- ಆರೋಗ್ಯ ವಿಮೆ ಸೇವೆಯಲ್ಲಿ ಸುಧಾರಣೆ ತರಲು ಯೋಜನೆ ರೂಪಿಸಲಾಗುತ್ತಿದೆ
- ಕೋವಿಡ್ ಕಾಲದ ವೈದ್ಯಕೀಯ ಪರಿಕರ ಖರೀದಿ ಅಕ್ರಮದ ಬಗ್ಗೆ ಸಭೆಯಲ್ಲಿ ಚರ್ಚೆ
ಆರೋಗ್ಯ ವಿಮೆ ಮೂಲಕ ಚಿಕಿತ್ಸೆ ಪಡೆದ ಎರಡು ವಾರದೊಳಗೆ ಖಾಸಗಿ ಆಸ್ಪತ್ರೆಗಳಿಗೆ ವೆಚ್ಚದ ಬಿಲ್ ಪಾವತಿಯಾಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ವಿಮೆಯೋಜನೆ ಸರಳೀಕರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.
ಇಂದು ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರಿಗೆ ಸುಲಲಿತವಾಗಿ ಆರೋಗ್ಯ ಸೇವೆಗಳು ದೊರಕಿಸುವ ನಿಟ್ಟಿನಲ್ಲಿ ಸಿಎಂ ಚರ್ಚಿಸಿದ್ದಾರೆ ಎಂದು ತಿಳಿಸಿದರು.
ಜನರಿಗೆ ಆರೋಗ್ಯ ವಿಮಾ ಯೋಜನೆಗಳು ಸುಲಲಿತವಾಗಿ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ವಿಮೆ ಸೇವೆಯಲ್ಲಿ ಸುಧಾರಣೆ ತರಲು ಯೋಜನೆ ರೂಪಿಸಲಾಗುತ್ತಿದೆ. ಆರೋಗ್ಯ ವಿಮೆ ಮೂಲಕ ಚಿಕಿತ್ಸೆ ಪಡೆದ ಬಳಿಕ ಎರಡು ವಾರದೊಳಗೆ ಖಾಸಗಿ ಆಸ್ಪತ್ರೆಗಳಿಗೆ ಬಿಲ್ ಪಾವತಿಯಾಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಚಿವರು ಹೇಳಿದರು.
ಇಲ್ಲಿಯವರೆಗೂ ಆರೋಗ್ಯ ಕರ್ನಾಟಕ ಕಾರ್ಡ್(ಆಯುಷ್ಮಾನ್ ಕಾರ್ಡ್)ನೊಂದಿಗೆ ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋದರೆ ವಿಮೆ ಸೌಲಭ್ಯ ಲಭ್ಯವಾಗುತ್ತಿರಲಿಲ್ಲ. ಬದಲಿಗೆ ಸರ್ಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ರೆಫರೆನ್ಸ್ ಪಡೆದು ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತಹ ವ್ಯವಸ್ಥೆ ಇದೆ. ಈ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ತರಲಾಗುವುದು ಎಂದು ಸಚಿವ ಗುಂಡೂರಾವ್ ಹೇಳಿದರು.
ಈ ಸುದ್ದಿ ಓದಿದ್ದೀರಾ?:ಸರ್ಕಾರಿ ಆಸ್ಪತ್ರೆಗಳ ಅಸಮರ್ಪಕ ನಿರ್ವಹಣೆ: ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ
ಕೋವಿಡ್ ಕಾಲದ ವೈದ್ಯಕೀಯ ಪರಿಕರ ಖರೀದಿ ಕುರಿತು ಚರ್ಚೆ
ಚಾಮರಾಜನಗರ ದುರಂತ ಕೇಸ್ ಮರು ತನಿಖೆ ಕುರಿತಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಗಮನಕ್ಕೆ ತರಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್, ಕೋವಿಡ್ ಸಂದರ್ಭದಲ್ಲಿ ನಡೆದ ವೈದ್ಯಕೀಯ ಖರೀದಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ಖರೀದಿ ವೇಳೆ ಅಕ್ರಮ ನಡೆದಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಹೀಗಾಗಿ ಅದರ ತನಿಖೆಗೆ ಸಿದ್ದತೆ ನಡೆದಿದೆ. ಆದರೆ ಇದು ಸೇಡಿನ ರಾಜಕಾರಣ ಅಲ್ಲ. ಬದಲಿಗೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿರುವ ಸಾಧ್ಯತೆ ಪರಿಶೀಲನಾ ಕ್ರಮ ಎಂದು ಹೇಳಿದರು.
ಇನ್ನು ಬಿಜೆಪಿಯ ಕೆಲವರು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಗುಂಡೂರಾವ್, ಯಾರು ಯಾರ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಅನ್ನೋದು ಸ್ಪಷ್ಟವಾಗಿ ಹೇಳಲಿ. ಅವರ ಬಳಿ ಸ್ಪಷ್ಟ ಮಾಹಿತಿಗಳಿದ್ದರೆ ಬಹಿರಂಗಪಡಿಸಲಿ, ಅದನ್ನು ಬಿಟ್ಟು ಸುಮ್ಮನೆ ಹೇಳಿಕೆ ನೀಡುವುದರಲ್ಲಿ ಅರ್ಥವಿಲ್ಲ. ನನ್ನ ಗಮನಕ್ಕೆ ಬಂದಂತೆ ಆ ರೀತಿಯ ಘಟನೆಗಳು ನಡೆದಿಲ್ಲ. ಒಳ ಒಪ್ಪಂದದ ಪ್ರಶ್ನೆಯೇ ಉದ್ಬವಿಸಲ್ಲ ಎಂದರು.