ಗೊಡ್ಡು ಬೆದರಿಕೆ ಹಾಕುವ ಮೂಲಕ ನಮ್ಮ ಹೋರಾಟವನ್ನು, ಪಾದಯಾತ್ರೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಬೆಂಗಳೂರು ನಗರದಲ್ಲಿ ಸೋಮವಾರ ನಡೆದ ಮೈಸೂರು ಪಾದಯಾತ್ರೆಯ ಪೂರ್ವ ತಯಾರಿ ಸಭೆಯ ಸಂದರ್ಭದಲ್ಲಿ ಮಾತನಾಡಿದ ಅವರು, “ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳೇ, ನಿಮ್ಮ ಗೊಡ್ಡು ಬೆದರಿಕೆಗೆ ನಮ್ಮ ಕಾರ್ಯಕರ್ತರು ಅಂಜುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
“ರಾಜ್ಯದ ಪರಿಶಿಷ್ಟ ಜಾತಿ, ಪಂಗಡಗಳ ಪರವಾಗಿ ನಮ್ಮ ಹೋರಾಟ ನಿರಂತರ ಇರಲಿದೆ. ಪರಿಶಿಷ್ಟರ ಸಮುದಾಯದ ಹಣ ಲೂಟಿ ಮಾಡಲಾಗಿದೆ. ಸಾವಿರಾರು ಕೋಟಿಯ ಭ್ರಷ್ಟಾಚಾರ ನಡೆದಿದೆ. ಇವುಗಳ ವಿರುದ್ಧ ಹೋರಾಟ ನಡೆಸದೆ ಇದ್ದರೆ ಭಗವಂತನೂ ನಮ್ಮನ್ನು ಕ್ಷಮಿಸುವುದಿಲ್ಲ” ಎಂದರು.
“ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ನಾವು ಈ ಕುರಿತು ಒತ್ತಡ ಹೇರಿ ಚರ್ಚೆಗೆ ಅವಕಾಶ ಪಡೆದಿದ್ದೇವೆ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಬಿಜೆಪಿ ಸರಕಾರ ಇದ್ದಾಗ ಕೊಟ್ಟಿದ್ದ ಅನುದಾವನ್ನು ಸ್ಥಗಿತಗೊಳಿಸಿದ್ದಾರೆ. ಅಕ್ರಮ ಬಗ್ಗೆ ಸರಕಾರ ರಚಿಸಿದ ಎಸ್‍ಐಟಿ ಎಂದರೆ ಅದು ಸಿದ್ದರಾಮಯ್ಯ ಇನ್‍ವೆಸ್ಟಿಗೇಶನ್ ಅಷ್ಟೇ. ಅಹಿಂದ ಸಮುದಾಯಕ್ಕೆ ವಂಚಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ” ಎಂದು ಟೀಕಿಸಿದರು.
ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, “ಸಿದ್ದರಾಮಯ್ಯನವರ ಬಾವಮೈದುನ 3.16 ಎಕರೆ ಜಮೀನನ್ನು ಅತಿ ಕಡಿಮೆ ಬೆಲೆಗೆ ಪಡೆದಿದ್ದಾರೆ. ಇದೇನಾ ಸಿದ್ದರಾಮಯ್ಯ ಅವರ ಜನಪರತೆ” ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, “ವಾಲ್ಮೀಕಿ ನಿಗಮದ ಹಣ ಅವ್ಯವಹಾರದಿಂದ ಪರಿಶಿಷ್ಟ ಸಮುದಾಯಗಳಿಗೆ ಅನ್ಯಾಯವಾಗಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜನರಿಗೆ ಸತ್ಯ ತಿಳಿಸಲು ಪಾದಯಾತ್ರೆ: ಸಿ ಟಿ ರವಿ
“ಜನರಿಗೆ ಸತ್ಯವನ್ನು ಹೇಳುವುದೇ ಪಾದಯಾತ್ರೆಯ ಉದ್ದೇಶ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಅವರಿಗೆ ಸತ್ಯದ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಬೆಂಗಳೂರಿನಿಂದ ಮೈಸೂರುವರೆಗೆ ಎನ್‍ಡಿಎ ವತಿಯಿಂದ ಪಾದಯಾತ್ರೆ ಮಾಡುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಹೇಳಿದರು.
“ವಿವಿಧ ಹಗರಣಗಳ ಕುರಿತು ಸರಕಾರವು ನಮಗೆ ವಿಧಾನಮಂಡಲದಲ್ಲಿ ಚರ್ಚೆ ನಡೆಸಲು ಅವಕಾಶ ಕೊಟ್ಟಿಲ್ಲ. ಸರಕಾರಕ್ಕೆ ಸತ್ಯವನ್ನು ಎದುರಿಸುವ ಧಮ್ ಇದ್ದಿದ್ದರೆ ಅವರು ವಿಧಾನಮಂಡಲದಲ್ಲಿ ಚರ್ಚೆಗೆ ಅವಕಾಶ ಕೊಡುತ್ತಿದ್ದರು ಎಂದು ವಿಶ್ಲೇಷಿಸಿದರು.
ಮೂಡ ಹಗರಣ, ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಸೇರಿ ಎಲ್ಲ ಅವ್ಯವಹಾರಗಳನ್ನು ಜನರಿಗೆ ತಿಳಿಸುತ್ತೇವೆ” ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್‍ಕುಮಾರ್, ಪ್ರೀತಂ ಗೌಡ, ಕುಡಚಿ ರಾಜೀವ್, ನಂದೀಶ್ ರೆಡ್ಡಿ, ಮಾಜಿ ಸಚಿವ ಬೈರತಿ ಬಸವರಾಜ್, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಂಸದರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು, ಜಿಲ್ಲಾಧ್ಯಕ್ಷರು ಮತ್ತು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.