ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವೊಂದು ಸಿಕ್ಕಿದ್ದು, ಈ ಪ್ರಕರಣದ ಹಿಂದೆ ಬಿಜೆಪಿ ನಾಯಕನೋರ್ವನ ಕೈವಾಡ ಇದೆ ಎಂದು ಖುದ್ದು ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆಯ ಜೊತೆಗೆ ಮಾತನಾಡುತ್ತಾ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದಾರೆ.
“ಚುನಾವಣೆಗೂ ಮುನ್ನ ಬಿಜೆಪಿ ನಾಯಕರೊಬ್ಬರು ಸೇರಿದಂತೆ ವಿರೋಧ ಪಕ್ಷದ ನಾಯಕರು ಹಾಸನದಲ್ಲಿ ತಾವು ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದ ಬಳಿಕ ಪೆನ್‌ಡ್ರೈವ್ ಅನ್ನು ಹಂಚಿದ್ದಾರೆ” ಎಂದು ಎಚ್‌ಡಿಕೆ ಗಂಭೀರ ಆರೋಪ ಮಾಡಿದ್ದಾರೆ.
#WATCH | Shivamogga: On ‘obscene videos’ case involving JD(S) MP Prajwal Revanna, former Karnataka CM and JD(S) leader HD Kumaraswamy says, “Three days before going to the polls, some sections of our opposition groups particularly some Congress leaders including one BJP leader,… pic.twitter.com/crxJH9swUA
— ANI (@ANI) April 29, 2024
“ಚುನಾವಣೆ ನಡೆಯುವ ಮೂರು ದಿನಕ್ಕೂ ಮುನ್ನ ನಮ್ಮ ವಿರೋಧಿ ಗುಂಪುಗಳ ಕೆಲವು ಜನರು, ವಿಶೇಷವಾಗಿ ಒಬ್ಬ ಬಿಜೆಪಿ ನಾಯಕ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು ಸೇರಿಕೊಂಡಿದ್ದಾರೆ. ಹಾಸನ ಕ್ಷೇತ್ರದಲ್ಲಿ ಅವರ ಪ್ರಚಾರ ವಿಫಲವಾಗಿದೆ. ಆಂತರಿಕವಾಗಿ ಬೆನ್ನಿಗೆ ಚೂರಿ ಹಾಕಿದ ನಂತರವೂ ಅವರಿಗೆ ಯಶಸ್ಸು ಸಿಗದು ಎಂದು ಸಾಬೀತಾಗಿದೆ. ಹೀಗಾಗಿ ಪೆನ್‌ಡ್ರೈವ್ ಹರಿಬಿಡುವ ನಿರ್ಧಾರ ಮಾಡಿದರು” ಎಂದು ಎಚ್‌ಡಿಕೆ ದೂರಿದರು.
ಇದನ್ನು ಓದಿದ್ದೀರಾ? ವಿಜಯಪುರ | ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೆಆರ್‌ಎಸ್ ಪಕ್ಷ ಆಗ್ರಹ
“ತಮಗೆ ಗೆಲುವು ಆಗಲ್ಲ ಎಂದು ತಿಳಿದ ಬಳಿಕ ಚುನಾವಣೆಗೂ ಮುನ್ನ ಪ್ರಜ್ವಲ್ ರೇವಣ್ಣ ಬಗ್ಗೆ ಕೆಲವು ಪೆನ್ ಡ್ರೈವ್ ಗಳನ್ನು ಹರಿಬಿಡಲು ಅವರು ನಿರ್ಧರಿಸಿದ್ದಾರೆ. ಆದರೆ ಅದು ನಕಲಿಯೋ ಅಸಲಿಯೋ ಗೊತ್ತಿಲ್ಲ” ಎಂದರು.
“ದೇವೇಗೌಡರು ಹಾಗೂ ನಮ್ಮ ಕುಟುಂಬದವರನ್ನು ನಿಂದಿಸುವ ಯತ್ನ ಮಾಡಿದ್ದಾರೆ. ನಮ್ಮ ಇಮೇಜ್ ಹಾಳು ಮಾಡುವ ಉದ್ದೇಶ ಹೊಂದಿದ್ದರು. ಅದಕ್ಕಾಗಿ ಸರ್ಕಾರದ ಅಧಿಕಾರವನ್ನು ದುರುಪಯೋಗ ಮಾಡಿದ್ದಾರೆ. ಇದರ ಹಿಂದೆ ಒಬ್ಬ ಸಚಿವ, ಅದರಲ್ಲೂ ಹಿರಿಯ ಸಚಿವರೊಬ್ಬರು ಇದ್ದಾರೆ. ಹಾಸನದ ಕೆಲವು ಬಿಜೆಪಿ ನಾಯಕರೂ ಇದ್ದಾರೆ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ‘ವಿಕೃತ ಕಾಮ ಪಿಶಾಚಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ’ ಜನಪರ ಚಳುವಳಿಗಳ ಒಕ್ಕೂಟ ಆಗ್ರಹ
“ಸರ್ಕಾರ ಈಗಾಗಲೇ ಎಸ್‌ಐಟಿ ರಚನೆ ಘೋಷಿಸಿದೆ. ಈಗ ಅದು ಸರ್ಕಾರ ಮತ್ತು ಎಸ್‌ಐಟಿಯ ಜವಾಬ್ದಾರಿ. ಪ್ರಜ್ವಲ್ ರೇವಣ್ಣ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ತಪ್ಪು ಮಾಡಿದ್ದರೆ ಕಾನೂನನ್ನು ಎದುರಿಸಬೇಕಾಗುತ್ತದೆ. ಕಾನೂನು ಬಾಹಿರವಾಗಿ ಏನಾದರೂ ಮಾಡಿದ್ದರೆ ಅದಕ್ಕೆ ಶಿಕ್ಷೆ ಎದುರಿಸಬೇಕಾಗುತ್ತದೆ. ನಮ್ಮ ಕುಟುಂಬದ ಸದಸ್ಯನಾಗಿ ಅವರನ್ನು ರಕ್ಷಿಸಲು ನಾನು ಬಯಸುವುದಿಲ್ಲ” ಎಂದು ಹೇಳಿದರು.
“ಈ ಪೆನ್ ಡ್ರೈವ್‌ಗಳ ವೈರಲ್ ಮಾಡಿರುವುದು ಕೂಡಾ ಘೋರ ಅಪರಾಧ. ಇದರಿಂದಾಗಿ ಕೆಲವು ಅಮಾಯಕ ಮಹಿಳೆಯರ ಚಾರಿತ್ರ್ಯ ಹರಣವಾಗಿದೆ. ಇದನ್ನು ಮಾಡಿದವರು ಯಾರು ಎಂದು ಕಂಡುಹಿಡಿಯುವುದು ಎಸ್‌ಐಟಿಯ ಜವಾಬ್ದಾರಿಯಾಗಿದೆ. ನಮ್ಮ ಮೈತ್ರಿ ಮುರಿಯಲು ಮತ್ತು ನಮ್ಮ ಗೆಲುವಿನ ಸಾಧ್ಯತೆ ಕಡಿಮೆ ಮಾಡಲು ಆ ಪೆನ್‌ಡ್ರೈವ್‌ಗಳನ್ನು ಬಳಸಲಾಗಿದೆ. ಇದು ಅಭ್ಯರ್ಥಿಗಳ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಎಚ್‌ಡಿಕೆ ತಿಳಿಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿರುಕು?
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದಲ್ಲಿ ಬಿಜೆಪಿಯು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಈಗಾಗಲೇ 14 ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆಯು ಏ.26ರಂದು ನಡೆದಿದೆ. ಈ 14 ಕ್ಷೇತ್ರಗಳ ಪೈಕಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದ ಹಾಸನ ಜೊತೆಗೆ ಕೋಲಾರದಲ್ಲಿ ಮಲ್ಲೇಶ್ ಬಾಬು ಹಾಗೂ ಮಂಡ್ಯದಲ್ಲಿ ಕುಮಾರಸ್ವಾಮಿ ಅಭ್ಯರ್ಥಿಗಳಾಗಿ ನಿಂತಿದ್ದಾರೆ.
ಪ್ರಜ್ವಲ್ ಪ್ರಕರಣ ಈಗ ದೇಶಾದ್ಯಂತ ಸುದ್ದಿಯಾಗುತ್ತಿದೆ. ಈ ನಡುವೆಯೇ ಕುಮಾರಸ್ವಾಮಿಯವರು ರಾಷ್ಟ್ರೀಯ ಸುದ್ದಿಸಂಸ್ಥೆಗೆ ನೀಡಿರುವ ಈ ಹೇಳಿಕೆಯಿಂದ ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.