2022-23ರ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಅಡಿಯಲ್ಲಿ 7.43 ಲಕ್ಷಕ್ಕೂ ಹೆಚ್ಚು ನಕಲಿ ಉದ್ಯೋಗ ಕಾರ್ಡ್‌ಗಳನ್ನು ಡಿಲೀಟ್ ಮಾಡಲಾಗಿದೆ. ಇದರಲ್ಲಿ 2.96 ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳನ್ನು ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ರದ್ದುಗೊಳಿಸಲಾಗಿದೆ ಎಂಬ ಅಚ್ಚರಿಯ ಮಾಹಿತಿಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ.
ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿ ಈ ವಿವರಗಳನ್ನು ಹಂಚಿಕೊಂಡಿದ್ದಾರೆ.
ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಾರಿ ನಕಲಿ ಉದ್ಯೋಗ ಕಾರ್ಡ್‌ಗಳನ್ನು ತೆಗೆದು ಹಾಕುವಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. 2021-22 ರಲ್ಲಿ 3,06,944 ನಕಲಿ ಉದ್ಯೋಗ ಕಾರ್ಡ್‌ಗಳನ್ನು ಅಳಿಸಲಾಗಿತ್ತು. ಆದರೆ ಈ ಬಾರಿ ಅದರ ಸಂಖ್ಯೆ 7,43,457 ಕ್ಕೆ ಏರಿಕೆಯಾಗಿದೆ ಎಂದು ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಒದಗಿಸಿರುವ ವಿವರದಲ್ಲಿ, ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ 2,96,464 ನಕಲಿ ಉದ್ಯೋಗ ಕಾರ್ಡ್‌ಗಳನ್ನು ಅಳಿಸುವ ಮೂಲಕ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಒಡಿಶಾದಲ್ಲಿ 1,14,333 ನಕಲಿ ಉದ್ಯೋಗ ಕಾರ್ಡ್ ಅಳಿಸುವ ಮೂಲಕ ನಂತರದ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.
ಜಾಬ್ ಕಾರ್ಡ್‌ಗಳನ್ನು ಅಳಿಸುವುದು ಮತ್ತು ನವೀಕರಿಸುವುದು ನಿರಂತರ ಪ್ರಕ್ರಿಯೆ. ಕಾಯ್ದೆಯ ಸೆಕ್ಷನ್ 25ರ ಪ್ರಕಾರ, ನಿಬಂಧನೆಗಳನ್ನು ಉಲ್ಲಂಘಿಸಿದರೆ 1,000 ರೂ.ವರೆಗೆ ದಂಡ ವಿಧಿಸಬಹುದು. ಅಲ್ಲದೆ, ನಕಲಿ ಜಾಬ್ ಕಾರ್ಡ್ ವಿತರಣೆಯನ್ನು ತಡೆಯಲು ಫಲಾನುಭವಿಗಳ ಡೇಟಾಬೇಸ್‌ನ ನಕಲು ಮಾಡಲು ಆಧಾರ್ ಸೀಡಿಂಗ್ ಕಡ್ಡಾಯಗೊಳಿಸಲಾಗಿದೆ ಎಂದು ಸಚಿವೆ ಜ್ಯೋತಿ ಹೇಳಿದ್ದಾರೆ.
STORY | Over 7.43 lakh MGNREGA ‘fake job cards’ deleted in 2022-23, highest in UP
READ: https://t.co/4suxqUxPHO pic.twitter.com/Y4DwIeH3t2
— Press Trust of India (@PTI_News) December 9, 2023
ಈ ಮಧ್ಯೆ, 2022-23ರಲ್ಲಿ 6,47,8345 ಹೊಸ ಜಾಬ್ ಕಾರ್ಡ್‌ಗಳನ್ನು ನೀಡಲಾಗಿದೆ ಎಂದು ಜ್ಯೋತಿ ಲೋಕಸಭೆಗೆ ಮತ್ತೊಂದು ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದರು.
2021-22ರಲ್ಲಿ 1,20,63,967 ಹೊಸ ಜಾಬ್ ಕಾರ್ಡ್‌ಗಳನ್ನು ನೀಡಲಾಗಿದೆ. ಆದರೆ, 2020-21ರಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಧಿಸಲಾಗಿತ್ತು. ಈ ವೇಳೆ 1,91,05,369 ಹೊಸ ಜಾಬ್ ಕಾರ್ಡ್‌ಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಉದ್ಯೋಗ ಕಾರ್ಡ್‌ಗಳನ್ನು ವಿವಿಧ ಕಾರಣಗಳಿಗಾಗಿ ಅಳಿಸಲಾಗುತ್ತದೆ. ಇವುಗಳು ನಕಲಿ ಎಂದು ತಿಳಿದಾಗ ಫಲಾನುಭವಿಯು ಪಂಚಾಯತ್ ಪ್ರದೇಶದಿಂದ ಹೊರಬಂದಾಗ ಮರಣ ಹೊಂದಿದಾಗ ಜಾಬ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುತ್ತದೆ.
ಮುಂಗಾರು ಅಧಿವೇಶನದ ವೇಳೆ ಲೋಕಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ನೀಡಿದ ಉತ್ತರದಂತೆ, 2022- 23ರಲ್ಲಿ 5.18 ಕೋಟಿ ಉದ್ಯೋಗಿಗಳನ್ನು ಒಳಗೊಂಡ ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದೆ. ಇದು 2021-22ಕ್ಕೆ ಹೋಲಿಸಿದರೆ ಶೇಕಡಾ 247.06ರಷ್ಟು ಹೆಚ್ಚು ಎಂದು ತಿಳಿದುಬಂದಿದೆ.