ಏಕೆ ಒಟ್ಟುಗೂಡಿಸಿದ್ದಾರೆ. ಈ 30 ಪಕ್ಷಗಳು ಯಾವುವು, ಅವರ ಹೆಸರುಗಳು ಏನು, ಅವರೆಲ್ಲರೂ ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿದ್ದಾರೆಯೇ? ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
“ಸಂಸತ್ತಿನಲ್ಲಿ ನಮ್ಮ ಮೈತ್ರಿ ಒಟ್ಟಾಗಿ ಕೆಲಸ ಮಾಡುತ್ತದೆ. ಪ್ರಜಾಪ್ರಭುತ್ವವನ್ನು ನಾಶಮಾಡಲು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಪ್ರತಿಪಕ್ಷಗಳಿಗೆ ಬೆದರಿಕೆ ಹಾಕುವುದು ಅವರ ಏಕೈಕ ಗುರಿಯಾಗಿದೆ. ಆದರೆ ನಾವು ನಿರ್ಭೀತರು, ಅವರ ಷಡ್ಯಂತ್ರಗಳನ್ನು ಗಟ್ಟಿಯಾಗಿ ಎದುರಿಸುತ್ತೇವೆ ಮತ್ತು ಜನರ ಪರ ಹೋರಾಟ ನಡೆಸುತ್ತೇವೆ” ಎಂದು ತಿಳಿಸಿದರು
ಒಗ್ಗಟ್ಟಿನ ಸಭೆಯನ್ನು ಸ್ಥಾಪಿಸುವ ವಿಪಕ್ಷಗಳ ಯೋಜನೆ ಬಿಜೆಪಿಯನ್ನು ದಂಗುಬಡಿಸುತ್ತಿದೆ. ಸಂಖ್ಯಾಬಲವನ್ನು ತೋರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಒಡೆದ ಪಕ್ಷಗಳನ್ನು ಒಟ್ಟಿಗೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ಜುಲೈ 18 ರಂದು ದೆಹಲಿಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಭೆಯನ್ನು ಆಯೋಜಿಸುತ್ತಿರುವುದನ್ನು ಉಲ್ಲೇಖಿಸಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
2024ರ ಲೋಕಸಭೆ ಚುನಾವಣೆಗೆ ಜಂಟಿ ಕಾರ್ಯತಂತ್ರವನ್ನು ಯೋಜಿಸಲು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟಿನ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಸ್ಥಾನ ಹಂಚಿಕೆ, ಸಮನ್ವಯ ಹಾಗೂ ಪಕ್ಷಗಳ ನಡುವಿನ ಸಂವಹನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಾಗುತ್ತದೆ. 16 ಪಕ್ಷಗಳ ವಿರೋಧ ಪಕ್ಷದ ನಾಯಕರ ಮೊದಲ ಸಭೆ ಜೂನ್‌ನಲ್ಲಿ ಪಾಟ್ನಾದಲ್ಲಿ ನಡೆದಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಮಹಾ ಮೈತ್ರಿಕೂಟ ಸಭೆ | ಕಾಂಗ್ರೆಸ್‌ಗೆ ಉತ್ತರ ಹತ್ತಿರ; ದೂರವಾಯಿತೇಕೆ ದಕ್ಷಿಣ?
ಕಾಂಗ್ರೆಸ್, ಆರ್‌ಜೆಡಿ, ಜೆಡಿಯು, ಟಿಎಂಸಿ, ಡಿಎಂಕೆ, ಎಎಪಿ, ಎನ್‌ಸಿಪಿ, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ), ಸಿಪಿಐ, ಸಿಪಿಐಎಂ, ಸಮಾಜವಾದಿ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಜೆಎಂಎಂ ಮತ್ತು ರಾಷ್ಟ್ರೀಯ ಲೋಕದಳ ಸೇರಿದಂತೆ 24 ಪಕ್ಷಗಳ ನಾಯಕರು ಬೆಂಗಳೂರಿನ ಸಭೆಯಲ್ಲಿ ಭಾಗವಹಿಸಿದ್ದಾರೆ.
ವಿರೋಧ ಪಕ್ಷಗಳ ಸಭೆಯು ಭಾರತೀಯ ರಾಜಕೀಯದಲ್ಲಿ ಹೊಸ ಬದಲಾವಣೆಯುಂಟಾಗಲಿದೆ. ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ವಿರೋಧ ಪಕ್ಷಗಳು ಸಾಮಾನ್ಯ ಉದ್ದೇಶದಿಂದ ಒಂದಾಗಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ.