ನಾಥೂರಾಂ ಗೋಡ್ಸೆ ವೈಭವೀಕರಿಸುವ ಬಿಜೆಪಿ ನಾಯಕರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿ ಹಂತಕನ ಭಕ್ತರನ್ನು ತಮ್ಮ ಪಕ್ಷದಿಂದ ಹೊರಹಾಕಬೇಕು ಅಥವಾ ಗಾಂಧಿ ಪ್ರತಿಮೆಗಳಿಗೆ ನಮಿಸುವ ಸೋಗನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿದೆ.
ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಗೋಡ್ಸೆಯನ್ನು ಭಾರತದ ಸುಪುತ್ರ ಎಂದು ಕರೆದಿದ್ದರು. ಮತ್ತೊಬ್ಬ ಬಿಜೆಪಿ ನಾಯಕ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಕೆಲವು ದಿನಗಳ ಹಿಂದೆ ಗೋಡ್ಸೆ ದೇಶಭಕ್ತ ಎಂದು ಕರೆದಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
“ಬಿಜೆಪಿಯ ಹಿರಿಯ ನಾಯಕರು ಗೋಡ್ಸೆಯನ್ನು ವೈಭವೀಕರಿಸುತ್ತಿದ್ದರೆ ಪ್ರಧಾನಿ ಏನೂ ಮಾತನಾಡುವುದಿಲ್ಲ ಅವರ ವಿರುದ್ಧ ಯಾವ ಕ್ರಮವನ್ನೂ ತೆಗೆದುಕೊಳ್ಳುವುದಿಲ್ಲ. ಆದ ಕಾರಣ ನಾವು ಇಂದು ಪ್ರಧಾನಿ ನರೇಂದ್ರ ಮೋದಿಗೆ ಒಂದು ವಿಷಯ ಹೇಳಲು ಇಚ್ಚಿಸುತ್ತೇವೆ. ಒಂದೋ ನಿಮ್ಮ ಪಕ್ಷದಿಂದ ಗೋಡ್ಸೆ ಭಕ್ತರನ್ನು ಹೊರಹಾಕಿ ಅಥವಾ ಗಾಂಧೀಜಿಯ ಮುಂದೆ ತಲೆಬಾಗುವ ಸೋಗನ್ನು ಕೊನೆಗೊಳಿಸಿ. ಗಾಂಧೀಜಿಯ ದೇಶದಲ್ಲಿ ಗೋಡ್ಸೆಯ ಆರಾಧಕರಿಗೆ ಸ್ಥಾನವಿಲ್ಲ. ಮೋದಿಯವರೇ, ಈ ಬಗ್ಗೆ ನೀವೆ ನಿರ್ಧರಿಸಬೇಕು” ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಮುಂದಿನ 24 ಗಂಟೆಗಳಲ್ಲಿ ತೀವ್ರಗೊಳ್ಳಲಿರುವ ಬಿಪೊರ್‌ಜಾಯ್ | 3 ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ
ಪ್ರಧಾನಿ ಮೋದಿ ಅವರು ಇತ್ತೀಚೆಗೆ ಜಪಾನ್‌ಗೆ ಭೇಟಿ ನೀಡಿದಾಗ ಮಹಾತ್ಮ ಗಾಂಧಿಯವರ ಪ್ರತಿಮೆಯ ಮುಂದೆ ನಮಸ್ಕರಿಸುತ್ತಿರುವ ಭಾವಚಿತ್ರವನ್ನು ಕಾಂಗ್ರೆಸ್ ಹಂಚಿಕೊಂಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟ್ವೀಟ್ ಮಾಡಿ, “ಮೊದಲು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ. ಈಗ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಹಾತ್ಮ ಗಾಂಧಿ ಹಂತಕನನ್ನು ಹೊಗಳಿದ್ದಾರೆ. ತನ್ನ ಸಹೋದ್ಯೋಗಿಗಳು ಮಾತನಾಡಿರುವ ಬಗ್ಗೆ ಪ್ರಧಾನಿಯವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ” ಎಂದು ಟೀಕಿಸಿದರು.
ಗಿರಿರಾಜ್ ಸಿಂಗ್ ಅವರ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರೀನಾಥೆ, ರಾಹುಲ್ ಗಾಂಧಿಯವರ ವಿದೇಶದ ಭಾಷಣಗಳ ಬಗ್ಗೆ ಮಾತನಾಡುವ ಬಿಜೆಪಿಯವರು ಗೋಡ್ಸೆಯನ್ನು ವೈಭವೀಕರಿಸುವ ಗಿರಿರಾಜ್ ಸಿಂಗ್ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರ ಬಗ್ಗೆ ಏಕೆ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಎಂದು ಪ್ರಶ್ನಿಸಿದರು.
“ಮಹಾತ್ಮ ಗಾಂಧಿಯವರ ಹಂತಕ ಮೊಘಲ್ ದೊರೆಗಳಾದ ಬಾಬರ್ ಮತ್ತು ಔರಂಗಜೇಬ್ ಅವರಂತೆ ಆಕ್ರಮಣಕಾರರಲ್ಲ, ಏಕೆಂದರೆ ಅವರು ಭಾರತದಲ್ಲಿ ಜನಿಸಿದರು” ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಛತ್ತೀಸ್‌ಘಡದ ದಾಂತೇವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದರು.
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡುವಾಗ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದರು. ನಾನು ಗೋಡ್ಸೆಯನ್ನು ಅರ್ಥಮಾಡಿಕೊಂಡಂತೆ ಮತ್ತು ಓದಿದ ಮಟ್ಟಿಗೆ, ಆತ ಕೂಡ ದೇಶಭಕ್ತನಾಗಿದ್ದ. ಆದರೆ ಗಾಂಧೀಜಿಯ ಹತ್ಯೆಯನ್ನು ನಾವು ಒಪ್ಪುವುದಿಲ್ಲ” ಎಂದು ಹೇಳಿದ್ದರು.