ಎಎಪಿ ಸಂಚಾಲಕ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಸಂಸದ, ಪ್ರತಿಸ್ಪರ್ಧಿ ಪರ್ವೇಶ್ ವರ್ಮಾ ಸುಮಾರು 100 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಹಾಗೆಯೇ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧವೂ ಮಾನನಷ್ಟ ಪ್ರಕರಣವನ್ನು ದಾಖಲಿಸಿದ್ದಾರೆ. ಇಬ್ಬರೂ ಕೂಡಾ ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ವರ್ಮಾ ಆರೋಪಿಸಿದ್ದಾರೆ.
ಇನ್ನು ತಾನು ಈ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಗೆದ್ದರೆ ಈ ಹಣವನ್ನು ಬಳಸಿಕೊಂಡು ತಾನು ಚುನಾವಣೆಗೆ ನಿಂತಿರುವ ನವದೆಹಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದಾಗಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ಚುನಾವಣೆ | ಚೀನೀ ಸಿಸಿಟಿವಿ ಕ್ಯಾಮೆರಾ ಬಳಕೆ, ಪಂಜಾಬ್ ಆಡಳಿತ ದುರುಪಯೋಗ: ಎಎಪಿ, ಬಿಜೆಪಿ ವಾಕ್ಸಮರ
ಪರ್ವೇಶ್ ವರ್ಮಾ ಇತ್ತೀಚೆಗೆ ಪತ್ರಿಕಾಗೋಷ್ಠಿಯನ್ನು ನಡೆಸಿ ಎಎಪಿಯು ಪಂಜಾಬ್ ಸರ್ಕಾರವನ್ನು ಬಳಸಿಕೊಂಡು ದೆಹಲಿಯಲ್ಲಿ ಪ್ರಚಾರ ಮಾಡುತ್ತಿದೆ. ಪಂಜಾಬ್‌ನ ಶಿಕ್ಷಕರು, ಉದ್ಯೋಗಿಗಳು ದೆಹಲಿಯಲ್ಲಿ ಪ್ರಚಾರ ಮಾಡುತ್ತಿದ್ದರು ಎಂದಿದ್ದರು. ಹಾಗೆಯೇ ದೆಹಲಿಯಲ್ಲಿ ಎಲ್ಲೆಡೆ ಪಂಜಾಬ್‌ನ ನಂಬರ್ ಪ್ಲೇಟ್ ಇರುವ ವಾಹನಗಳು ಕಾಣಿಸಿಕೊಳ್ಳುತ್ತಿದೆ ಎಂದಿದ್ದರು.
ಪರ್ವೇಶ್ ವರ್ಮಾ ಹೇಳಿಕೆಯನ್ನು ಖಂಡಿಸಿದ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಮಾನ್, “ವರ್ಮಾ ಪಂಜಾಬಿಗಳನ್ನು ದೇಶಕ್ಕೆ ಬೆದರಿಕೆಯೆಂಬಂತೆ ಬಿಂಬಿಸುತ್ತಿದ್ದಾರೆ” ಎಂದು ಹೇಳಿದ್ದರು. ಈ ಹೇಳಿಕೆಯನ್ನು ವಿರೋಧಿಸಿರುವ ವರ್ಮಾ, “ನಾನು ಮತ್ತು ನನ್ನ ಕುಟುಂಬ ಸಿಖ್ಖರಿಗಾಗಿ ಏನೂ ಮಾಡಿದ್ದೇವೆ ಎಂದು ನಾನು ಉಲ್ಲೇಖಿಸಬೇಕಾಗಿಲ್ಲ. ನನಗೆ ಅವರ ಪ್ರಚಾರದಿಂದ ಸಮಸ್ಯೆಯಿಲ್ಲ. ಆದರೆ ಅವರು ಚೀನೀ ಸಿಸಿಟಿವಿ ಕ್ಯಾಮೆರಾ ಅಳವಡಿಸುತ್ತಿದ್ದಾರೆ, ಮದ್ಯ ಮತ್ತು ಹಣ ಹಂಚುತ್ತಿದ್ದಾರೆ” ಎಂದು ದೂರಿದ್ದಾರೆ.
ಹಾಗೆಯೇ ತನ್ನ ವಿರುದ್ಧವಾಗಿ ಸುಳ್ಳು ಆರೋಪಗಳನ್ನು ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಬ್ಬರ ವಿರುದ್ಧವೂ ಮಾನನಷ್ಟ ಮೊಕದ್ದಮೆಯನ್ನು ವರ್ಮಾ ಹೂಡಿದ್ದಾರೆ.
