ಬಿಜೆಪಿ ನಾಯಕರು ಎಷ್ಟೇ ಸುಳ್ಳು ಹೇಳಿದರೂ ಕುಗ್ಗದೆ, ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿ ಅಲ್ಪ ಮಟ್ಟಿಗಿನ ಬರಪರಿಹಾರ ಮೊತ್ತವನ್ನು ತಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಹಿತಿಗಳು, ಹೋರಾಟಗಾರರು, ಚಿಂತಕರು, ಶ್ರೀಸಾಮಾನ್ಯರು, ವಕೀಲರು, ಪತ್ರಕರ್ತರು- ಹೀಗೆ ವಿವಿಧ ಕ್ಷೇತ್ರದ ಜನರು ಸರ್ಕಾರದ ಕೆಲಸವನ್ನು ಶ್ಲಾಘಿಸಿದ್ದಾರೆ. “ಚುನಾವಣಾ ನೀತಿ ಸಂಹಿತೆ ಇದ್ದರೂ ಬರ ಪರಿಹಾರ ಮಾಡಿದ ಮೋದಿಯವರಿಗೆ ಧನ್ಯವಾದ” ಎಂದು ಹೇಳುತ್ತಿರುವ ಬಿಜೆಪಿ ನಾಯಕರ ನಡೆಯನ್ನೂ ಖಂಡಿಸುತ್ತಿದ್ದಾರೆ.
ಯಾರು ಏನಂದರು?
ಕೊನೆಗೂ ಕರ್ನಾಟಕ ಸರ್ಕಾರದ ಹೋರಾಟಕ್ಕೆ ನ್ಯಾಯ ಸಿಕ್ಕಿತು. ಆದರೆ ಕರ್ನಾಟಕವನ್ನು ಪ್ರತಿನಿಧಿಸುವ ಬಿಜೆಪಿ ಸಂಸದರ ಧೋರಣೆ ಕರ್ನಾಟಕಕ್ಕೆ ದ್ರೋಹ ಬಗೆದ ನಡವಳಿಕೆಯಾಗಿತ್ತು. ಇಂಥ ಸಂಸದರು ನಮಗೆ ಬೇಕೆ ಎಂಬುದು ಕರ್ನಾಟಕದ ಮುಂದಿರುವ ಪ್ರಶ್ನೆ. ಸಂವಿಧಾನಾತ್ಮಕವಾಗಿ ಒಕ್ಕೂಟ ವ್ಯವಸ್ಥೆಯನ್ನು ಕಾಪಾಡಬೇಕಾದದ್ದು ಕೇಂದ್ರದ ಕರ್ತವ್ಯ. ಅದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇದು ಒಕ್ಕೂಟ ವ್ಯವಸ್ಥೆಯ ಗೆಲುವು. ಕರ್ನಾಟಕದ ಗೆಲುವು. ಪಟ್ಟು ಬಿಡದೆ ನ್ಯಾಯಕ್ಕಾಗಿ ಹೋರಾಡಿದ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆಗಳು.
– ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ
***
ಕೇಂದ್ರವು ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ಕೊಡದೆ ಮಲತಾಯಿ ಧೋರಣೆ ಅನುಸರಿಸುತ್ತಿತ್ತು. ಈಗ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಛೀಮಾರಿ ಹಾಕಿದ ಮೇಲೆ ನಾವೇ ಕೊಡ್ತಿವಿ ಅಂತ ಹೇಳುತ್ತಿರುವುದು ಚುನಾವಣಾ ರಾಜಕೀಯ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿಲ್ಲ. ಈ ಬಾರಿ ದೇಶದ ಜನ ಬುದ್ಧಿ ಕಲಿಸುತ್ತಾರೆ.
– ಕೊಟ್ಟ ಶಂಕರ್, ಹೋರಾಟಗಾರರು
***
ಬರದಿಂದ ನಮ್ಮ ರೈತರು ಕಂಗೆಟ್ಟಿದ್ದಾಗ ಅವರ ಹೃದಯ ಕಲ್ಲಾಗಿತ್ತು. ಕನ್ನಡಿಗರು ಹೋರಾಟ ಮಾಡಿ ಪರಿಹಾರ ಪಡೆಯಬೇಕಾಯಿತು. ಅವರದು ರೈತದ್ರೋಹ ಮಾತ್ರವಾಗಿರಲಿಲ್ಲ. ಕರ್ನಾಟಕ ದ್ರೋಹವೂ ಆಗಿತ್ತು.
– ರಹಮತ್ ತರೀಕೆರೆ, ಹಿರಿಯ ಸಾಹಿತಿ
***
ಕೇಂದ್ರದ ಭಂಡ ಸರ್ಕಾರ ಕಡೆಗೂ ತಲೆ ಬಾಗಿದೆ. ರಾಜ್ಯ ಸರ್ಕಾರದ ನ್ಯಾಯಬದ್ಧ ಹೋರಾಟಕ್ಕೆ ಮಣಿದಿದೆ. ಒಕ್ಕೂಟ ವ್ಯವಸ್ಥೆಯ ಸಾಮರಸ್ಯವನ್ನು ಹಾಳು ಮಾಡುವ ಕೇಂದ್ರ ಸರ್ಕಾರದ ದಬ್ಬಾಳಿಕೆಗೆ ಸುಪ್ರೀಂ ಕೋರ್ಟ್ ಕಡಿವಾಣ ಹಾಕಿದ್ದು ನ್ಯಾಯಾಂಗದ ಮೇಲಿನ ಗೌರವವನ್ನು ಹೆಚ್ಚಿಸಿದೆ. ಬರಪರಿಹಾರ ಬಿಡುಗಡೆಯಿಂದ ರಾಜ್ಯದ ರೈತರು ಉಸಿರಾಡುವಂತಾಗಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು.
– ಇಂದೂಧರ ಹೊನ್ನಾಪುರ, ಹಿರಿಯ ಪತ್ರಕರ್ತರು, ಹೋರಾಟಗಾರರು
***
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡಿದ್ದಕ್ಕೆ ಇಷ್ಟಾದರೂ ಬರ ಪರಿಹಾರ ಬಂದಿದೆ. ಇಲ್ಲದಿದ್ದರೆ ಮೋದಿ ಸರ್ಕಾರ ಬಿಡಗಾಸೂ ಕೊಡುತ್ತಿರಲಿಲ್ಲ. ಉಳಿದ ಹಣಕ್ಕಾಗಿ ಮತ್ತೆ ನ್ಯಾಯಾಲಯದಲ್ಲಿಯೇ ಹೋರಾಡಬೇಕು. ಇಲ್ಲದಿದ್ದರೆ ಖಂಡಿತವಾಗಿಯೂ ಮೋದಿ ಸರ್ಕಾರ ಕನ್ನಡ ನಾಡಿನ ಹಿತ ಕಾಯುವುದಿಲ್ಲ. ಕನ್ನಡ ಜನತೆಯ ಪರವಾಗಿ ದಿಟ್ಟ ಹೋರಾಟ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧನ್ಯವಾದಗಳು.
– ಎನ್.ವೆಂಕಟೇಶ್, ದಲಿತ ಮುಖಂಡರು
***
ಮೋದಿ ಪರಿವಾರದ ಹತ್ತು ವರ್ಷಗಳ ಆಳ್ವಿಕೆ ಅದಾನಿ, ಅಂಬಾನಿಗಳ ಆಸ್ತಿ ಗಳಿಕೆಗೆ ಅಡಿಪಾಯವಾಗಿದೆ. ದೇಶದ ಜನತೆ ಮತ್ತೊಮ್ಮೆ ಮೋಸ ಹೋಗದಂತೆ ಎಚ್ಚರ ವಹಿಸೋದು ಪ್ರತಿಯೊಬ್ಬ ಪ್ರಜ್ಞಾವಂತ ಮತದಾರರ ಜವಾಬ್ದಾರಿಯಾಗಿದೆ.
– ಅಂಬಣ್ಣ ಅರೋಲಿಕರ್, ಹೋರಾಟಗಾರರು
***
ರೈತರು ಬೆಳೆದ ಬೆಳೆ ನಷ್ಟವಾದಾಗ ಆತನ ನೆರವಿಗೆ ಬರಬೇಕಾದ ಸರ್ಕಾರಗಳು ಬಾರದೇ ಇದ್ದಾಗ ಅದರಲ್ಲೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿದಾಗ ಸುಪ್ರೀಂಕೋರ್ಟ್ ಸರಿಯಾಗಿ ಛಾಟಿಯೇಟು ಬೀಸಿದೆ. ಇದು ರಾಜ್ಯಕ್ಕೆ ಸಿಕ್ಕ ಜಯ.
– ಲಿಂಗರೆಡ್ಡಿ ಮಾನ್ವಿ, ರೈತ ಮುಖಂಡರು, ರಾಯಚೂರು
***
ಕರ್ನಾಟಕದಲ್ಲಿ ಬರ ಬಿದ್ದು ರೈತರು ಬೆಳೆದ ಬೆಳೆಗಳು ಸಿಕ್ಕಾಪಟ್ಟೆ ನಷ್ಟವಾದರೂ ಕೇಂದ್ರ ಸರ್ಕಾರ ಪರಿಹಾರ ಕೊಡದೇ ಸತಾಯಿಸಿತು. ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ ಪರಿಣಾಮವಾಗಿ ನಮಗೆ ಬರಬೇಕಾದ ಪರಿಹಾರದ ಹಣ ಬಿಡುಗಡೆಗೆ ದಿಟ್ಟ ಪ್ರಯತ್ನವನ್ನು ಮಾಡಿದ ಫಲವಾಗಿ ಇಂದು ಪರಿಹಾರ ಬಿಡುಗಡೆಯಾಗಿದೆ. ನಾಡಿನ ರೈತರ ಹಿತಾರಕ್ಷಣೆ ಮಾಡಿದ ರಾಜ್ಯ ಸರ್ಕಾರಕ್ಕೆ ಕಾರ್ಯ ಶ್ಲಾಘನೀಯ.
– ಹನುಮೇಶ್ ಗುಂಡೂರು, ವಕೀಲರು
***
ಸರ್ವೋಚ್ಚ ನ್ಯಾಯಾಲಯದ ಛಡಿ ಏಟಿಗೆ ಹೆದರಿ ಬರ ಪರಿಹಾರವನ್ನು ಕೊಟ್ಟಂತೆ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಗೆ ಧಿಕ್ಕಾರವಿರಲಿ. ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ ಈ ಸಾಹಸ. ಕನ್ನಡಿಗರು ಈ ಬಾರಿ ಸರಿಯಾದ ಪಾಠ ಕಲಿಸಬೇಕಾಗಿದೆ.
– ಮೂಡ್ನಾಕೂಡು ಚಿನ್ನಸ್ವಾಮಿ, ಹಿರಿಯ ಸಾಹಿತಿ
***
ಮೋದಿ ಸರಕಾರವು ರಾಜ್ಯಗಳ ಅಧಿಕಾರಗಳನ್ನು ಸಂಪೂರ್ಣವಾಗಿ ಮಟ್ಟ ಹಾಕುತ್ತಿರುವಾಗ ಸಿದ್ರಾಮಯ್ಯ ಸರಕಾರ ಅದರ ವಿರುದ್ಧ ತೊಡೆ ತಟ್ಟಿ ನಿಂತು, ಬರಪರಿಹಾರ, ತೆರಿಗೆ ಪಾಲು ಕೇಳಿ, ಡೆಲ್ಲಿ ತನಕ ಹೋಗಿ, ಹೋರಾಟ ಮಾಡಿ, ಕರ್ನಾಟಕದ ಹಿತವನ್ನು ಕಾಪಾಡಿದ್ದಕ್ಕೆ ನಾವು ಧನ್ಯವಾದ ಹೇಳೋಣ. ರಾಜ್ಯದ ಹಿತಕಾಯುವ ನಾಯಕರು ನಮಗೀಗ ಬೇಕು.
– ಪುರುಷೋತ್ತಮ ಬಿಳಿಮಲೆ, ಹಿರಿಯ ಸಾಹಿತಿ
***
ನೊಂದವರ ನೋವನ್ನು ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸಲು ಸಾಧ್ಯವಾಗುವುದು- ಅಸಹನೆ, ಅನ್ಯಾಯ, ಅಸಮಾನತೆ ವಿರುದ್ಧವಾಗಿರುವ ಜೊತೆಗೆ ಸಹಿಷ್ಠುತೆ, ಕಾಳಜಿ ಸಾಮಾಜಿಕ ನ್ಯಾಯ ಇಷ್ಟರಲ್ಲಿ ನಂಬಿಕೆ ಇಟ್ಟ ಸರ್ಕಾರಕ್ಕೆ ಮಾತ್ರ ಸಾಧ್ಯ. ಈ ನಂಬಿಕೆಯೇ ಜನಪರ ಹೋರಾಟವಾಗಿ ಮಾರ್ಪಟ್ಟು ಬರ ಪರಿಹಾರ ಘೋಷಣೆಯನ್ನು ಜೀವನ್ಮರಣದ ಪ್ರಶ್ನೆಯಾಗಿಸಿಕೊಂಡು ಹೋರಾಟ ಮಾಡಿ ಜಾರಿಗೆ ತರಲು ಸಾಧ್ಯವಾಗಿದೆ. ಜನರ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸಿದ ಸರ್ಕಾರಕ್ಕೊಂದು ಜೈಕಾರ. ಆದಷ್ಟು ಬೇಗ ಉಳಿದ ಹಣವನ್ನೂ ಹೋರಾಟ ಮಾಡಿ ಕೇಂದ್ರ ಸರ್ಕಾರದಿಂದ ಪಡೆಯಬೇಕಾಗಿ ವಿನಂತಿ.
– ಅಕ್ಷತಾ ಹುಂಚದಕಟ್ಟೆ, ಪ್ರಕಾಶಕರು
