ಭಟ್ಕಳದ ಮೀನುಗಾರರ ಸಮುದಾಯದ ಮಂಕಾಳ್ ವೈದ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಬಡತನದ ಕಾರಣಕ್ಕೆ ಬಾಲ್ಯದಲ್ಲೇ ಓದು ಬಿಟ್ಟು ಹೋಟೆಲ್ ಮಾಣಿಯಾಗಿದ್ದ ಮಂಕಾಳ್ ಮಂತ್ರಿಯಾಗುವ ಮಟ್ಟಕ್ಕೆ ಬೆಳೆದು ಬಂದ ಹಾದಿಯೇ ರೋಚಕ.
ಮಂಕಾಳ್ ವೈದ್ಯರ ಹುಟ್ಟೂರು ಭಟ್ಕಳ ತಾಲ್ಲೂಕಿನ ಬೈಲೂರು ಬಳಿಯ ಕೊಪ್ಪದಮಕ್ಕಿ. 1972 ಜೂನ್ 5ರಂದು ಸುಬ್ಬ ವೈದ್ಯ ಮತ್ತು ಭಾಗೀರಥಿಯವರ ನಾಲ್ಕನೇ ಮಗನಾಗಿ ಜನಿಸಿದ ಮಂಕಾಳ್ ಓದಿದ್ದು 8ನೇವರೆಗೆ ತರಗತಿ ಮಾತ್ರ. ಅಷ್ಟೊತ್ತಿಗಾಗಲೇ ತಂದೆ ಸುಬ್ಬ ವೈದ್ಯರು ನಿಧನರಾಗಿದ್ದರು. ಮನೆಯ ಜವಾಬ್ದಾರಿ ಹೆಗಲೇರುತ್ತಲೇ ಶಾಲೆ, ಊರು ಎಲ್ಲವನ್ನೂ ತೊರೆದು ಬೆಂಗಳೂರು ಸೇರಿದ್ದ ಮಂಕಾಳ್ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅಲ್ಲಿ ಜೀವನಕ್ಕಾಗುವಷ್ಟು ಸಂಬಳ ಗಿಟ್ಟುವುದಿಲ್ಲ ಎನ್ನಿಸಿದಾಗ ಊಟ, ವಸತಿಯ ಜೊತೆಗೆ ಸಂಬಳವೂ ಸಿಗುವ ಹೋಟೆಲ್‌ನಲ್ಲಿ ಮಾಣಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಸಪ್ಲೈಯರ್ ಕೆಲಸ ಮಾಡುತ್ತಾ ಹೋಟೆಲ್ ಉದ್ಯಮದ ಆಳ-ಅಗಲವನ್ನು ಸೂಕ್ಷ್ಮವಾಗಿ ಅರಿತುಕೊಳ್ಳುವ ಅವರು ಹುಟ್ಟೂರಿಗೆ ಮರಳಿ ಮುರ್ಡೇಶ್ವರ ಹೆದ್ದಾರಿಯ ಪಕ್ಕದಲ್ಲಿ ʼಕರಾವಳಿ ರೆಸ್ಟೋರೆಂಟ್ʼ ಹೆಸರಿನ ಮೀನೂಟದ ಹೋಟೆಲ್ ಆರಂಭಿಸುತ್ತಾರೆ. ಈ ಹೋಟೆಲ್‌ನಲ್ಲಿ ಹೆಂಡ ಕೂಡ ಹೇರಳವಾಗಿ ಸಿಗುತ್ತಿತ್ತು ಎಂಬ ಆಪಾದನೆಯೂ ಇದೆ. ಆದರೆ, ಹೋಟೆಲ್ ಉದ್ಯಮ ಬೆಸ್ತರ ಹುಡುಗನ ಬದುಕನ್ನೇ ಬದಲಿಸಿತು.
ಹೋಟೆಲ್ ಉದ್ಯಮ ಕೈಹಿಡಿಯುತ್ತಲೇ ಕುಲಕಸುಬಿನತ್ತ ಮುಖ ಮಾಡುವ ಮಂಕಾಳ್ ಮೀನುಗಾರಿಕಾ ಬೋಟ್‌ಗಳ ಒಡೆಯರಾಗುತ್ತಾರೆ. ನೋಡನೋಡುತ್ತಲೇ ಮಂಜುಗಡ್ಡೆಯ ಫ್ಯಾಕ್ಟರಿ, ಪೆಟ್ರೋಲ್ ಬಂಕ್, ಸಿಬಿಎಸ್‌ಸಿ ಶಾಲೆ ಮತ್ತು ಕಾಲೇಜು ಹೀಗೆ ಹಲವು ಉದ್ಯಮಗಳನ್ನು ಪ್ರಾರಂಭಿಸುವ ಮಂಕಾಳ್ ದಶಕದ ಅವಧಿಯಲ್ಲಿ ಭಟ್ಕಳದಲ್ಲಿ ಪ್ರಭಾವಿ ಉದ್ಯಮಿಯಾಗಿ ಬೆಳೆಯುತ್ತಾರೆ.
ಉದ್ಯಮಿಯಾಗಿ ತಮ್ಮ ಸಾಮ್ರಾಜ್ಯವನ್ನು ಹಂತಹಂತವಾಗಿ ವಿಸ್ತರಿಸಿಕೊಳ್ಳುತ್ತಾ ಹೆಜ್ಜೆ ಇಡುತ್ತಿದ್ದ ಮಂಕಾಳ್ ಸ್ಥಳೀಯ ರಾಜಕಾರಣಿಗಳು ಮತ್ತು ಅಧಿಕಾರಿಗಳ ಹಫ್ತಾ ವಸೂಲಿಯ ಕಾಟಕ್ಕೆ ಬೇಸತ್ತು ಉದ್ಯಮದ ಉಳಿವಿಗಾಗಿ ಸಕ್ರಿಯ ರಾಜಕಾರಣದತ್ತ ಮುಖ ಮಾಡುತ್ತಾರೆ. 2005ರಲ್ಲಿ ಮಾವಳ್ಳಿಯಿಂದ ಜಿಲ್ಲಾ ಪಂಚಾಯತ್ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸುವ ಮಂಕಾಳ್ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸುತ್ತಾರೆ. ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುತ್ತಾರೆ. ಸ್ಥಳೀಯವಾಗಿ ಉದ್ಯಮ ಮತ್ತು ರಾಜಕಾರಣ ಎರಡರಲ್ಲೂ ಹಿಡಿತ ಸಾಧಿಸುವ ವೈದ್ಯ, ಮೀಸಲಾತಿ ಬದಲಾದ ಕಾರಣಕ್ಕೆ ಮಾವಳ್ಳಿಯಿಂದ ಸ್ಪರ್ಧಿಸಲಾಗದೆ ಹೊನ್ನಾವರ ಭಾಗದ ʼಜಾಲಿʼ ಕ್ಷೇತ್ರಕ್ಕೆ ವಲಸೆ ಹೋಗುತ್ತಾರೆ.
ಎರಡನೇ ಬಾರಿಯೂ ಪಕ್ಷೇತರರಾಗಿಯೇ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ಅವರು ಬಹುಮತ ಸಾಬೀತುಪಡಿಸಲು ಹೆಣಗಾಡುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿ ಜಿಲ್ಲೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾಗುತ್ತಾರೆ. ಅದೇ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಉಪಾಧ್ಯಕ್ಷರಾಗುವ ಮೂಲಕ ಅದರ ಫಲವನ್ನೂ ಅನುಭವಿಸುತ್ತಾರೆ. ಆ ಹೊತ್ತಿಗೆ ಮಂಕಾಳ್ ವೈದ್ಯ ಎಂಬ ಹೆಸರು ಉತ್ತರ ಕನ್ನಡ ಜಿಲ್ಲೆಯಲ್ಲಿ ತಕ್ಕ ಮಟ್ಟಿಗೆ ಪರಿಚಿತವಾಗಿತ್ತು. ಜೊತೆಗೆ ಪೆಟ್ರೋಲ್, ಡೀಸೆಲ್ ಟ್ಯಾಂಕರ್‌ಗಳ ದರೋಡೆಕೋರರ ಸಂಪರ್ಕದಲ್ಲಿದ್ದಾರೆ ಎಂಬ ಆರೋಪವೂ ಅವರ ವಿರುದ್ಧ ಕೇಳಿ ಬಂದಿತ್ತು. ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾಗಿದ್ದಾಗಲೇ ಇದೇ ವಿಚಾರಕ್ಕೆ ಸಂಬಂಧಿಸಿ ಕ್ರಿಮಿನಲ್ ಪ್ರಕರಣದಲ್ಲಿ ವೈದ್ಯ ಬಂಧನಕ್ಕೂ ಒಳಗಾಗಿದ್ದರು.
ಈ ಸುದ್ದಿ ಓದಿದ್ದೀರಾ? ನಮ್ಮ ಸಚಿವರು | ಎಂ ಬಿ ಪಾಟೀಲ್: ಅಪ್ಪನ ಪ್ರಭಾವ; ದುಡುಕು ಸ್ವಭಾವ
2013ರ ವಿಧಾನಸಭಾ ಚುನಾವಣೆ ಘೋಷಣೆಯಾದಾಗ ಮಂಕಾಳ್ ವೈದ್ಯ ಕಾಂಗ್ರೆಸ್‌ನಿಂದ ಭಟ್ಕಳ ಕ್ಷೇತ್ರದ ಟಿಕೆಟ್ ಬಯಸಿದ್ದರು. ಆದರೆ, ಭಟ್ಕಳ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೆ ಆ ಕ್ಷೇತ್ರದ ಬಹುಸಂಖ್ಯಾತರು ಎನ್ನಿಸಿಕೊಂಡಿರುವ ನಾಮಧಾರಿ ನಾಯ್ಕ ಅಥವಾ ನವಾಯತ ಮುಸ್ಲಿಂ ಪಂಗಡದವರಿಗೆ ಮಾತ್ರ ರಾಜಕೀಯ ಪಕ್ಷಗಳು ಮಣೆ ಹಾಕುತ್ತಿದ್ದವು. ಹೀಗಾಗಿ ನಿರೀಕ್ಷಿತ ಎಂಬಂತೆ ಮಂಕಾಳ್ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಗಲಿಲ್ಲ. ಹಾಗಂತ ಸುಮ್ಮನೇ ಕೂರದ ವೈದ್ಯ ಪಕ್ಷೇತರರಾಗಿ ಕಣಕ್ಕಿಳಿದರು. ನಾಮಧಾರಿ ನಾಯಕರುಗಳ ಪೈಪೋಟಿಯಲ್ಲಿ ಪ್ರಬಲ ಸಮುದಾಯದ ಓಟುಗಳು ಒಡೆದು ಹೋಗಿದ್ದವು. ನವಾಯತ ಸಮುದಾಯದ ಓಟು ನಿರೀಕ್ಷಿಸಿದಂತೆ ಜೆಡಿಎಸ್ ಅಭ್ಯರ್ಥಿಯ ಪಾಲಾಗಲಿಲ್ಲ. ಹಣದ ಪ್ರಭಾವಳಿ ಮತ್ತು ಸಾಮಾಜಿಕ ಕೆಲಸಗಳು ಮಂಕಾಳ್ ವೈದ್ಯರ ಕೈಹಿಡಿದಿದ್ದವು. ಬೆಸ್ತರ ಮನೆಮಗ ಮೊದಲ ಪ್ರಯತ್ನದಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಆಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದ ವೈದ್ಯ, ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿದರು. ಆದರೆ, 2018ರ ವಿಧಾನಸಭಾ ಚುನಾವಣೆಯ ವೇಳೆಗೆ ಕರಾವಳಿಯಲ್ಲಿ ಕೋಮು ಧ್ರುವೀಕರಣದ ಅಲೆ ಜೋರಾಗಿತ್ತು. ಇದೇ ಅಲೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಂಕಾಳ್ ವೈದ್ಯರ ಸೋಲಿಗೂ ಕಾರಣವಾಯಿತು. ಬಿಜೆಪಿಯ ಸುನಿಲ್ ನಾಯ್ಕ ಗೆಲುವು ಸಾಧಿಸಿದರು.
ಚುನಾವಣೆಯಲ್ಲಿ ಸೋತ ಕಾರಣಕ್ಕೆ ಕ್ಷೇತ್ರದ ಜನಕ್ಕೆ ಬೆನ್ನು ತೋರಿಸದೆ ಅದೇ ಆಪ್ತತೆಯನ್ನು ಕಾಪಾಡಿಕೊಂಡು, ಜನರ ಕುಂದು ಕೊರತೆಗಳನ್ನು ಆಲಿಸುತ್ತಾ, ಕೈಲಾದ ಸಹಾಯ ಮಾಡುತ್ತಾ ಬಂದ ಮಂಕಾಳ್ ವೈದ್ಯ ಕ್ಷೇತ್ರದುದ್ದಕ್ಕೂ ಪಕ್ಷ ಸಂಘಟನೆ ಮಾಡಿದರು. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಒಂದು ಲಕ್ಷ ಮತಗಳನ್ನು ಪಡೆಯುವ ಮೂಲಕ ನಿರೀಕ್ಷೆಗಿಂತ ದೊಡ್ಡ ಮಟ್ಟದ ಗೆಲುವನ್ನೇ ತಮ್ಮದಾಗಿಸಿಕೊಂಡರು. ಅಷ್ಟೇ ಅಲ್ಲ, ಈ ಬಾರಿ ಜಿಲ್ಲೆಯಲ್ಲೇ ಅತಿಹೆಚ್ಚು ಮತ ಗಳಿಸಿದ ಶಾಸಕ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಮೊದಲ ಬಾರಿಗೆ ಮಂತ್ರಿಯಾದ ಮಂಕಾಳ್ ವೈದ್ಯ ಎದುರಿಗಿವೆ ಹಲವು ಸವಾಲು
ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಲೇ ಮಂತ್ರಿಗಿರಿಯನ್ನು ದಕ್ಕಿಸಿಕೊಳ್ಳುವುದರಲ್ಲಿ ಮಂಕಾಳ್ ಯಶಸ್ವಿಯಾಗಿದ್ದಾರೆ. ತಮಗೆ ಸರಿ ಹೊಂದುವ ಮೀನುಗಾರಿಕೆ ಮತ್ತು ಬಂದರು ಸಚಿವರಾಗಿ ಮತ್ತು ತಮ್ಮ ತವರು ಜಿಲ್ಲೆ ಉತ್ತರ ಕನ್ನಡದ ಉಸ್ತುವಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಆರ್.ವಿ ದೇಶಪಾಂಡೆ ಆದಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವರಾಮ್ ಹೆಬ್ಬಾರ್‌ವರೆಗೆ ಹಲವು ಪ್ರಭಾವಿ ಸಚಿವರನ್ನು ಕಂಡ ಉತ್ತರ ಕನ್ನಡ ಜಿಲ್ಲೆ ಈವರೆಗೆ ಅಭಿವೃದ್ಧಿಯನ್ನು ಮಾತ್ರ ಕಂಡಿಲ್ಲ. ದಶಕಗಳಿಂದ ಹಿಂದುಳಿದ ಜಿಲ್ಲೆಯಾಗೇ ಉಳಿದಿರುವ ಉತ್ತರ ಕನ್ನಡದಲ್ಲಿ ಅರಣ್ಯ ಅತಿಕ್ರಮಣದ ಸಮಸ್ಯೆ ಇನ್ನು ಜಟಿಲವಾಗಿಯೇ ಇದೆ. ಈಗ ಮಂಕಾಳ್ ವೈದ್ಯ ಕರಾವಳಿಯ ಉದ್ದಕ್ಕೂ ಮೀನುಗಾರಿಕಾ ಬಂದರುಗಳ ಸ್ಥಾಪನೆಗೆ ಒತ್ತು ನೀಡಬೇಕಿದೆ. ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆನ್ನುವ ಕೂಗು ಬಹಳ ವರ್ಷಗಳಿಂದ ಇದೆ. ಕಳೆದ ಬಜೆಟ್‌ನಲ್ಲಿ ಕುಮಟಾಗೆ ಆಸ್ಪತ್ರೆ ಮಂಜೂರಾಗಿದೆ. ಅದರ ನಿರ್ಮಾಣ ಕಾರ್ಯ ಚುರುಕುಗೊಳ್ಳಬೇಕಿದೆ. ಅಕ್ರಮ ಮರಳು ಮಾಫಿಯಾಗೆ ಸ್ವತಃ ಮಂಕಾಳ್ ವೈದ್ಯರೇ ನೆರವಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಜಿಲ್ಲೆಯ ಮತ್ತು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಇಲಾಖೆಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಅಗತ್ಯವಿದೆ.