ನೈಋತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸ್ಥಾನಕ್ಕೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್‌ರವರಿಗೆ ಟಿಕೆಟ್ ಕೈತಪ್ಪಿದೆ. ನೈಋತ್ಯ ಪದವೀಧರ ಕ್ಷೇತ್ರಕ್ಕೆ ಡಾ.ಧನಂಜಯ ಸರ್ಜಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಘುಪತಿ ಭಟ್ ಅಸಮಾಧಾನಗೊಂಡಿದ್ದು, ರವಿವಾರ ಸಾಮಾಜಿಕ ಮಾಧ್ಯಮದಲ್ಲಿ ಅಸಮಾಧಾನ ಹೊರ ಹಾಕಿದ್ದರು.
ಅವರನ್ನು ಉಡುಪಿಯಲ್ಲಿನ ಅವರ ಮನೆಗೆ, ಜಿಲ್ಲಾ ಬಿಜೆಪಿಯ ತಂಡ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಅವರ ನೇತೃತ್ವದಲ್ಲಿ ತೆರಳಿ ರಘುಪತಿ ಭಟ್ ಅವರನ್ನು ಸಮಾಧಾನಪಡಿಸಿ ಮನವೊಲಿಸಲು ಪ್ರಯತ್ನಿಸಲಾಯಿತಾದರೂ, ಮಾತುಕತೆ ವಿಫಲವಾಗಿದೆ.
ಈ ಹಿನ್ನೆಲೆಯಲ್ಲಿ ಉಡುಪಿ ಕರಂಬಳ್ಳಿಯ ನಿವಾಸದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದು, ಪಕ್ಷೇತರವಾಗಿ ನಿಲ್ಲುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

“ಪದವೀಧರರ ಕ್ಷೇತ್ರದಿಂದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಪಕ್ಷದ ರಾಜ್ಯ ಹಾಗೂ ರಾಷ್ಟ್ರ ನಾಯಕರು ಖಚಿತವಾಗಿ ಟಿಕೆಟ್ ನೀಡುವ ಭರವಸೆಯನ್ನೂ ನೀಡಿದ್ದರು. ಅದರಂತೆ, ಕ್ಷೇತ್ರದಾದ್ಯಂತ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು 20 ಸಾವಿರಕ್ಕೂ ಹೆಚ್ಚು ಮಂದಿಯ ನೋಂದಣಿ ಮಾಡಿಸಿದ್ದೇನೆ. ಇದೀಗ ಏಕಾಏಕಿ ಟಿಕೆಟ್ ನಿರಾಕರಿಸಿರುವುದರಿಂದ ತೀವ್ರವಾಗಿ ಮನನೊಂದಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ” ಎಂದರು.
“ಪಕ್ಷಕ್ಕಾಗಿ ದಶಕಗಳ ಕಾಲ ದುಡಿದ ಹಿರಿಯರಿಗೆ ಟಿಕೆಟ್ ನೀಡಬಹುದಿತ್ತು. ಹಿರಿತನ ಹಾಗೂ ಪಕ್ಷನಿಷ್ಠೆ ಬದಿಗಿಟ್ಟು ವರ್ಷದ ಹಿಂದಷ್ಟೇ ಬಿಜೆಪಿ ಸೇರಿದವರಿಗೆ ಟಿಕೆಟ್ ನೀಡಿರುವುದು ಬೇಸರ ತಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದಾಗಲೂ ಬಂಡಾಯ ಪ್ರದರ್ಶಿಸದೆ ಪಕ್ಷದ ಗೆಲುವಿಗೆ ಶ್ರಮಿಸಿದ್ದೇನೆ. ಲೋಕಸಭಾ ಚುನಾವಣೆ ಸಂದರ್ಭದಲ್ಲೂ ದುಡಿದಿದ್ದೇನೆ. ಇಷ್ಟಾದರೂ ಟಿಕೆಟ್ ನಿರಾಕರಿಸಿರುವುದು ಅತೀವ ನೋವು ತಂದಿದೆ” ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ವಿಧಾನ ಪರಿಷತ್ ಚುನಾವಣೆ | ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಒಂದು ಕ್ಷೇತ್ರ ಜೆಡಿಎಸ್‌ಗೆ
“ಉಡುಪಿ, ಮಂಗಳೂರು, ಶಿವಮೊಗ್ಗ ಜಿಲ್ಲೆಗಳಿಂದ ಪದವೀಧರ ಮತದಾರರು ಕರೆ ಮಾಡಿ ಚುನಾವಣೆಗೆ ನಿಲ್ಲುವಂತೆ ಬೆಂಬಲ ನೀಡಿದ್ದಾರೆ. ನೊಂದಿರುವ ಸಮಸ್ತ ಬಿಜೆಪಿ ಕಾರ್ಯಕರ್ತರ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿದ್ದೇನೆ. ಪರಿಷತ್ ಚುನಾವಣೆ ರಾಜ್ಯ ಹಾಗೂ ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆಯಲ್ಲ. ಸರ್ಕಾರ ರಚಿಸಲೂ ಸಾಧ್ಯವಿಲ್ಲ. ಪಕ್ಷದ ಚಿಹ್ನೆಯಡಿಯಲ್ಲಿ ಅಭ್ಯರ್ಥಿಗಳು ಸ್ಪರ್ಧಿಸುವುದಿಲ್ಲ. ನನ್ನ ಸ್ಪರ್ಧೆ ಬಿಜೆಪಿ ವಿರುದ್ಧವಲ್ಲ” ಎಂದು ಸ್ಪಷ್ಟಪಡಿಸಿದ ರಘುಪತಿ ಭಟ್, “ಗೆದ್ದರೂ ಸೋತರೂ ಬಿಜೆಪಿಯಲ್ಲಿಯೇ ಇರುತ್ತೇನೆ. ಉಚ್ಚಾಟಿಸಿದರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ” ಎಂದರು.
“ಮೂರು ಬಾರಿ ಉಡುಪಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದು, ಬಳಿಕ ಟಿಕೆಟ್ ನಿರಾಕರಿಸಲಾಗಿತ್ತು. ಆದರೂ ಪಕ್ಷದ ನಿರ್ಧಾರದ ವಿರುದ್ದ ಬಂಡಾಯ ಪ್ರದರ್ಶಿಸಿಲ್ಲ. ಖಚಿತವಾಗಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಮಾತು ತಪ್ಪಿದ್ದಕ್ಕೆ ಬೇಸರವಿದೆ. ಕರಾವಳಿಯಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಸರಿಯಲ್ಲ. ಈಗಲೂ ಅಭ್ಯರ್ಥಿ ಬದಲಾವಣೆಗೆ ಸಮಯಾವಕಾಶವಿದ್ದು ‘ಬಿ’ ಫಾರಂ ನೀಡಿದರೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಪಕ್ಷೇತರವಾಗಿ ಸ್ಪರ್ಧಿಸುವುದು ಖಚಿತ” ಎಂದು ರಘುಪತಿ ಭಟ್ ಸ್ಪಷ್ಟಪಡಿಸಿದರು.
