ವಕ್ಫ್ (ತಿದ್ದುಪಡಿ) ಕಾಯ್ದೆ ವಿರುದ್ಧ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಪೊಲೀಸರು ಸುಮಾರು 110ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.
ಶುಕ್ರವಾರ ವಕ್ಫ್ ಕಾಯ್ದೆಯನ್ನು ವಿರೋಧಿಸಿ ಮಾಲ್ಡಾ, ಮುರ್ಷಿದಾಬಾದ್, ದಕ್ಷಿಣ 24 ಪರಗಣ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿದೆ. ಈ ವೇಳೆ ಪೊಲೀಸ್ ವ್ಯಾನ್‌ಗಳು ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಾಕಲಾಗಿದೆ. ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆದಿದೆ, ರಸ್ತೆಗಳಲ್ಲಿ ನಿರ್ಬಂಧ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದಿರಾ? ಪಶ್ಚಿಮ ಬಂಗಾಳ | ಹಿಂಸಾಚಾರಕ್ಕೆ ತಿರುಗಿದ ವಕ್ಫ್ ಪ್ರತಿಭಟನೆ: ಹಲವು ವಾಹನಗಳಿಗೆ ಬೆಂಕಿ
ಈ ಹಿಂಸಾಚಾರದ ಬೆನ್ನಲ್ಲೇ ಈವರೆಗೆ 110ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ. “ಸುಟಿಯಲ್ಲಿ ಸುಮಾರು 70 ಮಂದಿಯನ್ನು ಮತ್ತು ಸಂಸರ್‌ಗಂಜ್‌ನಲ್ಲಿ 41 ಮಂದಿಯನ್ನು ಬಂಧಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶುಕ್ರವಾರ ಹಿಂಸಾಚಾರ ಶುರುವಾಗಿದ್ದು ಶನಿವಾರ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿಯಿತ್ತು. ಆದರೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಹೇಳಲಾಗಿದೆ. ಅಧಿಕ ಹಿಂಸಾಚಾರ, ಆಸ್ತಿಪಾಸ್ತಿ ಹಾನಿ ಉಂಟಾದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಜೊತೆಗೆ ಇಂಟರ್‌ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಅಧಿಕಾರಿ, “ಸುಟಿ ಮತ್ತು ಸಂಸರ್‌ಗಂಜ್ ಪ್ರದೇಶಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಯಾರೂ ಕೂಡಾ ಗುಂಪು ಸೇರಲು ಅವಕಾಶವಿಲ್ಲ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಯಾವುದೇ ಕಾರ್ಯಕ್ಕೂ ಅವಕಾಶವಿಲ್ಲ. ಹಾಗೆಯೇ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ವದಂತಿಗಳಿಗೆ ಕಿವಿಕೊಡಬೇಡಿ” ಎಂದು ತಿಳಿಸಿದ್ದಾರೆ.
ಇನ್ನು ಸುಟಿಯಲ್ಲಿ ನಡೆದ ಘರ್ಷಣೆ ವೇಳೆ ಪೊಲೀಸರ ಗುಂಡೇಟಿನಿಂದ ಗಾಯಗೊಂಡ ಬಾಲಕನನ್ನು ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿದೆ.
সবার কাছে আবেদন
— Mamata Banerjee (@MamataOfficial) April 12, 2025
সব ধর্মের সকল মানুষের কাছে আমার একান্ত আবেদন, আপনারা দয়া করে শান্ত থাকুন, সংযত থাকুন। ধর্মের নামে কোনো অ-ধার্মিক আচরণ করবেন না। প্রত্যেক মানুষের প্রাণই মূল্যবান, রাজনীতির স্বার্থে দাঙ্গা লাগাবেন না। দাঙ্গা যারা করছেন তারা সমাজের ক্ষতি করছেন।
মনে রাখবেন, যে…
ಇವೆಲ್ಲವುದರ ನಡುವೆ ಮಮತಾ ಬ್ಯಾನರ್ಜಿ ಸರ್ಕಾರವು ಪರಿಸ್ಥಿತಿಯನ್ನು ನಿಭಾಯಿಸಲು ಅಸಮರ್ಥರಾಗಿದ್ದರ, ಕೇಂದ್ರ ಸರ್ಕಾರದಿಂದ ಸಹಾಯ ಪಡೆಯಲಿ ಎಂದು ಬಿಜೆಪಿ ಹೇಳಿದೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆ ಜಾರಿ ಮಾಡಲ್ಲ: ಮಮತಾ ಬ್ಯಾನರ್ಜಿ
“ಇದು ಪ್ರತಿಭಟನೆ ವೇಳೆ ನಡೆದಿರುವ ಹಿಂಸಾಚಾರವಲ್ಲ, ಇದು ಪೂರ್ವಯೋಜಿತ ಕೃತ್ಯ. ನಮ್ಮ ಸಮಾಜದ ಇತರ ಸಮುದಾಯಗಳಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಲು ಮತ್ತು ಭಯವನ್ನು ಹರಡಲು ಜಿಹಾದಿ ಶಕ್ತಿಗಳು ಪ್ರಜಾಪ್ರಭುತ್ವ ಮತ್ತು ಆಡಳಿತದ ಮೇಲೆ ನಡೆಸಿದ ದಾಳಿ ಎಂಬುದು ತಿಳಿದಿರಲಿ” ಎಂದು ಎಲ್ಲಾ ವಿಚಾರದಲ್ಲಿಯೂ ಧಾರ್ಮಿಕ ಬೀಜ ಬಿತ್ತುವ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಈಗಾಗಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ವಕ್ಫ್ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅದಾದ ಬಳಿಕವೂ ವಕ್ಫ್ ವಿರುದ್ಧ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿದ್ದಂತೆ ಮತ್ತೆ ವಕ್ಫ್ ಜಾರಿ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಶಾಂತಿ ಕಾಪಾಡಿಕೊಳ್ಳುವಂತೆ ನಾವು ಎಲ್ಲಾ ಧರ್ಮದ ಜನರಲ್ಲಿ ವಿನಂತಿಸುತ್ತೇವೆ. ಧರ್ಮದ ವಿಚಾರದಲ್ಲಿ ಯಾವುದೇ ಅಧರ್ಮವನ್ನು ಮಾಡಬೇಡಿ. ಎಲ್ಲಾ ಮನುಷ್ಯರ ಜೀವವೂ ಅಮೂಲ್ಯ. ರಾಜಕೀಯದಿಂದ ಪ್ರೇರಣೆಯಾಗಿ ಹಿಂಸಾಚಾರ ಮಾಡಬೇಡಿ. ಗಲಭೆ ಸೃಷ್ಟಿಸುವವರು ಸಮಾಜಕ್ಕೆ ಹಾನಿಯುಂಟು ಮಾಡುತ್ತಿದ್ದಾರೆ” ಎಂದು ಮಮತಾ ಬ್ಯಾನರ್ಜಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ನಾವು ಈ ಕಾಯ್ದೆಯನ್ನು ರಚಿಸಿರುವುದಲ್ಲ, ಕೇಂದ್ರ ಸರ್ಕಾರ ರಚಿಸಿರುವುದು ಎಂಬುದು ನನೆಪಿರಲಿ. ಆದ್ದರಿಂದ ನಿಮ್ಮಲಿರುವ ಪ್ರಶ್ನೆಯನ್ನು ನೀವು ಕೇಂದ್ರ ಸರ್ಕಾರದ ಬಳಿಯೇ ಕೇಳಬೇಕು. ನಾವು ಈಗಾಗಲೇ ಈ ವಿಚಾರದಲ್ಲಿ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ನಾನು ವಕ್ಫ್ ಕಾಯ್ದೆಯನ್ನು ಬೆಂಬಲಿಸಲ್ಲ, ಕಾಯ್ದೆಯನ್ನು ನಮ್ಮ ರಾಜ್ಯದಲ್ಲಿ ಜಾರಿಗೊಳಿಸಲ್ಲ. ಹಾಗಿರುವಾಗ ಈ ಗಲಭೆ ಯಾಕಾಗಿ” ಎಂದು ಪಶ್ಚಿಮ ಬಂಗಾಳ ಸಿಎಂ ಪ್ರಶ್ನಿಸಿದ್ದಾರೆ.
