ಜನರು ಕೇಂದ್ರದಲ್ಲಿ ಸರ್ಕಾರ ಬದಲಾವಣೆ ಬಯಸುತ್ತಿದ್ದಾರೆ. ನಾನು ಎಲ್ಲಿಗೆ ಹೋದರೂ ಜನರು ಸರ್ಕಾರ ಬದಲಾವಣೆಯ ಬಗ್ಗೆ ಆಸಕ್ತಿ ಹೊಂದಿರುವುದು ಕಂಡುಬರುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
“ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎಲ್ಲ ಅಂಶಗಳಲ್ಲಿಯೂ ವಿಫಲವಾಗಿದೆ. ಹಣದುಬ್ಬರ ನಿಯಂತ್ರಿಣ ಮತ್ತು ಉದ್ಯೋಗ ಸೃಷ್ಟಿಯಲ್ಲೂ ವಿಫಲವಾಗಿದೆ. ಹೀಗಾಗಿಯೇ, ಕಳೆದ 10 ವರ್ಷಗಳಲ್ಲಿ ಜನರಿಗೆ ತಾವೇನು ಕೊಟ್ಟಿದ್ದೇವೆ ಎಂಬ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ. ಆದರೆ, ಬೇರೆ ವಿಷಯಗಳ ಬಗ್ಗೆ ಹೆಚ್ಚು ಮಾತನಾಡುತ್ತಿದೆ” ಎಂದು ಕಿಡಿಕಾರಿದ್ದಾರೆ.
“ಮೋದಿ ಸರ್ಕಾರ ಜನರನ್ನು ಬಡತನದಿಂದ ಮೇಲೆತ್ತಲು ವಿಫಲವಾಗಿದೆ. ಬಡತನವನ್ನು ಪರಿಹರಿಸಲು ಯಾವುದೇ ನೀತಿಯನ್ನು ಜಾರಿಗೊಳಿಸಿಲ್ಲ. ಮೋದಿ ಯಾವತ್ತೂ ಬಡವರ ಉದ್ಧಾರ ಮಾಡುವ ಕೆಲಸ ಮಾಡಿಲ್ಲ” ಎಂದಿದ್ದಾರೆ.
ಪಾಕಿಸ್ತಾನದೊಂದಿಗೆ ಕಾಂಗ್ರೆಸ್ ನಂಟು ಹೊಂದಿದೆ ಎಂಬ ಮೋದಿ ಆರೋಪದ ವಿರುದ್ಧ ಕಿಡಿಕಾರಿದ ಖರ್ಗೆ, “ನಾವು ಆಹ್ವಾನವಿಲ್ಲದೆ ಪಾಕಿಸ್ತಾನಕ್ಕೆ ಭೇಟಿ ನೀಡುವವರಲ್ಲ ಅಥವಾ ಪಾಕಿಸ್ತಾನದಿಂದ ಯಾವುದೇ ಉಡುಗೊರೆಯನ್ನು ತರುವುದಿಲ್ಲ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಬಲ್ಲವರು ಕಾಂಗ್ರೆಸ್ ಜೊತೆ ಸಂಬಂಧ ಹೊಂದಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.
“ಮೋದಿ ಆಡಳಿತದಲ್ಲಿ ಕಾರ್ಮಿಕ ಕಾನೂನುಗಳನ್ನು ಹಲವು ಬಾರಿ ಬದಲಾವಣೆ ಮಾಡಲಾಗಿದೆ. ಇದರಿಂದ ಕಾರ್ಮಿಕರು ಕಿರುಕುಳ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಈ ಎಲ್ಲ ಕಾನೂನುಗಳಲ್ಲಿ ಕಾರ್ಮಿಕರ ಪರವಾದ ಬದಲಾವಣೆಗಳನ್ನು ತರುತ್ತದೆ” ಎಂದು ಅವರು ಹೇಳಿದ್ದಾರೆ.