ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಮಂದಿ ಸಾವನ್ನಪ್ಪಿದ್ದಾರೆ. ದೇಶಾದ್ಯಂತ ಆಕ್ರೋಶ ಮಡುಗಟ್ಟಿದೆ. ದಾಳಿ ವಿರುದ್ಧ ಖಂಡನೆ, ಭದ್ರತಾ ಹಾಗೂ ಗುಪ್ತಚರ ಇಲಾಖೆಗಳ ವೈಫಲ್ಯಗಳ ವಿರುದ್ಧ ಅಸಾಮಾಧಾನ ವ್ಯಕ್ತವಾಗುತ್ತಿದೆ. ಈ ನಡುವೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆರು ತಿಂಗಳ ಹಿಂದೆಯಷ್ಟೇ ಜಮ್ಮು – ಕಾಶ್ಮೀರ ಮತ್ತು ಭಯೋತ್ಪಾದನೆ ಕುರಿತು ನೀಡಿದ್ದ ಹೇಳಿಕೆ ಕೂಡ ವೈರಲ್ ಆಗುತ್ತಿದೆ.
ಸದ್ಯ, ಪಹಲ್ಗಾಮ್ ದಾಳಿ ಬಳಿಕ ಕಾಶ್ಮೀರಕ್ಕೆ ಭೇಟಿ ನೀಡಿರುವ ಅಮಿತ್ ಶಾ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡಿದ್ದಾರೆ. ಸಾಂತ್ವನ ಹೇಳಿದ್ದಾರೆ. “ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರಿಗೆ ಅಂತಿಮ ನಮನಗಳು. ಭಾರತವು ಭಯೋತ್ಪಾದನೆಗೆ ಬಗ್ಗುವುದಿಲ್ಲ. ಈ ಭೀಕರ ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಬಿಡಲಾಗುವುದಿಲ್ಲ. ದಾಳಿ ನಡೆಸಿದವರ ಕುಟುಂಬಗಳೂ ಕೂಡ ಈಗ ಮೃತಪಟ್ಟಿರುವವರ ಕುಟುಂಬಗಳಂತೆ ಕಣ್ಣೀರು ಹಾಕಲಿವೆ” ಎಂದು ಅಮಿತ್ ಶಾ ‘ಎಕ್ಸ್’ನಲ್ಲಿ ಟ್ವೀಟ್ ಮಾಡಿದ್ದಾರೆ.
ಇದೀಗ, ಅಮಿತ್ ಶಾ ಅವರ ಪ್ರಸ್ತುತ ಟ್ವೀಟ್‌ಗಿಂತ ಈ ಹಿಂದೆ, ಅವರು ಮಾಡಿದ್ದ ಟ್ವೀಟ್ ಭಾರೀ ವೈರಲ್ ಆಗುತ್ತಿದೆ. ಆ ಟ್ವೀಟ್‌ನಲ್ಲಿಯೂ ಅವರು ಭಯೋತ್ಪಾದನೆ ಬಗ್ಗೆ ಮಾತನಾಡಿದ್ದರು. ತಮ್ಮ ಸರ್ಕಾರ ಭಯೋತ್ಪಾದನೆಯನ್ನು ನಿಗ್ರಹಿಸಿದೆ ಎಂದಿದ್ದರು.
ಅಂದಹಾಗೆ, ಕಳೆದ ವರ್ಷ ನಡೆದ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅಮಿತ್ ಶಾ ಕೂಡ ಪ್ರಚಾರ ಮಾಡಿದ್ದರು.
ಪ್ರಚಾರದ ಭಾಗವಾಗಿ 2024ರ ಸೆಪ್ಟೆಂಬರ್ 23ರಂದು ಟ್ವೀಟ್ ಮಾಡಿದ್ದ ಶಾ, ”ಭಯೋತ್ಪಾದನೆಯನ್ನು ನಾವು ಎಷ್ಟು ಆಳಕ್ಕೆ ಹುಗಿದು ಸಮಾಧಿ ಮಾಡಿದ್ದೇವೆಂದ್ರೆ, ಅವರ ಮೂರು ಪೀಳಿಗೆಗಳು ಪ್ರಯತ್ನಿಸಿದರೂ, ಅಗೆದು ಮತ್ತೆ ಭಯೋತ್ಪಾದಕರನ್ನು ಕರೆತರೋದು ಅಸಾಧ್ಯ” ಎಂದಿದ್ದರು.

”ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು, ಜಮ್ಮು ಮತ್ತು ಕಾಶ್ಮೀರವನ್ನು ಭಯೋತ್ಪಾದನೆ ಮುಕ್ತ ಪ್ರದೇಶವನ್ನಾಗಿ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಹರಡುವವರಿಗೆ ಗಲ್ಲು ಶಿಕ್ಷೆ ಮೂಲಕ ಉತ್ತರ ಸಿಗುತ್ತದೆ” ಎಂದು ಅಮಿತ್ ಶಾ ಹೇಳಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಸದ್ದಡಗಿಸಿದ್ದೇವೆ. ಸಮಾಧಿ ಕಟ್ಟಿದ್ದೇವೆಂದು ಅಮಿತ್ ಶಾ ಹೇಳಿದ ಆರೇ ತಿಂಗಳಲ್ಲಿ ಭೀಕರ, ಭಯಾನಕ ಭಯೋತ್ಪಾದಕ ದಾಳಿ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದಿದೆ. 28 ಮಂದಿ ಜೀವತೆತ್ತಿದ್ದಾರೆ. ಪ್ರವಾಸಿಗರನ್ನು ರಕ್ಷಿಸಲು ಭಯೋತ್ಪಾದಕರ ಬಂದೂಕು ಕಸಿದುಕೊಳ್ಳಲು ಹೋದ ಸ್ಥಳೀಯ ಕುದುರೆ ಸವಾರ ಆದಿಲ್ ಹುಸೇನ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಭಯೋತ್ಪಾದಕರನ್ನು ನಿಗ್ರಹಿಸಿದ್ದೇವೆಂದು ಹೇಳಿದ್ದ ಅಮಿತ್ ಶಾ, ಈಗ ಇಂದಿನ ಕೃತ್ಯದ ನೈತಿಕ ಹೊಣೆ ಹೊರಬೇಕಲ್ಲವೇ? ಹಿಂದಿನ ಹೇಳಿಕೆಗೆ ಉತ್ತರ ಕೊಡಬೇಕಲ್ಲವೇ? ಎಂಬ ಆಗ್ರಹಗಳು ಕೇಳಿಬಂದಿವೆ.