ಹರಿಯಾಣದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆದಿದೆ. ಈದು ಇಡೀ ದೇಶದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ದಿಕ್ಸೂಚಿ ಯಾಗಿದೆ ಎಂದು ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಜಾತಿ ರಾಜಕಾರಣವನ್ನು ಹರಿಯಾಣ ಜನರು ತಿರಸ್ಕಾರ ಮಾಡಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ಮೋದಿಯವರ ನಾಯಕತ್ವ ಹಾಗೂ ಸ್ಥಳೀಯವಾಗಿ ಪಕ್ಷದ ಸಂಘಟನಾ ಶಕ್ತಿ ಕಾರಣ” ಎಂದರು.
“ಲೋಕಸಭೆ ಚುನಾವಣೆಯ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ರಾಜಧಾನಿ ದೆಹಲಿಗೆ ಹತ್ತಿರ ಇರುವ ರಾಜ್ಯದ ಚುನಾವಣೆ ದೇಶದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಸೂಚಿಸುತ್ತಿದೆ. ಕಾಂಗ್ರೆಸ್‌ನವರು ಬಿಜೆಪಿಯನ್ನು ಸಂವಿಧಾನ ವಿರೋಧಿ ಎಂದು ಬಿಂಬಿಸಲು ಪ್ರಯತ್ನ ಮಾಡಿದರು. ಆದರೆ, ಜನರು ಸಬ್ ಕೆ ಸಾತ್ ಸಬ್ ಕಾ ವಿಕಾಸ್, ಶ್ರೇಷ್ಠ ಭಾರತ, ಅಮೃತ ಕಾಲ ವಿಚಾರಗಳಿಗೆ ಜನರು ಬೆಂಬಲ ಕೊಟ್ಟಿದ್ದಾರೆ. ಮಹಾರಾಷ್ಡದಲ್ಲಿಯೂ ಇದೆ ರೀತಿಯ ಫಲಿತಾಂಶ ಬರುವ ವಿಶ್ವಾಸ ಇದೆ” ಎಂದು ಹೇಳಿದರು.
“ಜಮ್ಮು ಕಾಶ್ಮೀರ ಸಾಮಾಜಿಕವಾಗಿ ಸೂಕ್ಷ ರಾಜ್ಯ ಅಲ್ಲಿ ಕಣಿವೆ ಹೊರಗೆ ನಮಗೆ ಬೆಂಬಲ ಸಿಕ್ಕಿದೆ. ಇನ್ನೂ ರಾಜಕಾರಣ ಇದೆ. ಇದೇ ಅಂತಿಮ ಅಲ್ಲ. ಹರಿಯಾಣದಲ್ಲಿನ ಸೋಲಿನ ಬಗ್ಗೆ ಕಾಂಗ್ರೆಸ್ ಗೌರವಯುತವಾಗಿ ಒಪ್ಪಿಕೊಂಡರೆ ಗೌರವ ಕೊಡುತ್ತೇವೆ, ಕುಂಟು ನೆಪ ಹೇಳಿದರೆ ಎದುರು ಉತ್ತರ ಕೊಡುತ್ತೇವೆ” ಎಂದು ಹೇಳಿದರು.