ಲಕ್ಷದ್ವೀಪ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ಮಹಿಳಾ ಮತದಾರರು ಇದ್ದರೂ ಕೂಡ ಮೂಲ ಸೌಕರ್ಯಗಳಿಲ್ಲದೆ ನಲುಗುತ್ತಿದ್ದಾರೆ. ಸರಿಯಾದ ಸ್ಯಾನಿಟರಿ ನ್ಯಾಪ್ಕಿನ್ ವಿಲೇವಾರಿ ಸೌಲಭ್ಯಗಳ ಕೊರತೆ ಮತ್ತು ಆಸ್ಪತ್ರೆಗಳಲ್ಲಿ ಸ್ತ್ರೀರೋಗತಜ್ಞರಂತಹ ಮೂಲಸೌಲಭ್ಯಗಳ ಕೊರತೆಯ ಕುರಿತು ಚುನಾವಣಾ ಪ್ರಚಾರದ ರಾಜಕೀಯ ಪಕ್ಷಗಳ ಜತೆಗೆ ಚರ್ಚಿಸಲು ಅವಕಾಶ ಸಿಕ್ಕಿಲ್ಲ.
ಅಗತ್ತಿ ದ್ವೀಪದ ಮಹಿಳೆಯರ ಗುಂಪು ಈ ಬಗ್ಗೆ ಪಿಟಿಐಗೆ ತಿಳಿಸಿದ್ದು, “ರಾಜಕೀಯ ಪಕ್ಷಗಳು ನಮ್ಮ ಬೇಡಿಕೆಗಳ ಕುರಿತು ನಿರ್ಲಕ್ಷ್ಯ ವಹಿಸಿವೆ” ಎಂದು ಆರೋಪಿಸಿದರು.
“ಬಳಸಿದ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಸಂಗ್ರಹಿಸಲು ಮತ್ತು ವಿಲೇವಾರಿ ಮಾಡಲು ದ್ವೀಪಗಳಲ್ಲಿ ನಮಗೆ ಯಾವುದೇ ವ್ಯವಸ್ಥೆ ಇಲ್ಲ. ಅನೇಕರು ಅವುಗಳನ್ನು ತಮ್ಮ ಆವರಣದಲ್ಲಿ ಹೂಳುತ್ತಾರೆ ಅಥವಾ ಸುಡುತ್ತಾರೆ” ಎಂದು ಮಹಿಳಾ ಸ್ವಸಹಾಯ ಗುಂಪಿನ ದ್ವೀಪವಾಸಿಗಳ ಅಂಗವಿಕಲರ ವಿಭಾಗದ ನಾಯಕಿ ಸಲ್ಮಠ್ ವಿಷಾದಿಸಿದರು.
“ನಾವು ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಬೇಕಾದರೂ, ನಾವು ಕವರತ್ತಿಗೆ ಹೋಗಬೇಕು. ಕುಖ್ಯಾತ ಸಂಪರ್ಕ ಸಮಸ್ಯೆಗಳಿಂದಾಗಿ, ನಮಗೆ ಜಲ ಸಾರಿಗೆ ಟಿಕೆಟ್ ಸಿಗುವುದಿಲ್ಲ” ಎಂದು ಅಗತ್ತಿ ದ್ವೀಪದ ನಿವಾಸಿ ಸಲ್ಮಠ್ ಹೇಳಿದರು.
“ದ್ವೀಪಗಳ ಹೆಣ್ಣು ಮಕ್ಕಳೂ ಕೂಡ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬಯಸಿದರೆ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ದ್ವೀಪದಲ್ಲಿ ಕೇವಲ ಒಂದು ಪದವಿ ಕೋರ್ಸ್ ಮಾತ್ರ ಇದೆ. ವಿದ್ಯಾರ್ಥಿನಿಯರು ಬೇರೆ ಯಾವುದೇ ವಿಷಯವನ್ನು ಮುಂದುವರಿಸಲು ಬಯಸಿದರೆ, ಅವರು ಕೇರಳವನ್ನು ಅವಲಂಬಿಸಬೇಕಾಗುತ್ತದೆ” ಎಂದು ಅವಲತ್ತುಕೊಂಡಿದ್ದಾರೆ.
ಪ್ಲಾಸ್ಟಿಕ್ ಸುಡುವುದು ಮತ್ತು ಎಸೆಯುವುದು ಹೆಚ್ಚು ಪರಿಸರ ಸೂಕ್ಷ್ಮ ದ್ವೀಪಗಳಲ್ಲಿ ಗಂಭೀರ ಪರಿಸರ ಸಮಸ್ಯೆಗಳನ್ನು ಉಂಟುಮಾಡಬಹುದು. ಒಟ್ಟು ಮತದಾರರಲ್ಲಿ ಶೇಕಡಾ 50ರಷ್ಟಿರುವ ಈ ಮಹಿಳೆಯರು, ರಾಜಕೀಯ ಪಕ್ಷಗಳ ಪುರುಷ ನಿಯಂತ್ರಿತ ಯಂತ್ರವು ಮತಗಳನ್ನು ಗಳಿಸಲು ದ್ವೀಪಗಳ ಮೇಲೆ ಪರಿಣಾಮ ಬೀರುವ ಇತರ ಸಮಸ್ಯೆಗಳನ್ನು ಬಿಂಬಿಸುತ್ತಿರುವ ಮಧ್ಯೆ ಈ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
“ರಾಜಕೀಯದಲ್ಲಿ ಯಾರೂ ಕೂಡಾ ಮಹಿಳೆಯರ ಸಮಸ್ಯೆಗಳ ಕುರಿತು ಮಾತನಾಡುವುದಿಲ್ಲ. ದ್ವೀಪವನ್ನು ತೊರೆದ ಸ್ತ್ರೀರೋಗತಜ್ಞರಿಗೆ ಬದಲಿ ಅಧಿಕಾರಿಯನ್ನು ಪಡೆಯಲು ನಾವು ಹಲವಾರು ಅರ್ಜಿಗಳನ್ನು ಕಳುಹಿಸಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ನಾವು ಈ ವಿಷಯವನ್ನು ಪ್ರಸ್ತಾಪಿಸಿದಾಗ ಮಾತ್ರ ಚರ್ಚಿಸುತ್ತಾರೆ. ಬಳಿಕ ಕ್ರಮ ವಹಿಸುವುದಿಲ್ಲ. ಹಾಗಾಗಿ ಈವರೆಗೆ ಯಾವುದೇ ಪರಿಹಾರ ಕಂಡುಬಂದಿಲ್ಲ” ಎಂದು ದ್ವೀಪದ ಮತ್ತೊಬ್ಬ ಮತದಾರು ಮತ್ತು ದ್ವೀಪವಾಸಿಯ ಸಮುದಾಯ ಸಂಪನ್ಮೂಲ ವ್ಯಕ್ತಿ ಶಹಾರುಮ್ಮ ಹೇಳಿದ್ದಾರೆ.
“ಲಕ್ಷದ್ವೀಪ ದ್ವೀಪಗಳಲ್ಲಿ ಸಾಮಾನ್ಯವಾಗಿ ಮತ್ತು ವಿಶೇಷವಾಗಿ ಮಹಿಳೆಯರಿಗೆ ವೈದ್ಯಕೀಯ ಬೆಂಬಲ ವ್ಯವಸ್ಥೆಯು ತುಂಬಾ ಕಳಪೆಯಾಗಿದೆ. ಅನೇಕ ಗರ್ಭಿಣಿಯರಿಗೆ ಈಗ ಯಾವುದೇ ವೈದ್ಯಕೀಯ ಸೌಲಭ್ಯವಿಲ್ಲ” ಎಂದು ಹೇಳಿದರು.
“ನಾವು ಕವರತ್ತಿ ಅಥವಾ ಇನ್ನಾವುದೇ ದ್ವೀಪದಲ್ಲಿ ಅಧ್ಯಯನ ಮಾಡುತ್ತಿದ್ದರೂ, ಹೆಚ್ಚಿನ ಸಮಯದಲ್ಲಿ ಈ ದ್ವೀಪಗಳಿಗೆ ಪ್ರಯಾಣಿಸಲು ನಮಗೆ ಟಿಕೆಟ್ ಸಿಗದಿರಬಹುದು. ಟಿಕೆಟ್ ಹಂಚಿಕೆಯಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗೆ ಮಾತ್ರ ಆಧ್ಯತೆ ನೀಡಲಾಗುತ್ತದೆ” ಎಂದು ಅಗತ್ತಿಯ ವಿದ್ಯಾರ್ಥಿನಿಯೊಬ್ಬರು ಹೇಳಿಕೊಂಡಿದ್ದಾರೆ.
ಲಕ್ಷದ್ವೀಪದ ಮುಖ್ಯ ಚುನಾವಣಾ ಅಧಿಕಾರಿ ಹಂಚಿಕೊಂಡ ಮಾಹಿತಿಯ ಪ್ರಕಾರ, “ಈ ಕ್ಷೇತ್ರವು ಲಕ್ಷದ್ವೀಪ ದ್ವೀಪಸಮೂಹದ 10 ಜನವಸತಿ ದ್ವೀಪಗಳಲ್ಲಿ ವ್ಯಾಪಿಸಿದೆ. 57,574 ಮಂದಿ ಮತದಾರರನ್ನು ಹೊಂದಿದೆ. ಈ ಪೈಕಿ 28,442 ಮಹಿಳಾ ಮತದಾರರಿದ್ದಾರೆ” ಎಂದು ತಿಳಿಸಿದ್ದಾರೆ.
ಲಕ್ಷದ್ವೀಪದ ಯಾವುದೇ ರಾಜಕೀಯ ಪಕ್ಷದಲ್ಲಿ ಯಾವುದೇ ಮಹಿಳೆ ನಾಯಕತ್ವದ ಸ್ಥಾನ ಅಲಂಕರಿಸಿಲ್ಲ. ಕೆಲವು ವರ್ಷಗಳ ಹಿಂದೆ ಪಂಚಾಯತ್ ಆಡಳಿತ ವ್ಯವಸ್ಥೆಯನ್ನು ವಿಸರ್ಜಿಸಿದಾಗಿನಿಂದ ಸ್ಥಳೀಯ ಆಡಳಿತ ವ್ಯವಸ್ಥೆಯ ಕೊರತೆಯೂ ಇದೆ. ಮಹಿಳಾ ಮತದಾರರು ತಮ್ಮ ಬೇಡಿಕೆಗಳನ್ನು ವಿಶಾಲ ರಾಜಕೀಯ ಸಂವಾದದಲ್ಲಿ ಸೇರಿಸಬೇಕೆಂದು ಬಯಸುತ್ತಾರೆ. ಅದಕ್ಕೆ ಅನುಗುಣವಾಗಿ ಪರಿಹಾರಗಳನ್ನು ರೂಪಿಸಬೇಕು.
ಮುಸ್ಲಿಂ ಪ್ರಾಬಲ್ಯದ ಲಕ್ಷದ್ವೀಪದಲ್ಲಿ ಏಪ್ರಿಲ್ 19ರ ಲೋಕಸಭಾ ಚುನಾವಣೆಯ ಪ್ರಚಾರವು ಉತ್ತುಂಗಕ್ಕೇರುತ್ತಿದ್ದಂತೆ, ಪಕ್ಷಗಳು ವಿವಾದಾತ್ಮಕ ‘ಪಂಡರಂ’ ಭೂ ಮಾಲೀಕತ್ವ ವಿವಾದ, ಸುಧಾರಿತ ಅಂತರ-ದ್ವೀಪ ಸಂಪರ್ಕ ಮತ್ತು ಮುಖ್ಯ ಭೂಭಾಗದೊಂದಿಗಿನ ಸಂಪರ್ಕಗಳ ತೀವ್ರ ಅಗತ್ಯತೆ, ಪ್ರಸ್ತುತ ಆಡಳಿತವು ಗ್ರಹಿಸಿದ ‘ಜನ ವಿರೋಧಿ’ ನಿಯಮಗಳನ್ನು ಪರಿಚಯಿಸುವುದು ಸೇರಿದಂತೆ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸುವಲ್ಲಿ ರಾಜಕೀಯ ಪಕ್ಷಗಳು ನಿರತವಾಗಿವೆ.
ಸ್ಥಳೀಯ ಸಂಸದ ಮತ್ತು ಎನ್‌ಸಿಪಿ(ಶರದ್ ಪವಾರ್) ನಾಯಕ ಮೊಹಮ್ಮದ್ ಫೈಜಲ್ ಪಿಪಿ ಮತ್ತು ಕಾಂಗ್ರೆಸ್‌ನ ಹಮ್ದುಲ್ಲಾ ಸಯೀದ್ ಚುನಾವಣೆಯಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳಾಗಿದ್ದಾರೆ. ಎನ್‌ಸಿಪಿಯ ಟಿ ಪಿ ಯೂಸಫ್ (ಅಜಿತ್ ಪವಾರ್) ಕೂಡ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ದ್ವೀಪಗಳ ಮಹಿಳೆಯರು ಪವಿತ್ರ ರಂಜಾನ್ ತಿಂಗಳಲ್ಲಿ ನಮಾಜ್ ನಂತರ ಬೆಳಿಗ್ಗೆ 4 ಗಂಟೆಯ ಬಳಿಕ ತಮ್ಮ ‘ಭೋಜನ’ಕ್ಕಾಗಿ ಆಹಾರವನ್ನು ಸಿದ್ಧಪಡಿಸಿ, ರಾತ್ರಿ 11ರ ಸುಮಾರಿಗೆ ಕಡಲತೀರದಲ್ಲಿ ಒಟ್ಟುಗೂಡುತ್ತಾರೆ.
ಉಪವಾಸದ ನಂತರ ರಾತ್ರಿ ಊಟಕ್ಕೆ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಮಧ್ಯಾಹ್ನದವರೆಗೆ ಅಡುಗೆಮನೆಯಲ್ಲಿ ಸಮಯ ಕಳೆದ ಅವರು ತಾಜಾ ಗಾಳಿಯನ್ನು ಆನಂದಿಸುತ್ತಾ ಮುಂಜಾನೆಯವರೆಗೆ ಕಡಲತೀರದಲ್ಲಿ ಮುಕ್ತವಾಗಿ ಹರಟೆ ಹೊಡೆಯುತ್ತಾರೆ.
ಅಲ್ಲಿ ನೆರೆದಿದ್ದ ಮಹಿಳೆಯರು ತಡರಾತ್ರಿ ದ್ವೀಪವಾಸಿಗಳ ಸಭೆಯನ್ನು ಕರೆದರು. ಅದರಲ್ಲಿ ಅವರು ತಮ್ಮ ದೈನಂದಿನ ವ್ಯವಹಾರಗಳನ್ನು ತಮ್ಮ ಮೂಲ ಉಪಭಾಷೆ ‘ಜೆಸ್ಸೆರಿ’ಯಲ್ಲಿ ಚರ್ಚಿಸಿದರು.
ಈ ಮಹಿಳಾ ಸ್ವಸಹಾಯ ಗುಂಪು ಅವರ ಏಕೈಕ ಸಬಲೀಕರಣದ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಕೌಟುಂಬಿಕತೆಯ ಮಿತಿಗಳಿಂದ ಮುಕ್ತರಾಗಲು ಮತ್ತು ಉದ್ಯಮಿಗಳಾಗಲು ಅನುವು ಮಾಡಿಕೊಡುತ್ತದೆ. ಆ ಮೂಲಕ ಆರ್ಥಿಕ ಸ್ಥಿರತೆಯನ್ನು ಸಾಧಿಸುತ್ತದೆ. ಹಾಗಾಗಿ ಎಲ್ಲ ವಯಸ್ಸಿನ ಮಹಿಳೆಯರು ಈ ಸಭೆಗಳಲ್ಲಿ ಭಾಗವಹಿಸುತ್ತಾರೆ ಎಂದು ಈ ಟಿವಿ ಭಾರತ್(Etv Bharath) ವರದಿ ಮಾಡಿದೆ.
ಕನ್ನಡಕ್ಕೆ : ರೇಖಾ ಹಾಸನ
