ಡಿಸೆಂಬರ್ 13ರಂದು ಸಂದರ್ಶಕರ ಸೋಗಿನಲ್ಲಿ ಸಂಸತ್ತಿಗೆ ಬಂದಿದ್ದ ಇಬ್ಬರು ಯುವಕರು ಏಕಾಏಕಿ ಲೋಕಸಭೆಯ ಹಾಲ್‌ಗೆ ಜಿಗಿದು ಸ್ಮೋಕ್ ಬಾಂಬ್ ಸಿಡಿಸಿ, ಭದ್ರತಾ ಲೋಪ ಎಸಗಿದ್ದ ಪ್ರಕರಣದಲ್ಲಿ ಪಾಸ್ ನೀಡಿದ್ದ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಾಜ್ಯಕ್ಕೆ ಆಗಮಿಸಿದ್ದಾರೆ.
ಪ್ರತಿಯೊಂದು ರಾಜಕೀಯ ಬೆಳವಣಿಗೆಗೆ ಸೋಷಿಯಲ್ ಮೀಡಿಯಾ ಸೇರಿದಂತೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಲು ಮುಂಚೂಣಿಯಲ್ಲಿರುತ್ತಿದ್ದ ಬಿಜೆಪಿ ಸಂಸದ, ಸಂಸತ್ ಭದ್ರತಾ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಒಂದೇ ಒಂದು ಅಧಿಕೃತ ಹೇಳಿಕೆಯನ್ನು ಎಲ್ಲೂ ನೀಡಿಲ್ಲ. ಡಿಸೆಂಬರ್ 13ರಂದು ಘಟನೆ ನಡೆದಿದ್ದರೂ ಈವರೆಗೆ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದ ಪ್ರತಾಪ್ ಸಿಂಹ, ನಿನ್ನೆ(ಡಿ.22) ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾರೆ. ಆದರೆ, ‘ನೋ ರಿಯಾಕ್ಷನ್’ ಎನ್ನುವ ಮೂಲಕ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.
ಮಾಧ್ಯಮಗಳ ಪ್ರತಿನಿಧಿಗಳನ್ನು ಕಂಡೊಡನೆಯೇ, ‘ನೋ ರಿಯಾಕ್ಷನ್’ ಎಂದು ಕೈ ಸನ್ನೆ ಮಾಡಿದ ಪ್ರತಾಪ್ ಸಿಂಹ ಅವರಲ್ಲಿ ಎಷ್ಟೇ ವಿನಂತಿಸಿದರೂ ಕೂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
“ನಾನೂ ಕೂಡ ಬಹಳಷ್ಟು ವರ್ಷ ಜರ್ನಲಿಸಂ ಮಾಡಿದ್ದೇನೆ. ದಯವಿಟ್ಟು ನನ್ನನ್ನು ಚೇಸ್ ಮಾಡಬೇಡಿ. ನಾನೂ ಕೂಡ ಜರ್ನಲಿಸ್ಟ್ ಆಗಿದ್ದೆ” ಎಂದಷ್ಟೇ ಹೇಳಿದ್ದಾರೆ. ಈ ನಡುವೆ ಖಾಸಗಿ ಚಾನೆಲ್‌ನ ಪ್ರತಿನಿಧಿಯೋರ್ವನಿಗೆ, “ನೀನು ಈ ವೃತ್ತಿಗೆ ಹೊಸಬ. ನಾನು ಐದು ವರ್ಷ ಜರ್ನಲಿಸಂ ಓದಿದ್ದೀನಿ. ಸುಮ್ಮನಿದ್ದು ಬಿಡು” ಎಂದು ಕೈಬೆರಳು ತೋರಿಸುವ ಮೂಲಕ ಸುಮ್ಮನಾಗಿಸಿ, ಅಲ್ಲಿಂದ ತೆರಳಿದ್ದಾರೆ. ಇದೆಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಿದೆ.
146 ಸಂಸದರ ಅಮಾನತಾಗಿದ್ದರೂ, ಅಮಾನತ್ತಾಗದ ಬಿಜೆಪಿ ಸಂಸದ!
ಸಂಸತ್ ಭದ್ರತಾ ಲೋಪ ಘಟನೆ ನಡೆದಿದ್ದು ಡಿ.13ರಂದು. ಇದು ಡಿ.22ರವರೆಗೆ ನಡೆಯಬೇಕಿದ್ದ ಚಳಿಗಾಲದ ಅಧಿವೇಶನವನ್ನೇ ನುಂಗಿ ಹಾಕಿತ್ತು. ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿ ಸದನದಲ್ಲಿ ಬಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಉತ್ತರಿಸಬೇಕೆಂದು ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಸದಸ್ಯರು ಆಗ್ರಹಿಸಿ, ಗದ್ದಲವೆಬ್ಬಿಸಿದ್ದರು. ಆದರೆ ಈ ಬಗ್ಗೆ ಒಂದೇ ಒಂದು ಹೇಳಿಕೆಯನ್ನು ನೀಡಿರಲಿಲ್ಲ. ಬದಲಾಗಿ ಲೋಕಸಭೆಯಿಂದ 100 ಮಂದಿ ಹಾಗೂ ರಾಜ್ಯಸಭೆಯಿಂದ 46 ಮಂದಿ ಸೇರಿ ಒಟ್ಟು 146 ಮಂದಿ ಸಂಸದರನ್ನು ಅಮಾನತು ಮಾಡಲಾಗಿತ್ತು. ಆದರೆ, ವಿಪರ್ಯಾಸ ಏನೆಂದರೆ, ಪಾಸ್ ನೀಡಿದ್ದ ಸಂಸದ ಪ್ರತಾಪ್ ಸಿಂಹ ಅವರನ್ನು ಅಮಾನತು ಮಾಡಲೇ ಇಲ್ಲ.
ಪ್ರತಾಪ್ ಸಿಂಹ ಹೇಳಿಕೆ ದಾಖಲು
ಸಂಸತ್ ಭದ್ರತಾ ಲೋಪ ಘಟನೆಯ ಆರೋಪಿಗಳಿಗೆ ಸಂಸದ ಪ್ರತಾಪ್ ಸಿಂಹ, ಸಂದರ್ಶಕರ ಪಾಸ್ ನೀಡಿದ್ದ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆ ನಡೆಸಲಾಗಿದೆ. ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಖಚಿತಪಡಿಸಿದ್ದಾರೆ.