ಪಹಲ್ಗಾಮ್‌ ದಾಳಿ | ಭದ್ರತಾ ವೈಫಲ್ಯ ಮರೆಮಾಚಲು ‘ದೇಶದ್ರೋಹ’ದ ದುಷ್ಟ ತಂತ್ರ ಹೆಣೆದ ಬಿಜೆಪಿ

Date:

Advertisements
ಭದ್ರತಾ ವೈಫಲ್ಯದಿಂದಲೇ ಪಹಲ್ಗಾಮ್‌ ದಾಳಿ ನಡೆದಿದೆ ಎಂದು ಖುದ್ದು ಬಿಜೆಪಿ ನಾಯಕರೇ ಸರ್ವಪಕ್ಷ ಸಭೆಯಲ್ಲಿ ಒಪ್ಪಿಕೊಂಡಿದ್ದೂ ಇದೆ. ಆದರೆ, ನೈತಿಕ ಹೊಣೆ ಹೊತ್ತು ಗೃಹ ಸಚಿವರಾದ ಅಮಿತ್ ಶಾ ರಾಜೀನಾಮೆ ಕೊಟ್ಟಿಲ್ಲ, ಕೊಡಬೇಕೆಂದು ಅವರಿಗೂ ಅನಿಸಿಲ್ಲ. ಬದಲಿಗೆ, ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದ ಬಗ್ಗೆ ಪ್ರಶ್ನಿಸುವವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ಭಯೋತ್ಪಾದಕರು ನಡೆಸಿದ ಹೇಯ ಕೃತ್ಯಕ್ಕೆ ತಕ್ಕ ಪಾಠ ಕಲಿಸಲು ಪಾಕಿಸ್ತಾನ ವಿರುದ್ಧ ಭಾರತ ಯುದ್ಧ ಸಾರಬೇಕು ಎಂದು ಹಾದಿ ಬೀದಿಯಲ್ಲಿ ಮಾತನಾಡುವಂತೆ, ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧದ ಬಗ್ಗೆ ಆಕ್ರೋಶದ ಮಾತುಗಳು ವ್ಯಕ್ತವಾಗಿವೆ.

ಇದರ ಹಿಂದೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕಾರ್ಯಕರ್ತರ ವಾಟ್ಸ್ ಆಪ್ ಹಂಚಿಕೆಯೂ ಕೆಲಸ ಮಾಡುತ್ತಿದೆ. ಜೊತೆಗೆ ಗೋದಿ ಮಾಧ್ಯಮಗಳೂ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿವೆ. ಈ ನಡುವೆ, ಪಹಲ್ಗಾಮ್‌ ಘಟನೆಗೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದ ಬಗ್ಗೆ ಪ್ರಶ್ನೆ ಮಾಡಿದರೆ, ಅವರಿಗೆ ದೇಶದ್ರೋಹಿ ಪಟ್ಟ ಕಟ್ಟುವ ಕೆಲಸವೂ ನಡೆಯುತ್ತಿದೆ.

2008ರ ಯುಪಿಎ ಸರ್ಕಾರದ ಅವಧಿಯಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿ ನಡೆದಿತ್ತು. ಆಗ ವಿರೋಧಪಕ್ಷವಾಗಿದ್ದ ಬಿಜೆಪಿ ಭದ್ರತಾ ವೈಫಲ್ಯದ ಬಗ್ಗೆ ದೊಡ್ಡ ಗಂಟಲಿನಿಂದ ಪ್ರಶ್ನೆ ಮಾಡಿತ್ತು. ಅದರ ಫಲವಾಗಿ ಅಂದಿನ ಗೃಹ ಸಚಿವ ಶಿವರಾಜ್ ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ, ಆ ಸ್ಥಾನಕ್ಕೆ ಘನತೆ ತಂದಿದ್ದರು.

Advertisements

ಮೋದಿ ಅವಧಿಯಲ್ಲಿ, 2019ರಲ್ಲಿ ನಡೆದ ಪುಲ್ವಾಮಾ ದಾಳಿ, 2025ರಲ್ಲಿ ನಡೆದ ಪಹಲ್ಗಾಮ್‌ ದಾಳಿಯಲ್ಲಿಯೂ ಭದ್ರತಾ ವೈಫಲ್ಯವೇ ಎದ್ದು ಕಾಣುತ್ತಿದೆ. ಅದನ್ನು ಖುದ್ದು ಬಿಜೆಪಿ ನಾಯಕರೇ ಸರ್ವಪಕ್ಷ ಸಭೆಯಲ್ಲಿ ಒಪ್ಪಿಕೊಂಡಿದ್ದೂ ಇದೆ. ಆದರೆ, ನೈತಿಕ ಹೊಣೆ ಹೊತ್ತು ಗೃಹ ಸಚಿವರಾದ ಅಮಿತ್ ಶಾ ರಾಜೀನಾಮೆ ಕೊಟ್ಟಿಲ್ಲ, ಕೊಡಬೇಕೆಂದು ಅವರಿಗೂ ಅನಿಸಿಲ್ಲ. ಬದಲಿಗೆ, ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದ ಬಗ್ಗೆ ಪ್ರಶ್ನಿಸುವವರ ಮೇಲೆ ದೇಶದ್ರೋಹದ ಆರೋಪ ಹೊರಿಸುತ್ತಿದೆ.

ಪಹಲ್ಗಾಮ್‌ನ ಸ್ವರ್ಗಸಮಾನ ಬೈಸರಣ್ ಕಣಿವೆಯಲ್ಲಿ ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಅಮಾನುಷ ಹತ್ಯೆ ನಡೆಸಿರುವುದಕ್ಕೆ ಭಾರತೀಯರ ಮನದಲ್ಲಿ ಸೃಷ್ಟಿಯಾಗಿರುವ ಆಘಾತವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಮೊದಲೇ ಉಗ್ರರ ಭೀತಿ ಇರುವ ಪಹಲ್ಗಾಮ್‌ನಲ್ಲಿ ಹೀಗೆ ಏಕಾಏಕಿ ಉಗ್ರರು ಒಳನುಸುಳಿ ಮನಬಂದಂತೆ ಕೊಲ್ಲುವಾಗ ಅಲ್ಲಿ ಇರಲೇಬೇಕಿದ್ದ ಸೇನಾ ಪಡೆ ಮತ್ತು ಪೊಲೀಸ್ ಪಡೆ ಎಲ್ಲಿಗೆ ಹೋಗಿತ್ತು? ಅದಕ್ಕಿಂತ ಹೆಚ್ಚಾಗಿ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು?

ಇದು ಭದ್ರತಾ ವೈಫಲ್ಯ ಅಲ್ಲವೇ, ದೇಶದ ಜನ ಪ್ರಶ್ನೆ ಮಾಡಬಾರದೇ? ಚುನಾವಣೆಗಳು ಎದುರಾದಾಗ ಮಾತ್ರ ಏಕೆ ಈ ರೀತಿಯ ಉಗ್ರ ದಾಳಿಗಳು ನಡೆಯುತ್ತವೆ? ಅದೂ ರಾಷ್ಟ್ರಭಕ್ತ ಮೋದಿಯವರ ಅವಧಿಯಲ್ಲೇ ಏಕೆ ಹೆಚ್ಚು ನಡೆಯುತ್ತವೆ?

2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೂ ಮುನ್ನ ಫೆ.14ರಂದು ಹೀಗೆಯೇ ಪುಲ್ವಾಮಾ ದಾಳಿ ನಡೆದು, 40 ಸಿಆರ್‌ಪಿಎಫ್‌ ಯೋಧರ ಹತ್ಯೆಯಾಯಿತು. ಮುಂದೆ ಚುನಾವಣೆಯಲ್ಲಿ ಬಿಜೆಪಿ ಯಾರ ಬೆಂಬಲವೂ ಇಲ್ಲದೇ ಬಹುಮತ ಸಾಬೀತುಪಡಿಸಿಕೊಂಡಿತು. ಆದರೆ, ಪುಲ್ವಾಮಾ ದಾಳಿ ಹಿಂದಿನ ಭದ್ರತಾ ಲೋಪದ ಬಗ್ಗೆ ಕೇಂದ್ರ ಸರ್ಕಾರದಿಂದ ಈವರೆಗೂ ಸ್ಪಷ್ಟ ಉತ್ತರಗಳು ಸಿಕ್ಕಿಲ್ಲ.

ಈ ಸುದ್ದಿ ಓದಿದ್ದೀರಾ? ರಾಯಭಾರ | ಪ್ರಧಾನಿಯವರೇ, ನೀವು ಮೋಡದ ಮರೆಯಲ್ಲಿ ನಿಂತರೂ ನಿಮ್ಮ ವೈಫಲ್ಯಗಳು ದೇಶದ ಕಣ್ಣಿಗೆ ಕಾಣಿಸುತ್ತವೆ

ಈಗ, ಬರುವ ನವೆಂಬರ್ ನಲ್ಲಿ ಬಿಹಾರ ರಾಜ್ಯ ಚುನಾವಣೆ ಎದುರಾಗಲಿದೆ. ಇಂತಹ ಸಮಯದಲ್ಲಿಯೇ ಪಹಲ್ಗಾಮ್‌ನಲ್ಲಿ ದಾಳಿ ನಡೆದಿದೆ. ವಿಪರ್ಯಾಸಕರ ಸಂಗತಿ ಎಂದರೆ, ಪ್ರಧಾನಿ ಮೋದಿ ಅವರು ದಾಳಿ ನಡೆದ ಮರು ದಿನವೇ ಬಿಹಾರಕ್ಕೆ ತೆರಳಿ ರಾಜಕೀಯ ಭಾಷಣ ಮಾಡಿದ್ದಾರೆ. ಭಾಷಣದಲ್ಲಿ ಪಹಲ್ಗಾಮ್‌ ದಾಳಿ ಕುರಿತು ದೊಡ್ಡ ದನಿಯಲ್ಲಿ, ಇಂಗ್ಲಿಷಿನಲ್ಲಿ ಉಗ್ರರಿಗೆ, ಅವರ ಹಿಂದಿರುವ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೇ ಸಿಎಂ ಸಿದ್ದರಾಮಯ್ಯ ಮತ್ತು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಒತ್ತಿ ಒತ್ತಿ ಹೇಳುತ್ತಿರುವುದು.

“ಯುದ್ಧ ಎನ್ನುವುದು ಯಾವುದೇ ದೇಶದ ಅಂತಿಮ‌ ಆಯ್ಕೆಯೇ ಹೊರತು, ಯುದ್ಧವೇ ಮೊದಲ ಇಲ್ಲವೇ ಏಕೈಕ ಆಯ್ಕೆಯಲ್ಲ. ಶತ್ರುವನ್ನು ಮಣಿಸುವ ಉಳಿದೆಲ್ಲ ಆಯ್ಕೆಗಳು ವಿಫಲವಾದಾಗ ಮಾತ್ರ ಯುದ್ಧಕ್ಕೆ ಹೊರಡಬೇಕು. ಪಹಲ್ಗಾಮ್‌ನಲ್ಲಿ ನಡೆದ ಪಾಕ್‍ ಪ್ರೇರಿತ ಉಗ್ರರ ದಾಳಿಗೆ ನಮ್ಮ ಗೂಢಚರ್ಯೆ ಮತ್ತು ಭದ್ರತಾ ವ್ಯವಸ್ಥೆಯ ವೈಫಲ್ಯ ಕಾರಣ ಎನ್ನುವುದು ದೇಶದ ಜನತೆಗೆ ಮತ್ತು ಕೇಂದ್ರ ಸರ್ಕಾರಕ್ಕೂ ಈಗ ಮನವರಿಕೆಯಾಗಿದೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು.

ಆದರೆ, ಬಿಜೆಪಿ ನಾಯಕರು ತಮ್ಮ ಕೇಂದ್ರ ಸರ್ಕಾರದ ವೈಫಲ್ಯವನ್ನು ಮರೆಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ತಿರುಚಿ ಅವರ ವೈಯಕ್ತಿಕ ನಿಂದನೆಗೆ ಇಳಿದಿದ್ದಾರೆ. ಭದ್ರತಾ ವೈಫಲ್ಯದ ಕುರಿತಾದ ಚರ್ಚೆಯನ್ನು ಮಾಡುವುದು, ಆಡಳಿತಾತ್ಮಕ ಲೋಪದ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ದೇಶದ್ರೋಹದ ಕೆಲಸ ಎನ್ನುವಂತೆ ಬಿಂಬಿಸುತ್ತಿರುವ ಬಿಜೆಪಿ ಹಾಗೂ ಕೆಲ ಬಲಪಂಥೀಯ ಹಿಂದುತ್ವವಾದಿ ಸಂಘಟನೆಗಳು ಸಿದ್ದರಾಮಯ್ಯ ಪಾಕಿಸ್ತಾನದೊಂದಿಗೆ ಯುದ್ಧವೇ ಬೇಡವೆಂದಿದ್ದಾರೆ ಎಂಬ ಹಸಿ ಸುಳ್ಳುಗಳನ್ನು ಪ್ರಚಾರ ಮಾಡುತ್ತಿದ್ದಾರೆ.

ಭದ್ರತಾ ವೈಫಲ್ಯದ ಬಗ್ಗೆ ಬಾಯಿತಪ್ಪಿಯೂ ಚರ್ಚಿಸದ, ಬಿಜೆಪಿಯ ಬೂಟು ನೆಕ್ಕುವ ಮಾಧ್ಯಮಗಳು ಸಿದ್ದರಾಮಯ್ಯನವರ ಹೇಳಿಕೆಯನ್ನು ತಮಗೆ ಬೇಕಾದಂತೆಲ್ಲಾ ತಿರುಚಿ ಜನರ ಮುಂದಿಟ್ಟಿವೆ. ಸೋಜಿಗದ ಸಂಗತಿ ಎಂದರೆ, ಇವರ ಕಣ್ಣಿಗೆ ಸರ್ವಪಕ್ಷದ ಸಭೆಗೆ ಹಾಜರಾಗದೆ, ಚುನಾವಣಾ ಪ್ರಚಾರಕ್ಕೆ ಹೋದ ಪ್ರಧಾನಿ ಮೋದಿಯವರು ಮಾತ್ರ ಕಾಣುತ್ತಿಲ್ಲ.

ಪುಲ್ವಾಮಾ ದಾಳಿ ಅದರ ನಂತರದ ಬಾಲಾ ಕೋಟ್ ದಾಳಿಯನ್ನು ಬಿಜೆಪಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹೇಗೆಲ್ಲಾ ರಾಜಕೀಯಕ್ಕೆ ಬಳಸಿಕೊಂಡಿದೆ ಎನ್ನುವುದು ದೇಶದ ಜನರ ಕಣ್ಮುಂದಿದೆ. ಇವತ್ತಿಗೂ ಪುಲ್ವಾಮಾ ದಾಳಿಯಲ್ಲಾದ ಭದ್ರತೆಯ ವೈಫಲ್ಯದ ಬಗ್ಗೆ ನಡೆಯಬೇಕಾದ ಚರ್ಚೆಗಳು ನಡೆಯಲಿಲ್ಲ. ಮುಂದೆ ಈ ರೀತಿ ಘಟನೆ ನಡೆಯದಂತೆ ಭದ್ರತೆ ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗರೂಕ ಕ್ರಮವನ್ನೂ ಕೇಂದ್ರ ಸರ್ಕಾರ ತೆಗೆದುಕೊಳ್ಳಲಿಲ್ಲ. ಅದರಿಂದಾಗಿಯೇ ಆಗಿದ್ದು ಪಹಲ್ಗಾಮ್‌ ಭಯೋತ್ಪಾದಕ ಕೃತ್ಯ.

ದೇಶದ ಭದ್ರತೆ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಬಿಜೆಪಿಯವರು ಕಳೆದ 2014ರಿಂದಲೂ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾರೆ. ಇವರ ಅವಧಿಯಲ್ಲೇ ಪುಲ್ವಾಮಾ, ಪಹಲ್ಗಾಮ್‌ ದಾಳಿ ನಡೆದಿವೆ. ಭಯೋತ್ಪಾದನೆ ನಿಗ್ರಹಕ್ಕೆ ಕೇಂದ್ರ ಸರ್ಕಾರ ಏನು ಕ್ರಮಕೈಗೊಂಡಿದೆ?

ಮೊದಲು ಈ ಲೋಪವನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ. ಸಿಂಧೂ ನದಿ ಒಪ್ಪಂದದ ರದ್ದತಿಯೂ ಸೇರಿದಂತೆ ಕೇಂದ್ರ ಸರ್ಕಾರ ಕೆಲವು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ. ಹಾಗೆಯೇ ಕೆಲ ಕಿಡಿಗೇಡಿಗಳು ಯುದ್ಧೋನ್ಮಾದವನ್ನು ಸೃಷ್ಟಿಸಿ ದೇಶದೊಳಗಿನ ಸೌಹಾರ್ದತೆಯನ್ನು ಕಲಕುವ ಪ್ರಯತ್ನ ಮಾಡುತ್ತಿದ್ದು, ಇಂತಹವರ ವಿರುದ್ಧವೂ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಮಾಧ್ಯಮಗಳಲ್ಲಿ ಯುದ್ಧದ ಬಗ್ಗೆ ಮಾತನಾಡುವುದನ್ನು ಮೊದಲು ಸ್ಥಗಿತಗೊಳಿಸಬೇಕು.

ಯುದ್ಧ ಬೇಕೋ ಬೇಡವೋ, ಯಾವಾಗ, ಹೇಗೆ ಎಂಬುದನ್ನೆಲ್ಲ ನಿರ್ಧರಿಸುವುದಕ್ಕೆ ದೇಶದಲ್ಲೊಂದು ವ್ಯವಸ್ಥೆ, ಸಂಸತ್ತು, ಸೇನಾಪಡೆಗಳು ಎಲ್ಲವೂ ಇವೆ. ಅವರು ಅದನ್ನು ನಿರ್ಧರಿಸುತ್ತಾರೆ. ಮಾಧ್ಯಮಗಳು ಮತ್ತು ಬೆರಳೆಣಿಕೆಯಷ್ಟು ಬಲಪಂಥೀಯ ವಿಚಾರಧಾರೆಯ ಜನರು- ತಲೆಯಲ್ಲಿ ಪಾಕಿಸ್ತಾನವನ್ನು ತುಂಬಿಕೊಂಡು ಯುದ್ಧದ ಬಗ್ಗೆ ‘ಪಟಾಕಿ’ಗಳನ್ನು ಸಿಡಿಸುವುದನ್ನು ನಿಲ್ಲಿಸಬೇಕಾಗಿದೆ. ಭದ್ರತಾ ವೈಫಲ್ಯದ ಬಗ್ಗೆ ಪ್ರಶ್ನಿಸುವವರನ್ನು ದೇಶದ್ರೋಹಿಗಳೆಂದು ಬ್ರಾಂಡ್ ಮಾಡುವುದನ್ನು, ಅವರ ಮೇಲೆ ಕೇಸ್ ದಾಖಲಿಸಿ ಬಾಯಿ ಮುಚ್ಚಿಸುವುದನ್ನು ಮೋದಿ ಸರ್ಕಾರ ಮೊದಲು ನಿಲ್ಲಿಸಬೇಕಾಗಿದೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

Download Eedina App Android / iOS

X