ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ದ್ವೇಷ ಭಾಷಣದ ಬಗ್ಗೆ ಟೀಕೆ ವ್ಯಕ್ತವಾಗುತ್ತಿದ್ದಂತೆ ಈ ಬಗ್ಗೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ಪ್ರಧಾನಿ ಧರ್ಮ ರಾಜಕಾರಣ ಮಾಡುವ ಬಗ್ಗೆ ಎಂದಿಗೂ ಯೋಚಿಸಿಲ್ಲ” ಎಂದು ಹೇಳಿದ್ದಾರೆ.
ಮಂಗಳವಾರ ಗ್ರೇಟರ್ ನೋಯ್ಡಾದ ಉತ್ತರ ಪ್ರದೇಶದ ಬಿಸಾಹ್ದಾ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ ರಾಜನಾಥ್ ಸಿಂಗ್ ಅವರು, “ಪ್ರಧಾನಿ ಹಿಂದೂಗಳು, ಮುಸ್ಲಿಮರು ಮತ್ತು ಕ್ರೈಸ್ತರು ಎಂಬ ಆಧಾರದ ಮೇಲೆ ರಾಜಕೀಯ ಮಾಡುವ ಬಗ್ಗೆ ಯೋಚಿಸಿಲ್ಲ” ಎಂದರು.
ಬಿಜೆಪಿಯ ಗೌತಮ್ ಬುದ್ಧ ನಗರ ಅಭ್ಯರ್ಥಿ ಮಹೇಶ್ ಶರ್ಮಾ ಅವರನ್ನು ಬೆಂಬಲಿ ಪ್ರಚಾರ ಮಾಡಿದ ಅವರು, “ನಮ್ಮ ಪ್ರಧಾನಿ ಎಂದಿಗೂ ಕೂಡಾ ಧರ್ಮ ರಾಜಕಾರಣದ ಬಗ್ಗೆ ಯೋಚಿಸಿಲ್ಲ. ಸಮಾಜವನ್ನು ವಿಭಜಿಸುವ ರಾಜಕೀಯ ಮಾಡಲು ಅವರು ಎಂದಿಗೂ ಯೋಚಿಸಿಲ್ಲ. ಸಂಪತ್ತು ಸಮೀಕ್ಷೆ ನಡೆಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಮುಸ್ಲಿಮರು, ಕಾಂಗ್ರೆಸ್ ಬಗ್ಗೆ ದ್ವೇಷ ಭಾಷಣ: ಮೋದಿ ವಿರುದ್ಧ ಕಠಿಣ ಕ್ರಮಕ್ಕೆ ಸಿಪಿಐಎಂ ಆಗ್ರಹ
“ನಾನು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಗೌರವಿಸುತ್ತೇನೆ. ಆದರೆ ಡಿಸೆಂಬರ್ 9, 2006 ರಂದು ವಿಜ್ಞಾನ ಭವನದಲ್ಲಿ ನಡೆದ ರಾಷ್ಟ್ರೀಯ ರಕ್ಷಣಾ ಮಂಡಳಿಯ ಸಭೆಯಲ್ಲಿ ಸ್ವತಃ ಡಾ. ಮನಮೋಹನ್ ಸಿಂಗ್ ಅವರು ಈ ದೇಶದ ಆಸ್ತಿಯ ಮೇಲೆ ಯಾರಾದರೂ ಮೊದಲ ಹಕ್ಕನ್ನು ಹೊಂದಿದ್ದರೆ ಇದು ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ಅವರು ಮುಸ್ಲಿಮರಿಗೆ ಸೇರಿದ್ದು ಎಂದು ಹೇಳಿದ್ದರು” ಎಂದು ಆರೋಪಿಸಿದರು.
2006ರ ಡಿಸೆಂಬರ್‌ನಲ್ಲಿ ನಡೆದ ಸಭೆಯಲ್ಲಿ ಮನಮೋಹನ್ ಸಿಂಗ್ ಅವರು ಸಂಪನ್ಮೂಲಗಳನ್ನು ಸರಿಯಾಗಿ ಬಳಸುವ ಅಗತ್ಯದ ಬಗ್ಗೆ ಪ್ರಸ್ತಾಪಿಸಿದ್ದರು. ‘ಸಂಪನ್ಮೂಲಗಳ ಮೇಲಿನ ಮೊದಲ ಹಕ್ಕು’ ಪ್ರಸ್ತಾಪ ಮಾಡುವಾಗ, “ಎಸ್‌ಸಿಗಳು, ಎಸ್‌ಟಿಗಳು, ಒಬಿಸಿಗಳು, ಮಹಿಳೆಯರು ಮತ್ತು ಮಕ್ಕಳು, ಅಲ್ಪಸಂಖ್ಯಾತರ ಉನ್ನತಿಗಾಗಿ ಕಾರ್ಯಕ್ರಮಗಳನ್ನು ರೂಪಿಸುವ” ಬಗ್ಗೆ ತಿಳಿಸಿದ್ದರು.
ಇದನ್ನು ಓದಿದ್ದೀರಾ? ನನ್ನ ತಾಯಿಯ ಮಂಗಳಸೂತ್ರ ದೇಶಕ್ಕಾಗಿ ಬಲಿದಾನವಾಗಿದೆ: ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು
ಭಾನುವಾರ ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಾ ದ್ವೇಷ ಭಾಷಣ ಮಾಡಿದ್ದಾರೆ. “ಜನರು ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಮಂಗಳಸೂತ್ರ ಸೇರಿ ಬೆಲೆಬಾಳುವ ವಸ್ತುಗಳನ್ನು ಒಳನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಮರುಹಂಚಿಕೆ ಮಾಡಲು ಕಾಂಗ್ರೆಸ್ ಯೋಜಿಸುತ್ತಿದೆ” ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು.
ಮೋದಿ ಹೇಳಿಕೆಯು ಮಾದರಿ ನೀತಿ ಸಂಹಿತೆಯ (ಎಂಸಿಸಿ) ಉಲ್ಲಂಘನೆಯಾಗಿದ್ದು ಈ ನಿಟ್ಟಿನಲ್ಲಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಲಕ್ಷಾಂತರ ಮನವಿ ಸಲ್ಲಿಸಲಾಗಿದೆ. ಕಾಂಗ್ರೆಸ್ ಮಾತ್ರವಲ್ಲದೆ ಇತರೆ ವಿಪಕ್ಷಗಳು ಕೂಡಾ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಆದರೆ ಚುನಾವಣಾ ಆಯೋಗ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.