- ಪ್ರಿಯಾಂಕ್ ಖರ್ಗೆಯಿಂದ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನೆ
- ಗೋಮಾಳ ಭೂಮಿಯಲ್ಲಿ ಗಿಡ-ಮರ ಬೆಳೆಸಲು ಸಚಿವರ ಸೂಚನೆ
ರಾಜ್ಯದಲ್ಲಿ ಸ್ವಂತ ಕಟ್ಟಡಗಳ ಸೌಲಭ್ಯವಿಲ್ಲದ ಗ್ರಾಮ ಪಂಚಾಯಿತಿ ಕಚೇರಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಇಂತಹ ಸ್ಥಳಗಳಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡುವ ಸಲುವಾಗಿ ನರೇಗಾ ಯೋಜನೆಯಡಿ 20 ಲಕ್ಷ ರೂ.ಗಳ ಜೊತೆಗೆ ಮತ್ತಷ್ಟು ಅನುದಾನ ಒದಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸಚಿವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಬುಧವಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ಭವಿಷ್ಯದ ದೃಷ್ಟಿಯನ್ನಿರಿಸಿಕೊಂಡು ಗ್ರಾಮ ಪಂಚಾಯಿತಿಗಳ ಸದಸ್ಯರ ಸಂಖ್ಯೆಗೆ ಅನುಗುಣವಾಗುವಂತೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಕ್ರಮ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಗೋಮಾಳ ಭೂಮಿಯನ್ನು ಸಂರಕ್ಷಿಸುವ ಸಲುವಾಗಿ ಅಂತಹ ಸ್ಥಳಗಳಲ್ಲಿ ನರೇಗಾ ಕಾರ್ಯಕ್ರಮದಡಿ ಗಿಡಗಳನ್ನು ನೆಟ್ಟು ಪೋಷಿಸಬೇಕು. ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾಗಿರುವ ಮಹಿಳಾ ಪ್ರತಿನಿಧಿಗಳ ಸಬಲೀಕರಣಕಾಗಿ ಪುನಶ್ಚೇತನ, ನಾಯಕತ್ವ ಕುರಿತಂತೆ ತರಬೇತಿ ನೀಡುವುದರೊಂದಿಗೆ ಲೆಕ್ಕ ನಿರ್ವಹಣೆ ಸೇರಿದಂತೆ ಹಣಕಾಸು ವ್ಯವಸ್ಥೆಯ ಬಗ್ಗೆ ಅರಿವು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಚಿವರು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ‘ಲಂಚ ಭಾಗ್ಯ’ ಯೋಜನೆ ನಿಮ್ಮ ಮುಂದಿನ ಹೆಜ್ಜೆ; ಸಿದ್ದರಾಮಯ್ಯಗೆ ವಿಜಯೇಂದ್ರ ತಿರುಗೇಟು
ರಾಜ್ಯದ ಬಹುಪಾಲು ಗ್ರಾಮಗಳಲ್ಲಿ ಅಳವಡಿಸಲಾಗಿರುವ ಶುದ್ಧ ನೀರಿನ ಘಟಕಗಳ ನಿರ್ವಹಣೆಗಾಗಿ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ವಾರ್ಷಿಕ ನಿರ್ವಹಣೆ ನೀಡಲು ಕ್ರಮ ಆಗಬೇಕು. ಪ್ರತಿ ಗ್ರಾಮದಲ್ಲಿಯೂ ಲಭ್ಯವಿರುವ ನೀರಿನ ಮೂಲವನ್ನು ಸಂಗ್ರಹಿಸಲು ನಡೆಸಲಾಗುತ್ತಿರುವ ನೀರಿನ ಆಡಿಟ್ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಲದ ಮಟ್ಟ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಲು ಹೇಳಿದ ಪ್ರಿಯಾಂಕ್ ಖರ್ಗೆ ಅವರು ಸಮಿತಿಯಲ್ಲಿ ವಿವಿಧ ಕ್ಷೇತ್ರಗಳ ಮತ್ತಷ್ಟು ತಜ್ಞರನ್ನು ಸೇರಿಸಿಕೊಳ್ಳಬೇಕು. ರಾಜ್ಯದಲ್ಲಿ 7,100 ಕಿ ಮೀ ಗ್ರಾಮೀಣ ರಸ್ತೆ ಅಭಿವೃದ್ಧಿ ಮಾಡಲು ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಕಳಪೆ ಕಾಮಗಾರಿ ಮಾಡಿದ ಆರು ಮಂದಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲೂ ನಿರ್ದೇಶನ ನೀಡಿದರು.