ಸರ್ಕಾರಿ ಸ್ವಾಮ್ಯದ ಉದ್ಯಮಗಳಲ್ಲಿ(ಪಿಎಸ್ಯು) ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಕೆಲವೇ ಕೆಲವು ‘ಆಪ್ತ ಬಂಡವಾಳಶಾಹಿ ಸ್ನೇಹಿತರ’ ಲಾಭಕ್ಕಾಗಿ ಕೇಂದ್ರ ಸರ್ಕಾರ ಲಕ್ಷಗಟ್ಟಲೆ ಯುವಕರ ಭರವಸೆಯನ್ನು ತುಳಿದುಹಾಕಿದೆ. ಸಾರ್ವಜನಿಕ ಸ್ವಾಮ್ಯದ ಉದ್ಯಮಗಳು ಭಾರತದ ಹೆಮ್ಮೆ ಹಾಗೂ ಉದ್ಯೋಗಕ್ಕಾಗಿ ಪ್ರತಿಯೊಬ್ಬ ಯುವಕನ ಕನಸಾಗಿದ್ದವು. ಆದರೆ, ಇಂದು ಅವು ಸರ್ಕಾರದ ಆದ್ಯತೆಯಾಗಿ ಉಳಿದಿಲ್ಲ” ಎಂದು ಟೀಕಿಸಿದರು.
“ದೇಶದ ಪಿಎಸ್ಯುಗಳಲ್ಲಿ ಉದ್ಯೋಗಾವಕಾಶವು 2014 ರಲ್ಲಿ 16.9 ಲಕ್ಷದಿಂದ 2022 ರಲ್ಲಿ 14.6 ಲಕ್ಷಕ್ಕೆ ಇಳಿದಿದೆ. ಬಿಎಸ್ಎನ್ಎಲ್ನಲ್ಲಿ 1,81,127, ಎಸ್ಎಐಎಲ್ನಲ್ಲಿ 61,928, ಎಂಟಿಎನ್ಎಲ್ನಲ್ಲಿ 34,997; ಎಸ್ಇಸಿಎಲ್ನಲ್ಲಿ 29,140; ಎಫ್ಸಿಐನಲ್ಲಿ 28,063; ಒಎನ್ಜಿಸಿಯಲ್ಲಿ 21,120 ಉದ್ಯೋಗಗಳು ಕಡಿತಗೊಂಡಿವೆ” ಎಂದು ಮಾಹಿತಿ ನೀಡಿದ್ದಾರೆ.
“ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಸುಳ್ಳು ಭರವಸೆಗಳನ್ನು ನೀಡಿದವರು, ಉದ್ಯೋಗಗಳನ್ನು ಹೆಚ್ಚಿಸುವ ಬದಲು ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿದ್ದಾರೆ. ಇದರೊಂದಿಗೆ, ಈ ಸಂಸ್ಥೆಗಳಲ್ಲಿ ಗುತ್ತಿಗೆ ನೇಮಕಾತಿಗಳನ್ನು ದ್ವಿಗುಣಗೊಳಿಸಲಾಗಿದೆ. ಗುತ್ತಿಗೆ ನೌಕರರನ್ನು ಹೆಚ್ಚಿಸುವುದು ಸಾಂವಿಧಾನಿಕ ಮೀಸಲಾತಿಯ ಹಕ್ಕನ್ನು ಕಸಿದುಕೊಳ್ಳುವ ಮಾರ್ಗವಲ್ಲವೇ? ಇದು ಈ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಷಡ್ಯಂತ್ರವೇ?’ ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಜನರ ಭಾವನೆಗಳಿಗೆ ಧಕ್ಕೆ; ‘ಆದಿಪುರುಷ್’ ಚಿತ್ರದ ವಿರುದ್ಧ ಕಾಂಗ್ರೆಸ್, ಎಎಪಿ, ಶಿವಸೇನೆ ಆಕ್ರೋಶ
“ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮತ್ತು ಪಿಎಸ್ಯುಗಳಿಂದ ಸರ್ಕಾರಿ ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ. ಇದು ಯಾವ ರೀತಿಯ ‘ಅಮೃತ ಕಾಲ’. ಇದು ನಿಜವಾಗಿಯೂ ‘ಅಮೃತ ಕಾಲ’ ಆಗಿದ್ದರೆ, ಉದ್ಯೋಗಗಳು ಏಕೆ ಈ ರೀತಿ ಕಣ್ಮರೆಯಾಗುತ್ತಿವೆ” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
“ದೇಶದ ಪಿಎಸ್ಯುಗಳು ಸರಿಯಾದ ವಾತಾವರಣ ಮತ್ತು ಸರ್ಕಾರದಿಂದ ಬೆಂಬಲ ಪಡೆದರೆ, ಅವು ಆರ್ಥಿಕತೆ ಮತ್ತು ಉದ್ಯೋಗ ಎರಡನ್ನೂ ಉತ್ತೇಜಿಸಲು ಸಮರ್ಥವಾಗಿವೆ. ಪಿಎಸ್ಯುಗಳು ದೇಶದ ಮತ್ತು ಜನರ ಆಸ್ತಿಯಾಗಿದ್ದು, ಭಾರತದ ಅಭಿವೃದ್ಧಿಯ ಹಾದಿಯನ್ನು ಬಲಪಡಿಸಲು ಅವುಗಳನ್ನು ಉತ್ತೇಜಿಸಬೇಕು” ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿದರು.