2019ರಲ್ಲಿ 17ನೇ ಲೋಕಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿದ್ದ ಬಿಜೆಪಿ ಸೇರಿದಂತೆ ಎಲ್ಲ 28 ಕ್ಷೇತ್ರಗಳ ಸಂಸದರು ತಮ್ಮ ಕ್ಷೇತ್ರ ಹಾಗೂ ಲೋಕಸಭೆಯಲ್ಲಿ ಮಾಡಿದ್ದೇನು ಎಂಬ ಬಗ್ಗೆ ”ಸಂವಿಧಾನದ ಹಾದಿಯಲ್ಲಿ” ಎಂಬ ಸಂಸ್ಥೆಯೊಂದು ಎಲ್ಲ ಸಂಸದರ ಕಾರ್ಯವೈಖರಿಯ ಬಗ್ಗೆ ನಡೆಸಿದ ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಯಲ್ಲಿ ಹಲವು ಕುತೂಹಲಕಾರಿ ಅಂಶಗಳನ್ನು ಉಲ್ಲೇಖಿಸಿದೆ.
‘ಸಂವಿಧಾನದ ಹಾದಿಯಲ್ಲಿ’ ಸಂಘಟನೆ ಕಳೆದ ಐದು ವರ್ಷಗಳಲ್ಲಿ ನಮ್ಮ ರಾಜ್ಯದ ಸಂಸದರು ತಮ್ಮ ಕ್ಷೇತ್ರ, ರಾಜ್ಯದ ಪರವಾಗಿ ಹಾಗೂ ಲೋಕಸಭೆಯಲ್ಲಿ ತಮ್ಮ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಿದ್ದಾರೆ ಎಂಬ ಮೌಲ್ಯಮಾಪನ ಮಾಡಿದ ಬಳಿಕ ಈ ವರದಿಯನ್ನು ಬಿಡುಗಡೆಗೊಳಿಸಿದೆ.
ಬೆಂಗಳೂರಿನ ಕ್ಯಾಪಿಟಲ್ ಹೊಟೇಲ್‌ನಲ್ಲಿ ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಅಧ್ಯಯನ ವರದಿಯನ್ನು ಸಂಶೋಧಕರಾದ ಎ ಎಂ ವಾಸವಿ ಹಾಗೂ ಪ್ರೊ. ಜಾನಕಿ ನಾಯರ್ ಅವರು ಬಿಡುಗಡೆಗೊಳಿಸಿದರು. ಈ ಅಧ್ಯಯನಕ್ಕೆ ಸುಮಾರು ಎರಡು ತಿಂಗಳು ಶ್ರಮಿಸಿರುವುದಾಗಿ ತಿಳಿಸಿದ್ದಾರೆ.
ಜನರ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತದಿದ್ದರೂ, ಬಿಜೆಪಿಯ ಸುಮಾರು 7ರಿಂದ 9 ಮಂದಿ ಬಿಜೆಪಿ ಸಂಸದರು ಕೋಮು ಗಲಭೆಗೆ ಪ್ರಚೋದನೆ, ದ್ವೇಷಭಾಷಣ, ಅಲ್ಪಸಂಖ್ಯಾತ ಸಮುದಾಯವನ್ನು ಟೀಕೆ ಮಾಡುವ ವಿಚಾರದಲ್ಲಿ ಮುಂಚೂಣಿಯಲ್ಲಿದ್ದರು ಎಂಬ ಅಂಶವನ್ನು ಅಧ್ಯಯನ ವರದಿ ಉಲ್ಲೇಖಿಸಿದೆ.
ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ಅನಂತ್ ಕುಮಾರ ಹೆಗಡೆ, ನಳಿನ್‌ಕುಮಾರ್ ಕಟೀಲು ಸೇರಿದಂತೆ ಏಳು ಮಂದಿ ಸಂಸದರು ಕೋಮುದ್ವೇಷ ಹರಡುವುದರಲ್ಲಿ ಎಳ್ಳಷ್ಟೂ ಹಿಂದೆ ಬಿದ್ದಿಲ್ಲ ಎಂದಿರುವ ವರದಿಯು, ಓರ್ವ ಸಂಸದ ಮಹಿಳೆಯನ್ನು ಕೂಡ ನಿಂದಿಸಿದ್ದಕ್ಕಾಗಿ ಸುದ್ದಿಯಾಗಿದ್ದ. ಅಲ್ಲದೇ, ‘ರಾಜ್ಯದ ಮೂವರು ಸಂಸದರು ಕ್ಷೇತ್ರದಲ್ಲಿ ಕಚೇರಿಯನ್ನೇ ಹೊಂದಿರಲಿಲ್ಲ’ ಎಂಬ ಅಂಶವನ್ನೂ ಕೂಡ ಬಹಿರಂಗಗೊಳಿಸಿದೆ.
2019ರಲ್ಲಿ ಬಿಜೆಪಿಯಿಂದ 25, ಜೆಡಿಎಸ್, ಕಾಂಗ್ರೆಸ್‌ನ ಓರ್ವ ಹಾಗೂ ಪಕ್ಷೇತರ ಓರ್ವ ಸಂಸದರು ಪ್ರತಿನಿಧಿಸಿದ್ದರು. ಇವರ ಪೈಕಿ ಬಿಜೆಪಿಯ ನಾಲ್ಕು ಮಂದಿ ಅಂದರೆ ಧಾರವಾಡವನ್ನು ಪ್ರತಿನಿಧಿಸುತ್ತಿದ್ದ ಪ್ರಲ್ಹಾದ್ ಜೋಶಿ ಕೇಂದ್ರ ಸಚಿವರಾಗಿದ್ದರೆ, ಉಡುಪಿ-ಚಿಕ್ಕಮಗಳೂರಿನಿಂದ ಶೋಭಾ ಕರಂದ್ಲಾಜೆ, ಬೀದರ್‌ನ ಭಗವಂತ್ ಖೂಬಾ ಹಾಗೂ ಚಿತ್ರದುರ್ಗದ ಸಂಸದ ಎ ನಾರಾಯಣಸ್ವಾಮಿ ರಾಜ್ಯ ಖಾತೆಯ ಸಚಿವರಾಗಿದ್ದರು.
ಸಂಸದರ ಕಾರ್ಯಕ್ಷಮತೆಯ ವರದಿಗೆ ಆಧಾರ?
ಕಾಂಗ್ರೆಸ್‌ನ ಓರ್ವ ಸಂಸದ ಸೇರಿದಂತೆ ಎಲ್ಲ 28 ಕ್ಷೇತ್ರಗಳ ಸಂಸದರು 2019ರಿಂದ ಮಾಡಿದ್ದೇನು ಎಂಬ ಬಗ್ಗೆ ಈ ಅಧ್ಯಯನ ವರದಿ ತಿಳಿಸಿದೆ. ಈ ಅಧ್ಯಯನಕ್ಕೆ ಲೋಕಸಭೆಯು ಆನ್‌ಲೈನ್‌ನಲ್ಲಿ ತಿಳಿಸಿರುವ ಮಾಹಿತಿಯಲ್ಲದೇ, ಪತ್ರಿಕಾ ವರದಿಗಳನ್ನು ಬಳಸಿಕೊಂಡಿರುವುದಾಗಿ ಅಧ್ಯಯನ ತಂಡ ತಿಳಿಸಿದೆ.
ಸಂಸತ್ತಿನಲ್ಲಿ ಹಾಜರಾತಿ, ಚರ್ಚೆಗಳ ಸಂಖ್ಯೆ ಮತ್ತು ಕೇಳಲಾದ ಪ್ರಶ್ನೆಗಳು, ಪ್ರಮುಖ ಚರ್ಚೆಗಳಲ್ಲಿ ಭಾಗವಹಿಸಿದ್ದ ಬಗ್ಗೆ, ಜನರ ಸಮಸ್ಯೆಗೆ ಓಗೊಟ್ಟಿರುವುದು ಸೇರಿದಂತೆ ಹಲವಾರು ವಿವರಗಳನ್ನು ತಿಳಿಸಿದೆ.
ಸಂಸತ್ತಿನಲ್ಲಿ ಹಾಜರಾತಿ ವಿಚಾರವನ್ನು ಗಮನಿಸಿದರೆ, ಹಾಜರಾತಿ ಸರಾಸರಿ 71 ಶೇ.ರಷ್ಟಿದೆ. 28 ಸಂಸದರ ಪೈಕಿ ಕೇವಲ ಒಂಭತ್ತು ಸಂಸದರು ಮಾತ್ರ ಶೇಕಡಾ 79ಕ್ಕಿಂತ ಹೆಚ್ಚಿನ ಹಾಜರಾತಿಯನ್ನು ಹೊಂದಿದ್ದರು. ಭಗವಂತ್ ಖೂಬಾ, ಪಿಸಿ ಮೋಹನ್, ಪಿ.ಸಿ.ಗದ್ದಿಗೌಡರ್, ಪ್ರತಾಪ್ ಸಿಂಹ, ಆರ್.ಎ.ನಾಯ್ಕ್, ಶೋಭಾ ಕರಂದ್ಲಾಜೆ, ಉದಾಸಿ, ಉಮೇಶ್ ಜಾಧವ್, ವೈ.ದೇವೇಂದ್ರಪ್ಪ ಮಾತ್ರ ಶೇ.79ಕ್ಕಿಂತ ಹೆಚ್ಚಿನ ಹಾಜರಾತಿ ಗಳಿಸಿದ್ದಾರೆ.
ಇದಕ್ಕಿಂತ ನಿರಾಶಾದಾಯಕ ಅಂಶ ಏನೆಂದರೆ, 28 ಸಂಸದರಲ್ಲಿ ನಮ್ಮ ಮೂವರು ಐದು ವರ್ಷಗಳಲ್ಲಿ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಹಿರಿಯ ಸಂಸದ ಹಾಗೂ ಮಾಜಿ ಸಿಎಂ ಡಿ ವಿ ಸದಾನಂದ ಗೌಡ, ರಮೇಶ್ ಜಿಗಜಿಣಗಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಐದು ವರ್ಷಗಳಲ್ಲಿ ಒಂದೇ ಒಂದು ಪ್ರಶ್ನೆ ಕೇಳಿಲ್ಲ ಎಂದು ವರದಿ ಉಲ್ಲೇಖಿಸಿದೆ. ಸುಮಾರು 16 ಸಂಸದರಷ್ಟೇ 100ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿರುವುದಾಗಿ ವರದಿ ತಿಳಿಸಿದೆ. ಅಲ್ಲದೇ, ಐದು ಮಂದಿ ಸಂಸದರು 1ರಿಂದ 50 ಪ್ರಶ್ನೆ ಹಾಗೂ 51ರಿಂದ 100 ಪ್ರಶ್ನೆಗಳನ್ನು 16 ಸಂಸದರು ಕೇಳಿರುವುದು ‘ಅಧ್ಯಯನ ವರದಿ’ ತಿಳಿಸಿದೆ.
ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಹಲವು ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆದಿದೆಯಾದರೂ, ಸಂಸದರಾದ ಅನಂತ್ ಕುಮಾರ್ ಹೆಗಡೆ (ಉತ್ತರ ಕನ್ನಡ), ಸದಾನಂದಗೌಡ (ಬೆಂಗಳೂರು ಉತ್ತರ), ಪ್ರಲ್ಹಾದ್ ಜೋಶಿ (ಧಾರವಾಡ), ರಮೇಶ್ ಸಿ.ಜಿಗಜಿಣಗಿ (ಬಿಜಾಪುರ) ಮತ್ತು ಶ್ರೀನಿವಾಸ್ ಪ್ರಸಾದ್ (ಚಾಮರಾಜನಗರ) ಅವರು ಯಾವುದರಲ್ಲೂ ಭಾಗವಹಿಸಿರಲಿಲ್ಲ ಎಂಬ ಅಂಶವನ್ನೂ ಕೂಡ ವರದಿ ಬಹಿರಂಗಗೊಳಿಸಿದೆ.
ಬೆಳಗಾವಿ ವಿಮಾನ ನಿಲ್ದಾಣದಿಂದ ಹೆಚ್ಚಿನ ವಿಮಾನಗಳನ್ನು ಆರಂಭಿಸುವಂತೆ ಮಂಗಳಾ ಸುರೇಶ ಅಂಗಡಿ ಕೇವಲ ಒಂದು ಚರ್ಚೆಯಲ್ಲಿ ಭಾಗವಹಿಸಿದ್ದರು. ಚಿಕ್ಕಬಳ್ಳಾಪುರ ಸಂಸದರಾಗಿದ್ದ ಬಚ್ಚೇಗೌಡ ಅವರು ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದ್ದು ಬಿಟ್ಟರೆ, ಬೇರೆ ಯಾವುದೇ ಚರ್ಚೆಯಲ್ಲಿ ಭಾಗವಹಿಸಲಿಲ್ಲ ಎಂದು ವರದಿ ತಿಳಿಸಿದೆ.
ತಮ್ಮ ಕ್ಷೇತದಲ್ಲಿಯೂ ಮೂಲಸೌಕರ್ಯ ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ದೊಡ್ಡ ಸೇತುವೆಗಳು, ಏರ್ ಪೋರ್ಟ್, ರೈಲ್ವೆ ಮುಂತಾದ ಬೃಹತ್ ಯೋಜನೆಗಳನ್ನು ತರಲು ಆಸಕ್ತಿ ತೋರಿದ್ದಾರಾದರೂ, ಜನರ ನಿತ್ಯ ಬದುಕಿಗೆ ಅಗತ್ಯವಾಗಿ ಬೇಕಿರುವ ಕುಡಿಯುವ ನೀರಿನ ಯೋಜನೆ, ಶೌಚಾಲಯ, ಶಾಲೆ, ಆಸ್ಪತ್ರೆಗಳ ಬಗ್ಗೆ ನಿರಾಸಕ್ತಿ ತೋರಿರುವುದಾಗಿ ವರದಿ ಉಲ್ಲೇಖಿಸಿದೆ.
ವರದಿಯ ಪ್ರಕಾರ ಮೂವರು ಸಂಸದರು ತಮ್ಮ ಕ್ಷೇತ್ರದಲ್ಲಿ ಸ್ವಂತ ಕಚೇರಿಯನ್ನೇ ಹೊಂದಿಲ್ಲ ಎಂಬ ಅಂಶವನ್ನು ಕೂಡ ವರದಿ ಉಲ್ಲೇಖಿಸಿದೆ. 10 ಮಂದಿ ಸಂಸದರಿಗೆ ಕಚೇರಿ ಇದ್ದರೂ ಕೂಡ, ಕ್ಷೇತ್ರದ ಜನರ ಕೈಗೆ ಸಿಗುತ್ತಿರಲಿಲ್ಲ ಎಂದಿದೆ. ಉಳಿದ 15 ಮಂದಿ ಸಂಸದರು ಕಚೇರಿ ಹೊಂದುವುದರ ಜೊತೆಗೆ ಸಾರ್ವಜನಿಕರಿಗೆ ಲಭ್ಯವಾಗುತ್ತಿದ್ದರು ಎಂಬ ವಿಚಾರದ ಬಗ್ಗೆಯೂ ಅಧ್ಯಯನ ವರದಿ ತಿಳಿಸಿದೆ.
ಕೊರೋನಾ ಕಾಲದಲ್ಲಿ ಇಬ್ಬರು ಸಂಸದರಷ್ಟೇ ಜನರಿಗೆ ನೆರವಾಗಿದ್ದಾರೆ. ಉಳಿದವರು ಜನರಿಗೆ ಯಾವುದೇ ಸಹಾಯ ಮಾಡಿಲ್ಲ. ಬೆಂಗಳೂರು ಗ್ರಾಮಾಂತರದ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಮತ್ತು ಕೇಂದ್ರ ಸಚಿವರಾಗಿರುವ ಪ್ರಲ್ಹಾದ್ ಜೋಶಿ ಕೋವಿಡ್ ಸಮಯದಲ್ಲಿ ಜನರಿಗೆ ನೆರವು ನೀಡಿದ್ದಾರೆ. ಹನ್ನೊಂದು ಸಂಸದರು ನಿಧಿಯನ್ನು ಬಳಸುವ ಸಭೆಗಳಿಗೆ ಹಾಜರಾಗುವ ಮೂಲಕ ಸೀಮಿತ ಬೆಂಬಲ ನೀಡಿದ್ದರೆ, 15 ಸಂಸದರು ಯಾವುದೇ ಕಾರ್ಯದಲ್ಲೂ ಮುಂಚೂಣಿಯಲ್ಲಿರಲಿಲ್ಲ. ಬಿಜೆಪಿಯ ತೇಜಸ್ವಿ ಸೂರ್ಯ ಮತ್ತು ವಿ ಶ್ರೀನಿವಾಸ್ ಪ್ರಸಾದ್ ಕೋವಿಡ್ ಸಂದರ್ಭದಲ್ಲಿ ನಕಾರಾತ್ಮಕ ವಿಚಾರಗಳಿಗಾಗಿ ಸುದ್ದಿಯಲ್ಲಿದ್ದರು ಎಂದು ವರದಿ ತಿಳಿಸಿದೆ.
ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಅವರು ರಾಜ್ಯದ ಸಮಸ್ಯೆಗಳ ಬಗ್ಗೆ ಆಗಾಗ ಧ್ವನಿ ಎತ್ತಿದ್ದಾರೆ. ಕಳೆದ ವರ್ಷ ರಾಜ್ಯದಲ್ಲಿ ಅನಗತ್ಯವಾಗಿ ಉಂಟಾಗಿದ್ದ ಹಿಜಾಬ್ ನಿಷೇಧ ವಿಚಾರ, ಹಿಂದಿ ಹೇರಿಕೆಯ ಬಗ್ಗೆ ಸಂಸತ್ತಿನಲ್ಲಿ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ಕೊನೆಯ ಅಧಿವೇಶನಲ್ಲಿ ಜಿಎಸ್‌ಟಿ ತೆರಿಗೆ ಪಾಲಿನ ಅನ್ಯಾಯದ ಬಗ್ಗೆ ಚರ್ಚಿಸುತ್ತ ತೀವ್ರ ಪ್ರತಿಭಟನೆ ನಡೆಸಿದ್ದನ್ನು ವರದಿ ತಿಳಿಸಿದೆ.
ಕುರುಬರು, ಕಾಡುಗೊಲ್ಲ, ಕುಂಚಿಟಿಗ ಜಾತಿ ಗುಂಪುಗಳಿಗೆ ಎಸ್‌ಸಿ/ಎಸ್‌ಟಿ ವರ್ಗದ ಸ್ಥಾನಮಾನ ನೀಡುವ ವಿಚಾರಕ್ಕೆ ಸಂಬಂಧಿಸಿ ಮೂವರು ಸಂಸದರು ಪ್ರಸ್ತಾವವಿಟ್ಟಿದ್ದಾರೆ. ಭಗವಂತ ಖೂಬಾ, ಜಿ.ಎಸ್.ಬಸವರಾಜ್ ಹಾಗೂ ಕೋಲಾರದ ಸಂಸದ ಮುನಿಸ್ವಾಮಿ ಇದನ್ನು ಪ್ರಸ್ತಾಪಿಸಿದ್ದಾರೆ. ತುಳುವನ್ನು ಒಂದು ಭಾಷೆಯಾಗಿ ಗುರುತಿಸುವಂತೆ ಶೋಭಾ ಕರಂದ್ಲಾಜೆ ವಿನಂತಿಸಿದ್ದರೆ, ಕರ್ನಾಟಕದ ಪ್ರವಾಹಕ್ಕೆ ಪರಿಹಾರ ನೀಡುವಂತೆ ಚಿಕ್ಕೋಡಿ ಹಾಗೂ ಬಾಗಲಕೋಟೆಯ ಸಂಸದರು ಸಂಸತ್‌ನಲ್ಲಿ ವಿನಂತಿಸಿದ್ದರೆಂಬ ಅಂಶವನ್ನು ಅಧ್ಯಯನ ವರದಿ ತಿಳಿಸಿದೆ.
ಶೋಭಾ ಕರಂದ್ಲಾಜೆ ಮತ್ತು ಪ್ರತಾಪ್ ಸಿಂಹ ಕಾಫಿ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ್ದರೆ, ಅಡಿಕೆ ಕೃಷಿ ಹಾಗೂ ರೋಗ, ಅಡಿಕೆ ಆಮದು ವಿಚಾರದ ಬಗ್ಗೆ ಪ್ರಸ್ತಾಪವಿಟ್ಟಿದ್ದನ್ನು ವರದಿ ಉಲ್ಲೇಖಿಸಿದೆ.
