ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವ ಕ್ರಮವನ್ನು ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸೋಮವಾರ (ಆ.19) ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಪ್ರತಿಭಟನೆ ಆಯೋಜನೆ ಕುರಿತು ಸೂಚನೆ ಹೊರಡಿಸಿರುವ ಡಿ ಕೆ ಶಿವಕುಮಾರ್, ಸೋಮವಾರ ಕೆಪಿಸಿಸಿ ಜಿಲ್ಲಾ ಘಟಗಳಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕು. ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುತ್ತಾರೆ. ರಾಜ್ಯಪಾಲರ ಈ ಪಕ್ಷಪಾತಿ ನಡೆಯನ್ನು ಖಂಡಿಸಿ ಎಲ್ಲ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಖಂಡಿಸಬೇಕು ಎಂದು ಹೇಳಿದ್ದಾರೆ.
ರಾಜ್ಯಪಾಲರ ಅಸಂವಿಧಾನಿಕ ನಡೆಯನ್ನು ಖಂಡಿಸಿ ರಾಷ್ಟ್ರಪತಿಗಳಿಗೆ ನೇರವಾಗಿ ಇ-ಮೇಲ್ ಮೂಲಕ (presidentofindia@rb.nic.in) ಪತ್ರವನ್ನು (Memorandum) ನೀಡಬೇಕು. ಈ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಕನಿಷ್ಠ ಅರ್ಧ ಕಿ.ಮೀ. ಪಾದಯಾತ್ರೆ ಮೂಲಕ ಹೋಗಿ ಪ್ರತಿಭಟನೆ ಆರಂಭಿಸಬೇಕು. ಈ ಪ್ರತಿಭಟನೆಯ ವರದಿಯನ್ನು ಕೆಪಿಸಿಸಿಗೆ ಸಲ್ಲಿಸಬೇಕು ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಸಂಬಂಧಪಟ್ಟ ಸಚಿವರು, ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, 2024ರ ಲೋಕಸಭೆ ಅಭ್ಯರ್ಥಿಗಳು, ಕೆಪಿಸಿಸಿ ಪದಾಧಿಕಾರಿಗಳು, 2023ರ ವಿಧಾನಸಭೆ ಅಭ್ಯರ್ಥಿಗಳು, ಕೆಪಿಸಿಸಿ ಸದಸ್ಯರು, ಡಿಸಿಸಿ/ಬಿಸಿಸಿ ಪದಾಧಿಕಾರಿಗಳು, ಮುಂಚೂಣಿ ಘಟಕ/ಸೆಲ್/ವಿಭಾಗಗಳ ಅಧ್ಯಕ್ಷರು/ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಸದಸ್ಯರು, ವಾರ್ಡ್, ಪಂಚಾಯಿತಿ ಹಾಗೂ ಬೂತ್ ಮಟ್ಟದ ಕಾರ್ಯಕರ್ತರುಗಳು ಹಾಗೂ ಇತರ ಎಲ್ಲ ಸ್ಥಳೀಯ ಮುಖಂಡರುಗಳು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.

ಸಿಎಂ ವಿರುದ್ಧ ತನಿಖೆಗೆ ಅನುಮತಿ | ರಾಜ್ಯಪಾಲರ ನಡೆ ಖಂಡಿಸಿ ರಾಜ್ಯಾದ್ಯಂತ ಸೋಮವಾರ ಕೆಪಿಸಿಸಿ ಪ್ರತಿಭಟನೆ
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: