- ‘ಧರ್ಮಸ್ಥಳದಲ್ಲಿ ದೇವರ ಹೆಸರಲ್ಲಿ ಧಾರ್ಮಿಕ ಭಯೋತ್ಪಾದನೆ‘
- ಸಿದ್ದರಾಮಯ್ಯ ಸರ್ಕಾರದಿಂದ ನ್ಯಾಯದ ನಿರೀಕ್ಷೆ : ವಕೀಲೆ ಅಂಬಿಕಾ
“ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ‘ದೊಡ್ಡವರ’ ಒತ್ತಡಕ್ಕೆ ಮಣಿದು ಎಲ್ಲ ಸಾಕ್ಷ್ಯವನ್ನು ಪೊಲೀಸರು ನಾಶಪಡಿಸಿದ್ದಾರೆ” ಎಂದು ಸೌಜನ್ಯ ಪ್ರಕರಣದ ಹೋರಾಟದ ಮುಂಚೂಣಿಯಲ್ಲಿರುವ ಬೆಳ್ತಂಗಡಿಯ ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಆರೋಪಿಸಿದರು.
‘ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಸಂತೋಷ್ ರಾವ್ ಆರೋಪಿ ಅಲ್ಲ’ ಎಂದು ಸಿಬಿಐ ನ್ಯಾಯಾಲಯವೇ ಇತ್ತೀಚೆಗೆ ತೀರ್ಪು ನೀಡಿದ ಬಳಿಕ, ಇಂದು ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಆರೋಪಿ ಸಂತೋಷ್ ರಾವ್ ತಪ್ಪಿತಸ್ಥ ಅಲ್ಲ ಎಂಬುದನ್ನು ನಾವು 11 ವರ್ಷದ ಹಿಂದೆಯೇ ಹೇಳಿದ್ದೇವೆ. ಆದರೆ, ಪೊಲೀಸರು ಧರ್ಮಸ್ಥಳದವರ ಒತ್ತಡಕ್ಕೆ ಮಣಿದು, ಸಂತೋಷ್ ರಾವ್ ಅವರನ್ನು ತಪ್ಪಿತಸ್ಥನಾಗಿಸಿದ್ದಾರೆ. ನೈಜ ಅಪರಾಧಿಗಳನ್ನು ರಕ್ಷಿಸಲು ವ್ಯವಸ್ಥೆ ಮಾಡಿಕೊಂಡಿದ್ದರು. ನಿಜ ಆರೋಪಿಗಳ ವಿರುದ್ಧದ ಎಲ್ಲ ಸಾಕ್ಷ್ಯಗಳನ್ನು ಹಂತ ಹಂತವಾಗಿ ನಾಶಪಡಿಸಿದ್ದಾರೆ ಎಂದು ಮಹೇಶ್ ಶೆಟ್ಟಿ ನೇರವಾಗಿ ಆರೋಪಿಸಿದರು.

ಧರ್ಮಸ್ಥಳದಲ್ಲಿ ದೇವರ ಹೆಸರಲ್ಲಿ ಧಾರ್ಮಿಕ ಭಯೋತ್ಪಾದನೆ ನಡೆಯುತ್ತಿದೆ. ಈ ಧಾರ್ಮಿಕ ಭಯೋತ್ಪಾದನೆಯ ಭೀಕರತೆಯ ಅರಿವು ಎಲ್ಲ ಜನರಿಗೂ ಆಗಬೇಕು. ನಮ್ಮ ಹೋರಾಟ ಕ್ಷೇತ್ರದ ವಿರುದ್ಧವಲ್ಲ, ಅತ್ಯಾಚಾರಗೈದು ಕೊಲೆ ನಡೆಸಿದ ಅಪರಾಧಿಗಳು ಮತ್ತು ಅವರನ್ನು ರಕ್ಷಿಸಿದವರ ವಿರುದ್ಧ ಮಾತ್ರ ಎಂದು ಸ್ಪಷ್ಟಪಡಿಸಿದರು.
ಸೌಜನ್ಯ ಪ್ರತಿಮೆ ಸ್ಥಾಪನೆ
ನಮ್ಮ ಹೋರಾಟ ಉಸಿರು ಇರುವವರೆಗೆ ನಡೆಯಲಿದೆ. ಮುಂದಿನ ಹಂತವಾಗಿ ಸೌಜನ್ಯಾ ಅವರ ಸಮಾಧಿಯ ಬಳಿಯಲ್ಲೇ ಆಕೆಯ ದೊಡ್ಡ ಪ್ರತಿಮೆಯನ್ನು ಸ್ಥಾಪಿಸುತ್ತೇವೆ. ಆಕೆ ಒಂದು ಶಕ್ತಿಯಾಗಲಿದ್ದಾಳೆ. ಆ ಮಾರ್ಗವಾಗಿ ಬರುವ ಭಕ್ತರು ಮಾತ್ರವಲ್ಲ, ಅತ್ಯಾಚಾರ ನಡೆಸಿ ಕೊಲೆ ಮಾಡಿದವರು ಸಹ ಅದನ್ನು ನಿತ್ಯವೂ ನೋಡಿಯೇ ಮುಂದೆ ಸಾಗುವಂತಾಗಬೇಕು. ಆ ರೀತಿ ಅದನ್ನು ನಿರ್ಮಿಸುತ್ತೇವೆ ಎಂದು ತಿಮರೋಡಿ ತಿಳಿಸಿದರು.
ನನಗೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ, ವಿಶ್ವಾಸ ಹೊರಟುಹೋಗಿದೆ. ನಾನು ನಂಬಿರುವುದು ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪನನ್ನು. ಅವರು ನ್ಯಾಯ ಕೊಡಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿದ್ದ ಸೌಜನ್ಯಳ ತಾಯಿ ಕುಸುಮಾವತಿ ಮಾತನಾಡಿ, “ನಾವು ನಾಲ್ಕು ಜನ ಆರೋಪಿಗಳ ಹೆಸರನ್ನು ಕೊಟ್ಟಿದ್ದೆವು. ಅವರನ್ನು ಈವರೆಗೆ ತನಿಖೆ ನಡೆಸಿಲ್ಲ. ಸಂತೋಷ್ ರಾವ್ ಆರೋಪಿ ಅಲ್ಲ ಎಂದು 11 ವರ್ಷದ ಹಿಂದೆಯೇ ಹೇಳಿದ್ದೇವೆ. ಈಗ ಅದು ಸಾಬೀತಾಗಿದೆ. ಆದ್ದರಿಂದ ನೈಜ ಆರೋಪಿಗಳು ಯಾರು ಎಂಬುದು ಮರು ತನಿಖೆ ಆಗಬೇಕು. ನನ್ನ ಮಗಳಿಗೆ ನ್ಯಾಯ ಕೊಡಿಸಿ” ಎಂದು ಕಣ್ಣೀರಿಟ್ಟರು.

ಸೌಜನ್ಯಾ ಪ್ರಕರಣದಲ್ಲಿ ತನಿಖಾಧಿಕಾರಿಗಳು, ಪೊಲೀಸರು ಮತ್ತು ವೈದ್ಯಕೀಯ ವರದಿ ನೀಡಿರುವ ವೈದ್ಯರು ಲೋಪ ಎಸಗಿರುವುದು ಸ್ಪಷ್ಟವಾಗಿದೆ. ಇವರ ವಿರುದ್ಧ ಹೈಕೋರ್ಟ್ ಮೊರೆ ಹೋಗುತ್ತೇವೆ. ಆರೋಪಿ ಅಲ್ಲ ಎಂದು ಸಾಬೀತಾದ ಸಂತೋಷ್ ರಾವ್ ಅವರ ಮಾನವ ಹಕ್ಕು ಉಲ್ಲಂಘನೆ ಆಗಿದೆ. ಇದಕ್ಕಾಗಿಯೂ ನಾವೇ ಹೋರಾಟ ನಡೆಸಲಿದ್ದೇವೆ ಎಂದು ವಕೀಲೆ ಅಂಬಿಕಾ ಪ್ರಭು ತಿಳಿಸಿದ್ದಾರೆ.
ಈ ಹಿಂದೆ ಇದ್ದಂತಹಾ ಸಿದ್ದರಾಮಯ್ಯ ಸರ್ಕಾರವೇ ಸೌಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಈಗ ಸಿದ್ದರಾಮಯ್ಯ ಸರ್ಕಾರವೇ ಮತ್ತೆ ಬಂದಿದೆ. ಹಾಗಾಗಿ, ಸೌಜನ್ಯ ಸಾವಿಗೆ ನ್ಯಾಯ ಸಿಗುವ ಕೊನೆಯ ನಿರೀಕ್ಷೆ ಇದೆ ಎಂದು ಅಂಬಿಕಾ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸ್ವಾಮೀಜಿಗಳೇ ‘ಸೌಜನ್ಯ’ ಸಾವಿಗೆ ನ್ಯಾಯ ನೀಡಬೇಕು. ಹಿಂದೂ ಹುಡುಗಿಯ ಸಾವು ಆಗಿದೆ. ಲವ್ ಜಿಹಾದ್ ವಿರುದ್ಧ ಹೋರಾಡುವವರು ಈಗ ಎಲ್ಲಿದ್ದಾರೆ. ಸೌಜನ್ಯಳಿಗೂ ನ್ಯಾಯ ಕೊಡಿಸಿ ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸೌಜನ್ಯಾಳ ಮಾವ ವಿಠ್ಠಲ ಗೌಡ ಉಪಸ್ಥಿತರಿದ್ದರು.
ವಿಡಿಯೋ ಕೃಪೆ : ಸನ್ಮಾರ್ಗ ನ್ಯೂಸ್