ಪೊಕ್ಸೋ ಪ್ರಕರಣದಡಿ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಮಾಚ್ 14ರಂದು ಸದಾಶಿವನಗರ ಠಾಣೆಯಲ್ಲಿ ಅಪ್ತಾಪ್ರೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೋಕ್ಸೋ ಕಾಯ್ದೆ ಅಡಿ ಯಡಿಯೂರಪ್ಪ ವಿರುದ್ಧ ಬಾಲಕಿಯ ತಾಯಿ ದೂರು ದಾಖಲಿಸಿದ್ದರು. ರಾಜ್ಯ ಸರ್ಕಾರ ಪೊಕ್ಸೋ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿತ್ತು.
ಪ್ರಕರಣ ದಾಖಲಾದ ಬಳಿಕ ಏಪ್ರಿಲ್ 12ರಂದು ಪೊಲೀಸರ ವಿಚಾರಣೆಗೆ ಯಡಿಯೂರಪ್ಪ ಹಾಜರಾಗಿದ್ದರು. ಅಂದು ವಿಚಾರಣೆ ವೇಳೆ, ದೂರು ನೀಡಿದ್ದ ಮಹಿಳೆಗೆ ಇತರರ ವಿರುದ್ಧ ದೂರು ನೀಡುವುದು ಒಂದು ಹವ್ಯಾಸವಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದರು.
ಕೇಸ್ ರದ್ದು ಕೋರಿ ಬಿಎಸ್‌ವೈ ಹೈಕೋರ್ಟ್ ಮೊರೆ
ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪಗೆ ಸಿಐಡಿ ನೋಟಿಸ್ ನೀಡಿದ ಬೆನ್ನಲ್ಲೇ ಅವರು ಪ್ರಕರಣ ರದ್ದು ಕೋರಿ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. “ಯಾವುದೇ ಕಾನೂನುಬಾಹಿರ ಕೃತ್ಯ ಎಸಗಿಲ್ಲ. ಫಿರ್ಯಾದಿ ಮಹಿಳೆಗೆ ದೂರು ನೀಡುವುದೇ ಹವ್ಯಾಸವಾಗಿತ್ತು. ಎಫ್ಐಆರ್ ದಾಖಲಾದ ನಂತರ ವಿಚಾರಣೆಗೆ ಹಾಜರಾಗಿದ್ದೆ. ಏಪ್ರಿಲ್ 12ರಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದೆ. ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳದೇ ಧ್ವನಿ ಮಾದರಿ ಸಂಗ್ರಹಿಸಿದ್ದರು” ಎಂದು ಯಡಿಯೂರಪ್ಪ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಗೃಹ ಸಚಿವ ಡಾ ಜಿ ಪರಮೇಶ್ವರ್ ಈ ಬಗ್ಗೆ ಪ್ರತಿಕ್ರಿಯಿಸಿ, “ತನಿಖೆ ನಡೆಯುತ್ತಿದೆ. ಸಿಐಡಿಯಿಂದ ತನಿಖೆಯು ಪ್ರಗತಿಯಲ್ಲಿದೆ. ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದಾರೆ” ಎಂದು ಹೇಳಿದರು.
ಬಿಎಸ್‌ವೈ ವಿರುದ್ಧ ಫೋಕ್ಸೋ ಪ್ರಕರಣ ದಾಖಲಿಸಿದ್ದ ದೂರುದಾರೆ ಇತ್ತೀಚೆಗೆ ಸಾವನ್ನಪ್ಪಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮಾರಣಾಂತಿಕ ಖಾಯಿಲೆಯಿಂದ ಅವರು ಬಳಲುತ್ತಿದ್ದರು.
