ಬೆಂಗಳೂರಿನಲ್ಲಿ ಇಂದು ಸಿಟಿ ರೌಂಡ್ಸ್ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಒಂದು ತಿಂಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಮುಂದಾಗುವ ಅನಾಹುತವನ್ನು ತಪ್ಪಿಸಬೇಕು. ರಸ್ತೆ ಹಾಗೂ ಗುಂಡಿಗಳನ್ನು ನಿರ್ವಹಿಸಲು ಒಂದು ಶಾಶ್ವತ ನಿರ್ವಹಣಾ ವ್ಯವಸ್ಥೆ ರೂಪಿಸಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
“ಬೆಂಗಳೂರು ನಗರದ ವಾರ್ಡ್ ರಸ್ತೆಗಳಲ್ಲಿ ಸುಮಾರು 5500 ಗುಂಡಿಗಳು ಬಿದ್ದಿದೆ. ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ 557 ಗುಂಡಿಗಳಿವೆ. ಈ ಎಲ್ಲ ಗುಂಡಿಗಳನ್ನು ತಿಂಗಳಲ್ಲಿ ಭರ್ತಿ ಮಾಡಿ, ಮುಚ್ಚಬೇಕು ಎಂದು ಸೂಚಿಸಲಾಗಿದೆ” ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.
“ಸಿಲ್ಕ್ ಬೋರ್ಡ್ ಬಳಿ ಮೆಟ್ರೋ ನಿರ್ಮಿಸಿರುವ ರಸ್ತೆಯನ್ನು ಅಗಲೀಕರಿಸಲು ಸೂಚನೆ ನೀಡಲಾಗಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಡಿವಾಳ ಕೆರೆಯ ಬಳಿ ಇನ್ನೊಂದು ಚರಂಡಿ ನಿರ್ಮಿಸಲು ಸೂಚಿಸಲಾಗಿದೆ. ಈಜಿಪುರದಲ್ಲಿ ಬಿಬಿಎಂಪಿ ವತಿಯಿಂದ ಮೇಲ್ಸೇತುವೆ ನಿರ್ಮಾಣ ನೆನೆಗುದಿಗೆ ಬಿದ್ದಿದ್ದು, ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ. ಇವರ ಗುತ್ತಿಗೆ ರದ್ದು ಮಾಡಿ ಹೊಸಬರಿಗೆ ಕೊಡಲು ಸೂಚನೆ ನೀಡಲಾಗಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
“ಮುಂಗಾರು ಮಳೆಗೂ ಮುನ್ನ ಪ್ರವಾಹ ಉಂಟಾಗಬಾರದೆಂದು ಚುನಾವಣಾ ಆಯೋಗದಿಂದ ಅನುಮತಿ ಪಡೆದು 7-8 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ರಸ್ತೆ ಹಾಗೂ ಗುಂಡಿಗಳನ್ನು ನಿರ್ವಹಿಸಲು ಒಂದು ಶಾಶ್ವತ ನಿರ್ವಹಣಾ ವ್ಯವಸ್ಥೆ ರೂಪಿಸಲು ಸೂಚನೆ. ಗುಂಡಿಗಳು ಬಿದ್ದ ಹಾಗೆಯೇ ಕೂಡಲೇ ದುರಸ್ತಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಬಿಡಿಎನಲ್ಲಿಯೂ ಈ ರೀತಿ ವ್ಯವಸ್ಥೆ ರೂಪಿಸಲು ಸೂಚಿಸಲಾಗಿದೆ” ಎಂದು ತಿಳಿಸಿದರು.
ಮಳೆಗಾಲ ನಿರ್ವಹಣೆಗೆ ಎಲ್ಲ ರೀತಿಯಲ್ಲಿಯೂ ಸಜ್ಜಾಗಲು ಕರೆ
“ಮಳೆಗಾಲ ನಿರ್ವಹಣೆಗೆ ಎಲ್ಲ ರೀತಿಯಲ್ಲಿಯೂ ಸಜ್ಜಾಗಬೇಕು ಎಂದು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಮಳೆ ಬಂದಾಗ ನೀರು ನುಗ್ಗಿದರೆ ಇಂಜಿನಿಯರ್‌ಗಳನ್ನೇ ಹೊಣೆಗಾರರನ್ನಾಗಿಸಲಾಗುವುದು” ಎಂದು ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
“ರಾಜಕಾಲುವೆ ಒತ್ತುವರಿಯಾಗಿದ್ದರೆ ಎಷ್ಟೇ ಪ್ರಭಾವಿಗಳಾಗಿದ್ದರೂ ತೆರವುಗೊಳಿಸಲು ಸೂಚಿಸಲಾಗಿದೆ. ಬೆಂಗಳೂರಿನಲ್ಲಿ 400 ಕೆರೆಗಳಿದ್ದವು. ಅನೇಕ ಕೆರೆಗಳು ಹೂಳಿನಿಂದ ತುಂಬಿದೆ ಹಾಗೂ ಒತ್ತುವರಿಯಾಗಿವೆ. ಒತ್ತುವರಿ ತೆರವು ಮಾಡಿ ನೀರು ಹರಿಯಲು ಕಾಲುವೆ ನಿರ್ಮಾಣ ಮಾಡಲು ಸೂಚಿಸಲಾಗಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇದನ್ನು ಓದಿದ್ದೀರಾ? ಪರಸ್ಪರ ಸಹಯೋಗದಿಂದ ಕೆಲಸ ಮಾಡಿ: ‘ಬೆಂಗಳೂರು ಸಿಟಿ ರೌಂಡ್ಸ್’ ಬಳಿಕ ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
“ಜೂನ್‌ಗೆ ಮುಂಚೆಯೇ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಪ್ರವಾಹ ಸಂಬಂಧಿ ಸ್ಥಳಗಳನ್ನು ಮಾತ್ರ ಪರಿಶೀಲಿಸಲು ಚುನಾವಣಾ ಆಯೋಗ ಅನುಮತಿ ನೀಡಿದೆ. ಅದರಂತೆ ಪರಿಶೀಲಿಸಲಾಗಿದೆ” ಎಂದ ಸಿಎಂ ಸಿದ್ದರಾಮಯ್ಯ, ಕೆರೆಗಳಿಂದ ತೆಗೆಯಲಾಗುವ ಹೂಳನ್ನು ಗುರುತು ಮಾಡಿರುವ ಸ್ಥಳಗಳಲ್ಲಿ (ಕ್ವಾರಿಗಳಿಗೆ) ಹಾಕಲಾಗುತ್ತಿದೆ ಎಂದರು.
ಲೋಕಸಭೆಯ ನಂತರ ಬಿಬಿಎಂಪಿ ಚುನಾವಣೆ ಬಗ್ಗೆ ಚಿಂತನೆ
ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಬಿಬಿಎಂಪಿ ಚುನಾವಣೆ ಬಗ್ಗೆ ಲೋಕಸಭೆ ಫಲಿತಾಂಶದ ನಂತರ ಚಿಂತಿಸಲಾಗುವುದು” ಎಂದರು.
ವಿಪಕ್ಷ ನಾಯಕ ಆರ್ ಅಶೋಕ್ ಟೀಕೆಗೆ ಸಿಎಂ ತಿರುಗೇಟು
“ಸಿಎಂ , ಡಿಸಿಎಂ ಫೋಟೋ ಶೂಟ್ ಮಾಡಿಸಿಕೊಳ್ಳಲು ಬೆಂಗಳೂರು ಸಿಟಿ ರೌಂಡ್ಸ್‌ಗೆ ಹೋಗಿದ್ದಾರೆ” ಎಂದು ಬಿಜೆಪಿಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, “ಆರ್. ಅಶೋಕ್ ಕೇವಲ ಸುಳ್ಳು ಹೇಳುತ್ತಾರೆ” ಎಂದರು.
