ಬೌದ್ಧ ಧರ್ಮವನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸಬೇಕು. ಹಿಂದೂ ಧರ್ಮದಿಂದ ಬೌದ್ಧ, ಜೈನ ಮತ್ತು ಸಿಖ್ ಧರ್ಮಕ್ಕೆ ಮತಾಂತರಗೊಳ್ಳಲು ಗುಜರಾತ್ ಧರ್ಮದ ಸ್ವಾತಂತ್ರ್ಯ ಕಾಯಿದೆ-2003ರ ನಿಬಂಧನೆಗಳ ಅಡಿಯಲ್ಲಿ ಜಿಲ್ಲಾಧಿಕಾರಿಯಿಂದ ಪೂರ್ವಾನುಮತಿ ಪಡೆಯಬೇಕು ಎಂದು ಗುಜರಾತ್ ಸರ್ಕಾರವು ಸುತ್ತೋಲೆ ಹೊರಡಿಸಿದೆ.
ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡುತ್ತಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ ಎಂದಿರುವ ಗೃಹ ಇಲಾಖೆ, ಹೊಸ ಸುತ್ತೋಲೆ ಹೊರಡಿಸಿದೆ. ಸುತ್ತೋಲೆಗೆ ಉಪ ಕಾರ್ಯದರ್ಶಿ (ಗೃಹ) ವಿಜಯ್ ಬಧೇಕಾ ಸಹಿ ಹಾಕಿದ್ದಾರೆ.
ಗುಜರಾತ್‌ನಲ್ಲಿ, ಪ್ರತಿ ವರ್ಷ ದಸರಾ ಮತ್ತು ಇತರ ಹಬ್ಬಗಳ ಸಮಯದಲ್ಲಿ ಹೆಚ್ಚಾಗಿ ದಲಿತರು ಸಾಮೂಹಿಕವಾಗಿ ಬೌದ್ಧ ಧರ್ಮದ ದೀಕ್ಷೆ ಸ್ವೀಕರಿಸುತ್ತಾರೆ. ಅವರೆಲ್ಲರೂ ಹಿಂದು ಧರ್ಮದಲ್ಲಿನ ಜಾತೀಯತೆ, ಅಸ್ಪೃಶ್ಯತೆ ಅಚರಣೆ, ಜಾತಿ ದೌರ್ಜನ್ಯದಿಂದ ಬೇಸತ್ತು, ಬೌದ್ಧ ಧರ್ಮ ಸೇರುತ್ತಾರೆ ಎಂಬುದು ಗಮನಾರ್ಹ.
“ಹಿಂದು ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ಜಿಲ್ಲಾಧಿಕಾರಿ ಕಚೇರಿಗಳು ನಿಯಮಗಳನ್ನು ಅನುಸರಿಸದೇ ಇರುವುದು ಗಮನಕ್ಕೆ ಬಂದಿದೆ. ಇದಲ್ಲದೆ, ಕೆಲವೊಮ್ಮೆ, ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಧಾರ್ಮಿಕ ಮತಾಂತರಕ್ಕೆ ಪೂರ್ವಾನುಮತಿ ಅಗತ್ಯವಿಲ್ಲವೆಂದು ಭಾವಿಸಿರುವುದೂ ಕಂಡುಬಂದಿದೆ” ಎಂದು ಸರ್ಕಾರ ಹೇಳಿದೆ.
“ಪೂರ್ವಾನುಮತಿ ಕೋರಿ ಅರ್ಜಿಗಳನ್ನು ಸಲ್ಲಿಸಿದ ಸಂದರ್ಭಗಳಲ್ಲಿ, ಅವುಗಳನ್ನು ಸಂಬಂಧಪಟ್ಟ ಕಚೇರಿಗಳು ವಿಲೇವಾರಿ ಮಾಡಬೇಕು. ಆದರೆ, ಸಂವಿಧಾನದ 25(2)ರ ಅಡಿಯಲ್ಲಿ ಸಿಖ್ ಧರ್ಮ, ಜೈನ ಮತ್ತು ಬೌದ್ಧ ಧರ್ಮಗಳನ್ನು ಹಿಂದು ಧರ್ಮದಲ್ಲಿ ಸೇರಿಸಲಾಗಿದೆ. ಆದ್ದರಿಂದ, ಈ ಧರ್ಮಗಳಿಗೆ ಸೇರಲು ಅರ್ಜಿದಾರರು ಅನುಮತಿ ಪಡೆಯುವ ಅಗತ್ಯವಿಲ್ಲವೆಂದು ಕೆಲವು ಕಚೇರಿಗಳು ಭಾವಿಸಿವೆ” ಎಂದು ಸರ್ಕಾರದ ಸುತ್ತೋಲೆ ಹೇಳಿದೆ.
“ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯಡಿ ಬೌದ್ಧ ಧರ್ಮವನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸಬೇಕಾಗುತ್ತದೆ. ಕಾಯಿದೆಯ ಪ್ರಕಾರ, ಹಿಂದೂ ಧರ್ಮದಿಂದ ಬೌದ್ಧ/ಸಿಖ್/ಜೈನ ಧರ್ಮಕ್ಕೆ ಮತಾಂತರಗೊಳ್ಳಲು ನಿಗದಿತ ನಿಯಮಾನುಸಾರ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆಯಬೇಕು. ಅಲ್ಲದೆ, ಮತಾಂತರಗೊಳ್ಳುವ ವ್ಯಕ್ತಿಯು ತಮ್ಮ ಮತಾಂತರದ ಬಗ್ಗೆ ನಿಗದಿತ ನಮೂನೆಯಲ್ಲಿ ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕಾಗುತ್ತದೆ” ಎಂದು ಸರ್ಕಾರ ಹೇಳಿದೆ.
“ಕಾನೂನು ನಿಬಂಧನೆಗಳ ವಿವರವಾದ ಅಧ್ಯಯನ ಮಾಡಬೇಕು. ಕಾಲಕಾಲಕ್ಕೆ ರಾಜ್ಯ ಸರ್ಕಾರ ನೀಡುವ ಸೂಚನೆಗಳನ್ನು ಅನುಸರಿಸಿ ಧಾರ್ಮಿಕ ಮತಾಂತರದ ಅರ್ಜಿಯನ್ನು ವಿಲೇವಾರಿ ಮಾಡಬೇಕು” ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
2023ರಲ್ಲಿ ಕನಿಷ್ಠ 2,000 ಜನರು, ಮುಖ್ಯವಾಗಿ ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ. 2011ರ ಜನಗಣತಿ ಪ್ರಕಾರ, ಗುಜರಾತ್‌ನಲ್ಲಿ 30,483 ಬೌದ್ಧರಿದ್ದಾರೆ – ರಾಜ್ಯದ ಜನಸಂಖ್ಯೆಯಲ್ಲಿ 0.05% ರಷ್ಟು. ಜನಗಣತಿ ಅಧಿಕಾರಿಗಳು ಅವರನ್ನು ಹಿಂದೂಗಳೆಂದು ದಾಖಲಿಸಿರುವುದರಿಂದ ಬೌದ್ಧರ ನಿಖರ ಸಂಖ್ಯೆಯನ್ನು ಹೇಳಲಾಗುತ್ತಿಲ್ಲ ಎಂದು ಗುಜರಾತ್‌ನ ಬೌದ್ಧರು ವಾದಿಸಿದ್ದಾರೆ.