ಚುನಾವಣಾ ಆಯೋಗದ ವರ್ತನೆ, ನ್ಯಾಯಾಂಗದ ಪ್ರತಿಕ್ರಿಯೆ, ರಾಜ್ಯಗಳಲ್ಲಿ ಮತದಾನದ ವೇಳೆ ಮತದಾರರನ್ನು ತಡೆಯುವಿಕೆ, ಮತದಾನದ ಅಂಕಿಅಂಶಗಳಲ್ಲಿ ವ್ಯತ್ಯಾಸ ಇತ್ಯಾದಿಗಳು ಬಹಳಷ್ಟು ಅನುಮಾನಗಳನ್ನು ಹುಟ್ಟಿಸಿವೆ. ಆಳುತ್ತಿರುವ ಪಕ್ಷವು ಜನಾಭಿಪ್ರಾಯವನ್ನೇ ಬುಡಮೇಲು ಮಾಡಬಹುದು. ಯಂತ್ರಗಳನ್ನು ಹಾಳುಮಾಡುವ ಮೂಲಕ ಜನಾಭಿಪ್ರಾಯವನ್ನು ಪಾರದರ್ಶಕಗೊಳಿಸದೆ ಮೋಸಗೊಳಿಸುವ ಆತಂಕವಿದೆ. ಜನರ ಇಚ್ಛೆಯೇ ಪ್ರಜಾತಂತ್ರದ ಅಂತಿಮ ಆಯ್ಕೆಯಾಗಬೇಕು ಎಂದು ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ‘ಜನರ ಇಚ್ಛೆಯೇ ಜನತಂತ್ರದ ಫಲಿತವಾಗಬೇಕು’ ಎಂಬ ಹೆಸರನಲ್ಲಿ ನಡೆದ ಉನ್ನತ ಮಟ್ಟದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ”ಜನಾಭಿಪ್ರಾಯವನ್ನು ಬುಡಮೇಲು ಮಾಡುವುದು ಭಾರತ ಮತ್ತು ದೇಶದ ಪ್ರಜಾತಂತ್ರಕ್ಕೆ ಅಪಾಯಕಾರಿ. ಚುನಾವಣೆಯ ನಂತರ ಅಥವಾ ಅದಕ್ಕೆ ಮೊದಲು ಈ ಅಪಾಯ ನಮ್ಮ ಎದುರಿದೆ. ಇದರ ಬಗ್ಗೆ ನಾವು ಬಹಳ ಎಚ್ಚರಿಕೆ ವಹಿಸಬೇಕಿದೆ. ಆಳುವ ಪಕ್ಷವು ಹೊರತರುವ ಫಲಿತಾಂಶವನ್ನೇ ಜನರ ನಡುವೆ ಮಾನ್ಯಗೊಳಿಸಲು ಬಹಳಷ್ಟು ನರೇಟಿವ್‌ಗಳನ್ನು ಮಾಧ್ಯಮಗಳ ಮೂಲಕ ತಳ್ಳಲ್ಪಡುತ್ತವೆ. ಆಶ್ಚರ್ಯಕರವಾಗಿ ಮತ್ತೆ ಆಳುವ ಪಕ್ಷವೇ ಅಧಿಕರಕ್ಕೆ ಬರುತ್ತದೆ ಎಂದು ಫಲಿತಾಂಶಕ್ಕೂ ಮುನ್ನ, ಎಕ್ಸಿಟ್ ಪೋಲ್ ಮೂಲಕ ನಿರೂಪಣೆಯನ್ನು ಜನರ ನಡುವೆ ಹರಡಲಾಗುತ್ತಿದೆ. ಜನರು ನಿಧಾನವಾಗಿ ಅದನ್ನು ಒಪ್ಪಿಕೊಳ್ಳುವಂತೆ ಮಾಡಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
”ಇಂತಹ ಆತಂಕಕಾರಿ ಸನ್ನಿವೇಶವನ್ನು ನಿಭಾಯಿಸಲು ರಾಜಕೀಯ ವಿಪಕ್ಷಗಳು ಸಿದ್ಧರಿಲ್ಲ. ಇದನ್ನು ನಾಗರಿಕ ಸಮಾಜದ ಜಾಲವೇ ನಿಭಾಯಿಸಬೇಕು. ಅಂತಿಮವಾಗಿ ಇದೆಲ್ಲವೂ ಬೀದಿಗಳಲ್ಲ ನಿರ್ಧಾರವಾಗಬೇಕು. ಆದರೆ, ಜನರು ಬೀದಿಗೆ ಬರುವುದನ್ನು ಮರೆತಿದ್ದಾರೆ. ಕೇವಲ ದೆಹಲಿಯಲ್ಲಿ ಅಲ್ಲ, ದೇಶದ ಬೇರೆ ಬೇರೆ ಭಾಗಗಳಲ್ಲಿ ಜನರು ಬೀದಿಗೆ ಬಂದು ಪ್ರಶ್ನಿಸುವ ಕೆಲಸ ಮಾಡಬೇಕು” ಎಂದು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹೋರಾಟಗಾರ ಜೋಸೆಫ್ ಸ್ಟಾಲಿನ್, ”ಮತ ಪ್ರಮಾಣವನ್ನು ಚುನಾವಣಾ ಆಯೋಗ ಶೀಘ್ರದಲ್ಲೇ ಯಾಕೆ ಪೂರ್ತಿಯಾಗಿ ಮುಂದಿಡುತ್ತಿಲ್ಲ… ಅವರು ವ್ಯವಸ್ಥಿತವಾಗಿ ಜೂನ್ 4ರಂದು ಹೊರಬರುವ ಫಲಿತಾಂಶವನ್ನು ಮ್ಯಾನಿಪ್ಯುಲೇಟ್ ಮಾಡುವ ಸಿದ್ಧತೆ ಮಾಡಿದ್ದರೆ, ಅದನ್ನು ಪ್ರಶ್ನಿಸದ ಸರ್ವೋಚ್ಚ ನ್ಯಾಯಾಲಯವೂ ಇದರಲ್ಲಿ ಕೈಜೋಡಿಸಿದೆ. ಮತದಾನ ಅಂಕಿಅಂಶಗಳಲ್ಲಿ ತಮಿಳುನಾಡಿನಲ್ಲಿ 7.53% ವ್ಯತ್ಯಾಸವಿದೆ, ಅರುಣಾಚಲ ಪ್ರದೇಶ 1.22%, ಲಕ್ಷದ್ವೀಪ 25.4%, ಸಿಕ್ಕಿಂ 11.2% ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಚುನಾವಣಾ ಆಯೋಗ ಸಮರ್ಥಿಸಿಕೊಳ್ಳಲು ಸಾಧ್ಯವೇ” ಎಂದರು.
”ಮೂರು ಬಗೆಯ ಮೋಸ ನಡೆಯುತ್ತಿದೆ. 1. ಮತದಾರರ ಪಟ್ಟಿಯಲ್ಲೇ ಮೋಸ. 2. ಮತದಾನದಲ್ಲಿ ಮೋಸ – ಇವಿಎಂ ಮೂಲಕ ಮತಗಳನ್ನು ಬದಲಿಸುವುದು. 3. ಮತದಾನ ಅಂಕಿಅಂಶ ಪ್ರಕಟಿಸುವಲ್ಲಿ ಮೋಸ. ಚುನಾವಣಾ ಆಯೋಗವು ನಿಖರವಾಗಿ ಎಷ್ಟು ಮತದಾನವಾಗಿದೆ ಎಂಬುದನ್ನು ಸರಿಯಾಗಿ ಪ್ರಕಟಿಸದೆ ಮೋಸ ಮಾಡುತ್ತಿದೆ” ಎಂದು ಹೇಳಿದ್ದಾರೆ.