ಆರು ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 49 ಕ್ಷೇತ್ರಗಳ ಮತದಾರರು ಇಂದು ಪ್ರಮುಖ ನಾಯಕರ ಭವಿಷ್ಯವನ್ನು ನಿರ್ಧಾರ ಮಾಡಲಿದ್ದು, ಚುನಾವಣೆ ಕಣದಲ್ಲಿರುವ ಪ್ರಮುಖ ನಾಯಕರ ಪಟ್ಟಿ ಇಲ್ಲಿ ನೀಡಿದ್ದೇವೆ.
ಕೇಂದ್ರ ಸಚಿವರುಗಳು ಮತ್ತು ಬಿಜೆಪಿ, ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರುಗಳು ಈ ಐದನೇ ಹಂತದ ಚುನಾವಣೆಯ ಕಣದಲ್ಲಿದ್ದಾರೆ. ಸ್ಮೃತಿ ಇರಾನಿ, ರಾಹುಲ್ ಗಾಂಧಿ, ಚಿರಾಗ್ ಪಾಸ್ವಾನ್ ಮತ್ತು ಒಮರ್ ಅಬ್ದುಲ್ಲಾ ಕಣದಲ್ಲಿದ್ದಾರೆ.
ಬಿಹಾರ, ಜಾರ್ಖಂಡ್ (3), ಮಹಾರಾಷ್ಟ್ರ (13), ಒಡಿಶಾ (5), ಉತ್ತರ ಪ್ರದೇಶ (14), ಪಶ್ಚಿಮ ಬಂಗಾಳ (7) ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ (1) ಮತ್ತು ಲಡಾಖ್ (1) ಐದು ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಹಂತದಲ್ಲಿ ಮಹಾರಾಷ್ಟ್ರ ಮತ್ತು ಲಡಾಖ್‌ನಲ್ಲಿ ಚುನಾವಣೆ ಮುಗಿಯಲಿದೆ. ಕಾಶ್ಮೀರದಲ್ಲಿ ಒಂದು ಸ್ಥಾನದ ಚುನಾವಣೆ ಮಾತ್ರ ಬಾಕಿ ಉಳಿಯಲಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ | 370ನೇ ವಿಧಿ ರದ್ಧತಿ ಮೋದಿಯವರ ಸಾಧನೆಯಾಗಿದ್ದರೆ, ಕಾಶ್ಮೀರದಲ್ಲಿ ಬಿಜೆಪಿ ಯಾಕೆ ಕಣದಲ್ಲಿಲ್ಲ?
ಒಡಿಶಾ ವಿಧಾನಸಭೆಯ 35 ಸ್ಥಾನಗಳು ಮತ್ತು 21 ಲೋಕಸಭೆ ಸ್ಥಾನಗಳಿಗೆ ರಾಜ್ಯದಲ್ಲಿ ಏಕಕಾಲಕ್ಕೆ ಮತದಾನದ ಭಾಗವಾಗಿ ಮತದಾನ ನಡೆಯಲಿದೆ.
ಈ ಹಂತದಲ್ಲಿ ಉಳಿದ ಹಂತಗಳಿಗಿಂತ ಕೊಂಚ ಕಡಿಮೆ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆಯಾದರೂ ಈ ಚುನಾವಣೆ ಕಣದಲ್ಲಿರುವವರು ಹೆಚ್ಚಿನವರು ಕೇಂದ್ರ ಸಚಿವರುಗಳು ಮತ್ತು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ನಾಯಕರು ಆಗಿದ್ದಾರೆ. 2019ರಲ್ಲಿ ಈ 49 ಸ್ಥಾನಗಳಲ್ಲಿ ಬಿಜೆಪಿ 32 ಸ್ಥಾನಗಳನ್ನು ಗೆದ್ದಿತ್ತು.
ಪಶ್ಚಿಮ ಬಂಗಾಳದ ಏಳು ಸ್ಥಾನಗಳು ಮತ್ತು ಮಹಾರಾಷ್ಟ್ರದ 13 ಸ್ಥಾನಗಳಲ್ಲಿ ಭಾರೀ ಸ್ಪರ್ಧೆ ನಡೆಯುವ ನಿರೀಕ್ಷೆಯಿದೆ. 13 ಸ್ಥಾನಗಳಲ್ಲಿ ಹತ್ತು ಶಿವಸೇನೆಯ ಭದ್ರಕೋಟೆಯಲ್ಲಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಎರಡು ಬಣಗಳ ನಡುವೆ ಘರ್ಷಣೆ ನಡೆಯಲಿದೆ.
ಇದನ್ನು ಓದಿದ್ದೀರಾ? ಶಿವಸೇನೆ, ಎನ್‌ಸಿಪಿ ನಾಯಕರ ಮೇಲೆ ಇಡಿ ಕಣ್ಣು; ಉದ್ಧವ್ ಠಾಕ್ರೆ ಪಕ್ಷದಿಂದ ಎನ್‌ಡಿಎಗೆ ಜಂಪ್!
ಉತ್ತರ ಪ್ರದೇಶದಲ್ಲಿ ಇಂದು ಚುನಾವಣೆ ನಡೆಯಲಿರುವ 14 ಸ್ಥಾನಗಳಲ್ಲಿ ಸೋನಿಯಾ ಗಾಂಧಿ ಗೆದ್ದಿರುವ ರಾಯ್‌ಬರೇಲಿ ಹೊರತುಪಡಿಸಿ ಉಳಿದ 13 ಸ್ಥಾನಗಳನ್ನು ಬಿಜೆಪಿ ಈ ಹಿಂದಿನ ಚುನಾವಣೆಯಲ್ಲಿ ಗೆದ್ದಿದೆ.
ಕಣದಲ್ಲಿರುವ ಪ್ರಮುಖ ನಾಯಕರುಗಳ ಪಟ್ಟಿ
ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ (ಮುಂಬೈ ಉತ್ತರ), ಭಾರತಿ ಪವಾರ್ (ದಿಂಡೋರಿ), ಸ್ಮೃತಿ ಇರಾನಿ (ಅಮೇಥಿ), ರಾಜನಾಥ್ ಸಿಂಗ್ (ಲಕ್ನೋ) ಸೇರಿದ್ದಾರೆ. ಪ್ರಮುಖ ಮಿತ್ರಪಕ್ಷಗಳಲ್ಲಿ ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್ ಮುಖ್ಯಸ್ಥ ಚಿರಾಗ್ ಪಾಸ್ವಾನ್ (ಹಾಜಿಪುರ), ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ (ಕಲ್ಯಾಣ್) ಕಣದಲ್ಲಿದ್ದಾರೆ.
ವಿರೋಧ ಪಕ್ಷದಿಂದ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಭದ್ರಕೋಟೆ ರಾಯಬರೇಲಿಯಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕ ರಾಹುಲ್ ಗಾಂಧಿ ಕಣದಲ್ಲಿದ್ದಾರೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಬಿಜೆಪಿಯ ಮಾಜಿ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ ವಿರುದ್ಧ ಸರನ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಶಿವಸೇನೆ-ಯುಬಿಟಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಅರವಿಂದ್ ಸಾವಂತ್ ಮುಂಬೈ ದಕ್ಷಿಣದಲ್ಲಿ ಕಣದಲ್ಲಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆ : ಮಹಾ ವಿಕಾಸ್ ಅಘಾಡಿಯ ಐಕಾನ್ ಉದ್ಧವ್ ಠಾಕ್ರೆ!
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ, ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಅವರು ಪಿಡಿಪಿಯ ಫೈಯಾಜ್ ಎ ಮಿರ್, ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಜದ್ ಘನಿ ಲೋನ್ ಮತ್ತು ಅವಾಮಿ ಇತ್ತೆಹಾದ್ ಪಕ್ಷದ ಮುಖ್ಯಸ್ಥ, ಜೈಲಿನಲ್ಲಿರುವ ಇಂಜಿನಿಯರ್ ರಶೀದ್ ಅವರನ್ನು ಎದುರಿಸುತ್ತಾರೆ.
ಇನ್ನು ಕೈಸರ್‌ಗಂಜ್‌ನಲ್ಲಿ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ಪುತ್ರ ಕರಣ್ ಭೂಷಣ್ ಸಿಂಗ್ ಸ್ಪರ್ಧಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಸಾಧ್ವಿ ನಿರಂಜನ್ ಜ್ಯೋತಿ, ಲಲ್ಲು ಸಿಂಗ್, ಕೀರ್ತಿ ವರ್ಧನ್ ಸಿಂಗ್, ತನುಜ್ ಪೂಧನ್ ಸಿಂಗ್, ನರೇಶ್ ಉತ್ತಮ್ ಪಟೇಲ್, ಉಜ್ವಲ್ ನಿಕಮ್, ರಾಹುಲ್ ಶೆವಾಲೆ, ಅನಿಲ್ ದೇಸಾಯಿ, ವರ್ಷ ಗಾಯಕ್ವಾಡ್, ಸಂಜಯ್ ದಿನ ಪಾಟೀಲ್, ರವೀಂದ್ರ ವೈಕರ್, ಹೇಮಂತ್ ಗೋಡ್ಸೆ ಸೇರಿದಂತೆ ಪ್ರಮುಖ ನಾಯಕರು ಚುನಾವಣೆ ಕಣದಲ್ಲಿದ್ದಾರೆ.
#WATCH | Mumbai: After casting his vote, RBI Governor Shaktikanta Das says, “It’s a very proud moment for every Indian. It’s a moment of pride to participate in an election of 140 crore people. The process of voting today was very smooth and I would like to congratulate the… pic.twitter.com/JGUifocSvP
— ANI (@ANI) May 20, 2024
58 ಸ್ಥಾನಗಳನ್ನು ಒಳಗೊಂಡ ಮುಂದಿನ ಹಂತದ ಚುನಾವಣೆ ಮೇ 25ರಂದು ನಡೆಯಲಿದೆ. ಜೂನ್ 1 ರಂದು ಕೊನೆಯ ಹಂತದ ಚುನಾವಣೆ ಮುಗಿದ ನಂತರ ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.