ಆರ್‌ಜೆಡಿ ನಾಯಕ, ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರಿಗೆ ಎರಡು ಮತದಾರರ ಗುರುತಿನ ಚೀಟಿ ನೀಡಿದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಬಿಹಾರದ ಪಟನಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಯಾಗಿದೆ. ಚುನಾವಣಾ ಆಯೋಗವು ಯಾದವ್ ಅವರಿಗೆ ‘ಅಧಿಕೃತವಾಗಿ ನೀಡಿಲ್ಲ’ ಎಂದು ಹೇಳಲಾದ ಮತದಾರರ ಗುರುತಿನ ಚೀಟಿಯನ್ನು ‘ತನಿಖೆಗೆ ಹಸ್ತಾಂತರಿಸುವಂತೆ’ ಯಾದವ್ ಅವರಿಗೆ ಚುನಾವಣಾ ಆಯೋಗ ತಿಳಿಸಿದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ.
ಇನ್ನು ವಿರೋಧ ಪಕ್ಷದ ನಾಯಕ ಯಾದವ್ ಅವರ ಎಪಿಕ್(EPIC) ಕಾರ್ಡ್ ಸಂಖ್ಯೆಯನ್ನು ಬದಲಾಯಿಸಲಾಗಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ಎರಡು ಮತದಾರರ ಗುರುತಿನ ಚೀಟಿ ಸಂಬಂಧ ದಿಘಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ: 64 ಲಕ್ಷಕ್ಕೂ ಅಧಿಕ ಮತದಾರರ ಹೆಸರು ‘ಡಿಲೀಟ್’
“ನಾವು ದೂರನ್ನು ಜಿಲ್ಲಾ ಚುನಾವಣಾ ಕಚೇರಿಗೆ ರವಾನಿಸಿದ್ದೇವೆ. ಇಂತಹ ವಿಷಯಗಳ ಬಗ್ಗೆ ನಿರ್ಧರಿಸುವ ಅಧಿಕಾರವನ್ನ ಚುನಾವಣಾ ಕಚೇರಿ ಹೊಂದಿದೆ. ಚುನಾವಣಾ ಅಧಿಕಾರಿಗಳಿಂದ ನಿರ್ದೇಶನ ಬಂದರೆ ಎಫ್‌ಐಆರ್ ದಾಖಲಿಸಬಹುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಚುನಾವಣಾ ಆಯೋಗವು ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ನಡೆಸಿದೆ. ಬಳಿಕ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಚುನಾವಣಾ ಆಯೋಗ ತಮ್ಮ EPIC ಸಂಖ್ಯೆಯನ್ನು ‘ಬದಲಾಯಿಸಿದೆ’ ಎಂದು ಯಾದವ್ ಆರೋಪಿಸಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆ (SIR) ಭಾಗವಾಗಿ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣೆಯಾಗಿದೆ ಎಂದು ಯಾದವ್ ಹೇಳಿದ್ದರು. ಆದರೆ ಈ ಆರೋಪವನ್ನು ಚುನಾವಣಾ ಆಯೋಗ ತಿರಸ್ಕರಿಸಿದ ಬಳಿಕ ತಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ.
2020ರ ವಿಧಾನಸಭಾ ಚುನಾವಣೆಗೆ ಯಾದವ್ ಅವರು ತಮ್ಮ ಅಫಿಡವಿಟ್‌ನಲ್ಲಿ ಹೇಳಿದಂತೆ EPIC ಸಂಖ್ಯೆ ಒಂದೇ ಆಗಿರುತ್ತದೆ ಎಂದು ಹೇಳುವ ಮೂಲಕ ಚುನಾವಣಾ ಆಯೋಗ ಈ ಆರೋಪವನ್ನು ತಿರಸ್ಕರಿಸಿದೆ.
ಇನ್ನು ಒಬ್ಬ ವ್ಯಕ್ತಿಯ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಎರಡು ಬಾರಿ ಕಾಣಿಸಿಕೊಂಡ ಕಾರಣ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ಬೇಗುಸರಾಯ್ ಜಿಲ್ಲೆಯ ಬೂತ್ ಮಟ್ಟದ ಅಧಿಕಾರಿಯನ್ನು (BLO) ಅಮಾನತುಗೊಳಿಸಲಾಗಿದೆ. ಇನ್ನು ಈ ಘಟನೆ ಸಾಹೇಬ್‌ಪುರ್ ಕಮಲ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಈ ಕ್ಷೇತ್ರದಲ್ಲೇ ಎಸ್‌ಐಆರ್‌ನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವರದಿ ಮಾಡಿದ್ದ ಪತ್ರಕರ್ತರೊಬ್ಬರ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು.
