- ₹127 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಫುಟ್ಬಾಲ್ ಕ್ರೀಡಾಂಗಣ
- ಕಳೆದ ವರ್ಷ ನಿರ್ಮಾಣ ಹಂತದಲ್ಲಿದ್ದ ರಾಜ್ಯ ವಿಧಾನಸಭೆ ಭಾಗ ಕುಸಿತ
ಮೇಘಾಲಯದ ತುರಾದಲ್ಲಿರುವ ಪಿ.ಎ ಸಂಗ್ಮಾ ಫುಟ್ಬಾಲ್ ಕ್ರೀಡಾಂಗಣ ತಡೆಗೋಡೆ ಕುಸಿದಿದೆ ಎಂದು ಅಧಿಕಾರಿಗಳು ಶುಕ್ರವಾರ (ಜೂನ್ 23) ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಫುಟ್ಬಾಲ್ ಕ್ರೀಡಾಂಗಣವನ್ನು ಮುಖ್ಯಮಂತ್ರಿ ಕಾನ್ರಾಡ್ ಕೆ.ಸಂಗ್ಮಾ ಅವರು ಉದ್ಘಾಟಿಸಿದ್ದರು. ಇದಾದ ಆರು ತಿಂಗಳ ನಂತರ ಕ್ರೀಡಾಂಗಣದ ಒಂದು ಭಾಗ ಕುಸಿದು ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫುಟ್ಬಾಲ್ ಕ್ರೀಡಾಂಗಣ ಭಾಗ ಕುಸಿದಿರುವ ಘಟನೆ ಗುರುವಾರ (ಜೂನ್ 22) ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಫುಟ್ಬಾಲ್ ಕ್ರೀಡಾಂಗಣವನ್ನು ರಾಜ್ಯ ಸರ್ಕಾರ ಸುಮಾರು ₹127 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಇದು ಪಿ.ಎ ಸಂಗ್ಮಾ ಕ್ರೀಡಾ ಸಂಕೀರ್ಣದ ಭಾಗವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
“ಕ್ರೀಡಾ ಸಂಕೀರ್ಣದ ಭಾಗವಾಗಿರುವ ಫುಟ್ಬಾಲ್ ಕ್ರೀಡಾಂಗಣದ ಬಾಹ್ಯ ತಡೆಗೋಡೆಯ ಒಂದು ಭಾಗ ಕುಸಿದಿದೆ. ತುರಾ ಮತ್ತು ವೆಸ್ಟ್ ಗರೋ ಹಿಲ್ಸ್ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಹಾನಿ ಉಂಟಾಗಿದೆ. ಪರಿಣಾಮ ತಡೆಗೋಡೆ ಕುಸಿದಿರಬಹುದು” ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಕೇಂದ್ರದ ಸುಗ್ರೀವಾಜ್ಞೆ ವಿರುದ್ಧದ ಅಭಿಯಾನ ಬೆಂಬಲಿಸದಿದ್ದರೆ ವಿಪಕ್ಷಗಳ ಸಭೆಗೆ ಗೈರು: ಕಾಂಗ್ರೆಸ್‌ಗೆ ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ
“ಪಿ.ಎ ಸಂಗ್ಮಾ ಫುಟ್ಬಾಲ್ ಕ್ರೀಡಾಂಗಣ ತಡೆಗೋಡೆಯ ಭಾಗ ಕುಸಿದಿರುವುದಕ್ಕೆ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ. ಪಶ್ಚಿಮ ಗರೋ ಹಿಲ್ಸ್‌ನ ಉಪ ಆಯುಕ್ತರು ಘಟನೆಯ ಬಗ್ಗೆ ಅಧಿಕೃತ ತನಿಖೆಯನ್ನು ಆರಂಭಿಸಿದ್ದಾರೆ. ಸಂಪೂರ್ಣ ತನಿಖೆಯ ನಂತರ ಫುಟ್ಬಾಲ್ ಕ್ರೀಡಾಂಗಣದ ತಡೆಗೋಡೆ ಕುಸಿತದ ಬಗ್ಗೆ ಸೂಕ್ತ ಚಿತ್ರಣ ದೊರೆಯುತ್ತದೆ. ಇದರ ಹಿಂದೆ ಕೈವಾಡವಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು. ಕುಸಿದಿರುವ ಭಾಗದ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು” ಎಂದು ಹೇಳಿಕೆ ತಿಳಿಸಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಘಾಲಯ ವಿಧಾನಸಭೆ ಕಟ್ಟಡದ ಒಂದು ಭಾಗ ಕುಸಿದಿತ್ತು. ₹177.7 ಕೋಟಿ ವೆಚ್ಚದ ಕಟ್ಟಡದ 70 ಟನ್ ತೂಕದ ಗುಮ್ಮಟ ಕುಸಿದು ಬಿದ್ದಿತ್ತು. ಇದು ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ರಾಜಕೀಯ ಕೋಲಾಹಲ ಉಂಟು ಮಾಡಿತ್ತು.