ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುತ್ತಿದ್ದ ವೇಳೆ ಶಾಸಕಿಯೋರ್ವರ ಸೀಟಿನಲ್ಲಿ ವ್ಯಕ್ತಿಯೊಬ್ಬ ಸುಮಾರು 15 ನಿಮಿಷಗಳ ಕಾಲ ಸದನದಲ್ಲಿ ಕುಳಿತುಕೊಂಡಿದ್ದ ಘಟನೆ ವರದಿಯಾಗಿದೆ.
ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು, ಸಿಎಂ ಐತಿಹಾಸಿಕ ಬಜೆಟ್ ಆರಂಭಿಸಿ ಕೆಲ ನಿಮಿಷಗಳ ನಂತರ ಖಾಸಗಿ ವ್ಯಕ್ತಿಯೋರ್ವ ಬಂದು ದೇವದುರ್ಗ ಶಾಸಕಿ ಕರೆಮ್ಮ ಜಾಗದಲ್ಲಿ ಕೂತಿದ್ದರು. ಬಳಿಕ ಅವರನ್ನು ಪ್ರಶ್ನಿಸಿದಾಗ ಮೊಳಕಾಲ್ಮೂರು ಶಾಸಕ ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ.
ವ್ಯಕ್ತಿಯ ಬಗ್ಗೆ ಅನುಮಾನ ಬಂದು ಪಕ್ಕದಲ್ಲಿದ್ದ ಕೆಲ ಶಾಸಕರಲ್ಲಿ ಕೇಳಿದಾಗ ಅವರು ನಮಗೆ ಗೊತ್ತಿಲ್ಲ ಅಂದರು. ಈ ನಡುವೆ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಬಳಿಗೂ ತೆರಳಿ ಕೈ ಕುಲುಕಿದರು. ಕೂಡಲೇ ಈ ವ್ಯಕ್ತಿಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದೆ. ಅಷ್ಟೊತ್ತಿಗೆ ಆತ ನಾಪತ್ತೆಯಾಗಿದ್ದ. ಸುಮಾರು 70ರ ಆಸುಪಾಸಿನ ವ್ಯಕ್ತಿ, ಕೈಯಲ್ಲೊಂದು ಸಣ್ಣ ಬ್ಯಾಗ್ ಕೂಡ ಇತ್ತು. ಇದು ಭದ್ರತಾ ವೈಫಲ್ಯವೋ ಏನೋ ನನಗೆ ಗೊತ್ತಿಲ್ಲ. ಕೂಡಲೇ ಸ್ಪೀಕರ್ ಗಮನಕ್ಕೂ ತಂದಿದ್ದೇನೆ ಎಂದು ತಿಳಿಸಿದ್ದಾರೆ.

ಇದು ಮಾಧ್ಯಮಗಳಲ್ಲಿ ಸುದ್ದಿಯಾದ ಕೂಡಲೇ ಎಚ್ಚೆತ್ತುಕೊಂಡ ವಿಧಾನಸಭೆಯ ಪೊಲೀಸರು, ಸದನದ ಒಳಗಡೆ ಪ್ರವೇಶಿಸಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ. ವ್ಯಕ್ತಿಯನ್ನು ತಿಪ್ಪೆರುದ್ರಸ್ವಾಮಿ ಎಂದು ಗುರುತು ಹಿಡಿಯಲಾಗಿದೆ. ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯಾಕಾಗಿ ಒಳಪ್ರವೇಶಿಸಿದ್ದರು, ಅವರ ಹಿನ್ನೆಲೆ ಏನು ಎಂಬುದನ್ನು ತನಿಖೆ ನಡೆಸುತ್ತಿದ್ದೇವೆ. ವಿಧಾನಸೌಧದ ಮಾರ್ಷಲ್‌ಗಳು ಈ ಬಗ್ಗೆ ದೂರು ಕೊಟ್ಟಿದ್ದಾರೆ. ಎಲ್ಲವನ್ನೂ ತನಿಖೆ ನಡೆಸುತ್ತೇವೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್‌ಗೌಡ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.