ರೈತ ಸಂಘಟನೆಗಳು ಕರೆಕೊಟ್ಟಿದ್ದ ‘ದೆಹಲಿ ಚಲೋ’ ಪ್ರತಿಭಟನೆಗೆ ಹೊರಟಿದ್ದ ಕರ್ನಾಟಕದ ರೈತರನ್ನು ಭೋಪಾನ್‌ನಲ್ಲಿ ಬಂಧಿಸಿದ್ದ ಪೊಲೀಸರು, ಇದೀಗ, ಅವರನ್ನು ಮಧ್ಯಪ್ರದೇಶ ಗಡಿಯಲ್ಲಿ ಬಿಟ್ಟು ಹೋಗಿದ್ದಾರೆ. ಗುರುವಾರ ಮುಂಜಾನೆ ಮಧ್ಯಪ್ರದೇಶ-ಉತ್ತರ ಪ್ರದೇಶ ಗಡಿಯಲ್ಲಿ ಯಾವುದೇ ಮಾಹಿತಿ ನೀಡದೆ ರೈತರನ್ನು ರೈಲು ಹತ್ತಿಸಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕದಲ್ಲಿ ದೆಹಲಿ ಹೊರಟಿದ್ದ ರೈತರನ್ನು ಸೋಮವಾರ ಮುಂಜಾನೆ ಭೋಪಾಲ್ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರದೇಶ ಸರ್ಕಾರಕ್ಕೆ ಪತ್ರ ಬರೆದು, ರೈತರನ್ನು ಕೂಡಲೇ ಬಿಡುಗಡೆ ಮಾಡಬೇಕು. ದೆಹಲಿ ಪ್ರತಿಭಟನೆಗೆ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದರು.
ಈ ಬೆನ್ನಲ್ಲೇ, ನಾಲ್ಕು ದಿನಗಳ ಕಾಲ ತಮ್ಮ ವಶದಟ್ಟಿಕೊಂಡಿದ್ದ ರೈತರನ್ನು ಭೋಪಾಲ್‌ನಲ್ಲಿ ರೈಲು ಹತ್ತಿಸಿಕೊಂಡು ಕರೆದೊಯ್ದ ಪೊಲೀಸರು ಮಧ್ಯಪ್ರದೇಶ ಗಡಿಯಲ್ಲಿ ಇಳಿದು ಹೋಗಿದ್ದಾರೆ. ತಮಗೆ ಯಾವುದೇ ಮಾಹಿತಿ ನೀಡದ ಕಾರಣ, ರೈತರಿಗೆ ಮುಂದೇನು ಮಾಡುವುದು ಎಂಬುದು ತಿಳಿಯದೆ, ಆತಂಕ ಎದುರಾಗಿದೆ. ಸದ್ಯ, ಆ ಎಲ್ಲ ರೈತರು ಅಯೋಧ್ಯೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
“ಭೋಪಾಲ್ ಪೊಲೀಸರು ನಮ್ಮನ್ನು ಮಧ್ಯಪ್ರದೇಶ ಗಡಿಯಲ್ಲಿದ್ದ ಕೊನೆಯ ರೈಲು ನಿಲ್ದಾಣದಲ್ಲಿ ಇಳಿಸಿದರು. ಆದರೆ, ಅವರು ನಮ್ಮನ್ನು ಕರೆದೊಯ್ಯುವಾಗ ಮತ್ತು ಇಳಿಸುವಾಗ ಯಾವುದೇ ಮಾಹಿತಿ ನೀಡಲಿಲ್ಲ. ಅಲ್ಲದೆ, ಪ್ರಯಾಣದ ವೇಳೆ ಸಂಜೆ ಮತ್ತು ರಾತ್ರಿ ಯಾವುದೇ ಆಹಾರವನ್ನೂ ನೀಡಲಿಲ್ಲ. ಅತ್ಯಂತ ತುಚ್ಛವಾಗಿ ನಮ್ಮನ್ನು ನಡೆಸಿಕೊಂಡರು” ಎಂದು ಬಂಧಿತ ರೈತರಲ್ಲಿ ಒಬ್ಬರಾದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು ಮತ್ತು ಚಾಮರಾಜನಗರ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ.ನಾಗರಾಜ್ ಆರೋಪಿಸಿದ್ದಾರೆ.
“ಅವರು ನಮ್ಮನ್ನು ವಾರಣಾಸಿ ರೈಲಿಗೆ ಹತ್ತಿಸಿ ಕರೆದೊಯ್ದರು. ಗಡಿಯಲ್ಲಿ ಅವರೆಲ್ಲರೂ ಇಳಿದು, ನಮ್ಮನ್ನು ರೈಲಿನಲ್ಲಿಯೇ ಬಿಟ್ಟುಹೋದರು. ಆದರೂ, ನಾವು ಅಯೋಧ್ಯೆಯಲ್ಲಿ ಇಳಿದೆವು” ಎಂದು ನಾಗರಾಜ್ ವಿವರಿಸಿದ್ದಾರೆ.
ಉತ್ತರ ಪ್ರದೇಶ ಪೊಲೀಸರು ರೈತರನ್ನು ತಮ್ಮೊಂದಿಗೆ ಬರುವಂತೆ ಕೇಳಿದ್ದಾರೆ. ಆದರೆ, ಪೊಲೀಸರೊಂದಿಗೆ ಹೋಗಲು ರೈತರು ನಿರಾಕರಿಸಿದ್ದು, ಖಾಸಗಿ ಹೋಟೆಲ್‌ನಲ್ಲಿ ಕೊಠಡಿಗಳನ್ನು ಬುಕ್ ಮಾಡಿಕೊಂಡಿದ್ದಾರೆ.
“ನಮ್ಮ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಇನ್ನೂ ದೆಹಲಿಯಲ್ಲಿದ್ದಾರೆ. ಕೇಂದ್ರ ಸರ್ಕಾರ ಗುರುವಾರ ಚಂಡೀಗಢದಲ್ಲಿ ರೈತರೊಂದಿಗೆ ಸಭೆ ನಡೆಸುತ್ತಿದೆ. ಸಭೆಯ ಫಲಿತಾಂಶದ ಆಧಾರದ ಮೇಲೆ ನಾವು ಕರ್ನಾಟಕಕ್ಕೆ ಹಿಂತಿರುಗಬೇಕೆ ಅಥವಾ ದೆಹಲಿಗೆ ಹೋಗಬೇಕೆ ಎಂಬ ಬಗ್ಗೆ ನಿರ್ಧರಿಸುತ್ತೇವೆ. ಅಲ್ಲಿಯವರೆಗೆ ಅಯೋಧ್ಯೆಯಲ್ಲಿಯೇ ಇರುತ್ತೇವೆ” ಎಂದು ನಾಗರಾಜ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ರೈತ ಹೋರಾಟ | ಎಂಎಸ್‌ಪಿಗೆ ಕಾನೂನು ಖಾತರಿ ನೀಡದೆ ಮೋದಿ ಸರ್ಕಾರ ಯಾಕೆ ಓಡಿಹೋಗುತ್ತಿದೆ?
“ನಾಲ್ಕು ದಿನಗಳ ಬಂಧನದ ನಂತರವೂ ಕರ್ನಾಟಕದ ಯಾವುದೇ ಚುನಾಯಿತ ಸದಸ್ಯರು ಅಥವಾ ಅಧಿಕಾರಿಗಳು ಬುಧವಾರ ರಾತ್ರಿಯವರೆಗೂ ತಮ್ಮನ್ನು ಸಂಪರ್ಕಿಸಿಲ್ಲ. ಗುರುವಾರ, ಅಧಿಕಾರಿಗಳು ನಮಗೆ ಕರೆ ಮಾಡಿ, ವಿಚಾರಿಸಿದ್ದಾರೆ” ಎಂದು ಅಯೋಧ್ಯೆಯಲ್ಲಿರುವ ರೈತರು ತಿಳಿಸಿದ್ದಾರೆ.
ಉತ್ತರ ಪ್ರದೇಶದಿಂದ ರೈತರನ್ನು ವಾಪಸ್ ಕರೆತರಲು ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಫೆಬ್ರವರಿ 12ರ ಸೋಮವಾರ ದೆಹಲಿಗೆ ತೆರಳುತ್ತಿದ್ದ 30 ಮಹಿಳೆಯರು ಸೇರಿದಂತೆ ಸುಮಾರು 100 ರೈತರು ಮಧ್ಯಪ್ರದೇಶ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬುಧವಾರ ರಾತ್ರಿ ಅವರನ್ನು ರೈಲಿನಲ್ಲಿ ಕರೆದೊಯ್ದು, ಮಧ್ಯಪ್ರದೇಶ ಗಡಿಯಲ್ಲಿ ಬಿಟ್ಟುಬಂದಿದ್ದಾರೆ.