ನಿನ್ನೆ ಲೋಕಸಭೆಯೊಳಗೆ ಇಬ್ಬರು ಯುವಕರು ಕಲರ್ ಸ್ಮೋಕ್ ಹಿಡಿದುಕೊಂಡು ನುಗ್ಗಿ ಭದ್ರತಾ ಲೋಪಗೊಂಡ ಘಟನೆಗೆ ಸಂಬಂಧಿಸಿದಂತೆ ವಿಪಕ್ಷಗಳು ಉನ್ನತ ಮಟ್ಟಕ್ಕೆ ತನಿಖೆಗೆ ಹಾಗೂ ಗೃಹ ಸಚಿವ, ಪ್ರಧಾನಿ ಸದನಕ್ಕೆ ಆಗಮಿಸಿ ವಿವರಿಸುವಂತೆ ಆಗ್ರಹಿಸಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿಪಕ್ಷಗಳು ಸದನದಲ್ಲಿ ಗದ್ದಲ ಎಬ್ಬಿಸಿದೆ.
ಉಭಯ ಸದನಗಳಲ್ಲಿ ಸದನ ಆರಂಭವಾಗುತ್ತಿದ್ದಂತೆಯೇ ಘೋಷಣೆಗಳನ್ನು ಕೂಗಿದ ವಿಪಕ್ಷಗಳ ಸದಸ್ಯರು, ಇಷ್ಟು ದೊಡ್ಡ ಭದ್ರತಾ ಲೋಪವಾಗಿದ್ದರೂ ಕೇಂದ್ರ ಸರ್ಕಾರ ಚರ್ಚೆಗೆ ಸಿದ್ದವಾಗಿಲ್ಲ. ಚರ್ಚೆ ನಡೆಸುವಂತೆ ಪಟ್ಟು ಹಿಡಿದರು.
ಲೋಕಸಭೆಯಲ್ಲಿ ಇದಕ್ಕೆ ಉತ್ತರಿಸಿದ ಸ್ಫೀಕರ್ ಓಂ ಪ್ರಕಾಶ್ ಬಿರ್ಲಾ, “ಲೋಕಸಭೆ ಭದ್ರತಾ ಲೋಪ ಘಟನೆಯಿಂದ ನಾವೆಲ್ಲರೂ ಚಿಂತಿತರಾಗಿದ್ದೇವೆ. ಸಂಸತ್ತಿನ ಭದ್ರತೆಯ ಜವಾಬ್ದಾರಿ ಸಂಸತ್ತಿನ ಕಾರ್ಯದರ್ಶಿಯದ್ದಾಗಿದೆ. ನಾವು ಘಟನೆಯ ಬಗ್ಗೆ ಚರ್ಚಿಸುತ್ತೇವೆ” ಎಂದು ಹೇಳಿದರು.
ಇದಕ್ಕೆ ಒಪ್ಪದೇ ಮತ್ತೆ ಗದ್ದಲ ಎಬ್ಬಿಸಿದ್ದರಿಂದ ಅನಿವಾರ್ಯವಾಗಿ ಮಧ್ಯಾಹ್ನ 2 ಗಂಟೆಗೆ ಮುಂದೂಡಿದರೆ, ರಾಜ್ಯಸಭೆಯನ್ನು ಅಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್, ತಮ್ಮ ಕಚೇರಿಗೆ ಆಗಮಿನಿಸುವಂತೆ ಪ್ರತಿಪಕ್ಷ ನಾಯಕರಿಗೆ ತಿಳಿಸಿದರು.
ಸಭೆ ನಡೆಸಿದ ಇಂಡಿಯಾ ಮೈತ್ರಿಕೂಟ
ಸಂಸತ್ತಿನ ಭದ್ರತೆಯಲ್ಲಿನ ಉಲ್ಲಂಘನೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಇಂಡಿಯಾ ಮೈತ್ರಿಕೂಟ, ಉಭಯ ಸದನಗಳಲ್ಲಿ ಚರ್ಚಿಸುವ ವಿಚಾರಕ್ಕೆ ಸಂಬಂಧಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಹಲವು ಕಾಂಗ್ರೆಸ್ ಸಂಸದರು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಸದನದ ಇತರ ಎಲ್ಲ ಕಲಾಪಗಳನ್ನು ಬದಿಗಿಟ್ಟು ಚರ್ಚಿಸಲು ಮುಂದೂಡುವಂತೆ ನೋಟಿಸ್ ನೀಡಿದ್ದಾರೆ. ಅಲ್ಲದೇ, ಭದ್ರತಾ ವಿಷಯದ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ಇಂಡಿಯಾ ಮೈತ್ರಿಕೂಟ ಯೋಚಿಸಿರುವುದಾಗಿ ವರದಿಯಾಗಿದೆ.
ಏಳು ಮಂದಿ ಭದ್ರತಾ ಸಿಬ್ಬಂದಿ ಅಮಾನತು
ಲೋಕಸಭೆಯಲ್ಲಿ ಗಂಭೀರ ಭದ್ರತಾ ಲೋಪಗೊಂಡ ಘಟನೆಗೆ ಸಂಬಂಧಿಸಿದಂತೆ ಲೋಕಸಭೆಯ ಸಚಿವಾಲಯವು ಏಳು ಮಂದಿ ಭದ್ರತಾ ಸಿಬ್ಬಂದಿಯನ್ನು ಅಮಾನತು ಮಾಡಿದೆ.
ಯುಎಪಿಎಯಡಿ ಪ್ರಕರಣ ದಾಖಲು
ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಆರು ಮಂದಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಸಭೆಯ ಒಳಗೆ ನುಗ್ಗಿದ್ದ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಹಾಗೂ ಸಂಸತ್ತಿನ ಆವರಣದ ಹೊರಗೆ ಪ್ರತಿಭಟಿಸಿದ್ದ ಅಮೋಲ್ ಶಿಂಧೆ ಮತ್ತು ನೀಲಂ ದೇವಿ ಸಹಿತ ತಪ್ಪಿಸಿಕೊಂಡಿದ್ದ ಇಬ್ಬರು ಸೇರಿ ಒಟ್ಟು ಆರು ಮಂದಿಯ ವಿರುದ್ಧ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ (IPC) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.