- ‘ಸರ್ಕಾರ ಬಿದ್ದುಹೋಗುವಾಗ ಅಮೆರಿಕದಲ್ಲಿ ಕೂತಿದ್ದರು’
- ‘ಬಿಜೆಪಿಗಿಂತ ಜಾಸ್ತಿ ಹತಾಶರಾಗಿರುವುದು ಕುಮಾರಸ್ವಾಮಿ’
ರಾಜಕೀಯದಲ್ಲಿ ಯಾರಾದರೂ ಖಳನಾಯಕ ಇದ್ದರೆ ಅದು ಎಚ್ ಡಿ ಕುಮಾರಸ್ವಾಮಿ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡಿ ಮುಖ್ಯಮಂತ್ರಿಗಳನ್ನು ಮಹಾಭಾರತದ ಎಲ್ಲ ಖಳನಾಯಕರಿಗೆ ಹೋಲಿಸಿರುವ ಬಗ್ಗೆ ಮೈಸೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ, “ಕ್ರಿಕೆಟ್ ನೋಡಲು ಹೋಗಿದ್ದರು ಎನ್ನುವ ಅವರು ಸರ್ಕಾರ ಬಿದ್ದುಹೋಗುವಾಗ ಅಮೆರಿಕದಲ್ಲಿ ಒಂದು ವಾರ ಕೂತಿದ್ದರು. ಒಂದು ವರ್ಷ 2 ತಿಂಗಳು ತಾಜ್ ವೆಸ್ಟ್ ಎಂಡ್ ನಲ್ಲಿ ಕಾಲಕಳೆಯುತ್ತಿದ್ದರು. ಇವರು ನಮಗೆ ಹೇಳಿಕೊಡಬೇಕೆ” ಎಂದರು.
ತಪ್ಪುದಾರಿಗೆ ಎಳೆಯುತ್ತಿದ್ದಾರೆ
ಕುಮಾರಸ್ವಾಮಿ ಅವರ ಸರ್ಕಾರವನ್ನು ಸಿದ್ದರಾಮಯ್ಯ ಅವರೇ ಬೀಳಿಸಿದ್ದು, ಅದನ್ನು ಅವರು ಒಪ್ಪಿಕೊಳ್ಳಲಿ ಎಂದಿರುವ ಬಗ್ಗೆ ಮಾತನಾಡಿ, “ಅದನ್ನು ಅವರು ವಿಧಾನಮಂಡಲದ ವಿಶ್ವಾಸ ಮತಯಾಚನೆಯಾದ ಸಂದರ್ಭದಲ್ಲಿ ಉತ್ತರ ನೀಡಿದಾಗ ಈ ಸರ್ಕಾರವನ್ನು ಬೀಳಿಸಿದ್ದು ಬಿಜೆಪಿಯವರು ಎಂದಿರುವುದು ವಿಧಾನಮಂಡಲದ ರೆಕಾರ್ಡ್‌ನಲ್ಲಿದೆ. ಅದನ್ನು ಬಿಡುಗಡೆ ಮಾಡುತ್ತೇನೆ. ಈಗ ಬೇರೆ ತರ ಹೇಳುತ್ತಿದ್ದಾರೆ. ಹಾಗಾದರೆ ವಿಧಾನಮಂಡಲವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಶಾಸಕರು, ಸಚಿವರನ್ನು ಭೇಟಿ ಮಾಡದೆ ಹೋಟೆಲಿನಲ್ಲಿ ಕುಳಿತಿದ್ದರು” ಎಂದರು.
ಕುಮಾರಸ್ವಾಮಿ ಹೆಚ್ಚು ಹತಾಶರಾಗಿದ್ದಾರೆ
ಬಿಜೆಪಿಗಿಂತಲೂ ಕುಮಾರಸ್ವಾಮಿ ಅವರು ಹೆಚ್ಚು ಆರೋಪ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, “ರಾಜಕೀಯವಾಗಿ ಹತಾಶರಾದವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಕುಮಾರಸ್ವಾಮಿ ಅವರು ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಿಜೆಪಿಗಿಂತ ಜಾಸ್ತಿ ಹತಾಶರಾಗಿರುವುದು ಕುಮಾರಸ್ವಾಮಿ. ಬಿಜೆಪಿ ಜೊತೆ ಸೇರದೇ ಹೋಗಿದ್ದಾರೆ ಒಂದು ಸ್ಥಾನವನ್ನೂ ಗೆಲ್ಲಲು ಆಗುತ್ತಿರಲಿಲ್ಲ. ಕುರುಡರು, ಹೆಳವರ ರೀತಿ ಒಬ್ಬರಿಗೊಬ್ಬರು ಅವಲಂಬಿತರಾಗಿದ್ದಾರೆ” ಎಂದು ಲೇವಡಿ ಮಾಡಿದರು.
ಯಾವ ರಾಜ್ಯಗಳಿಗೂ ಹಣ ಕೊಟ್ಟಿಲ್ಲ
ಹೈ ಕಮಾಂಡಿಗೆ ದೂರು ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿ, “ಪಂಚ ರಾಜ್ಯಗಳ ಚುನಾವಣೆ ಬಂದಿರುವುದರಿಂದ ನೆಪಮಾಡಿಕೊಂಡು ಸುಳ್ಳು ಹೇಳುತ್ತಾರೆ. ಇಂದಿನವರೆಗೆ ನಾವು ಯಾವ ರಾಜ್ಯಗಳಿಗೂ ಹಣ ಕೊಟ್ಟಿಲ್ಲ. ಅದಕ್ಕಾಗಿ ಯಾರ ಬಳಿಯೂ ಹಣ ಕೇಳಿಲ್ಲ” ಎಂದು ಸ್ಪಷ್ಟಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಅಗ್ನಿವೀರ’ ಯೋಜನೆ ಟೊಳ್ಳೆಂದು ಸಾರಿದೆ ಇಸ್ರೇಲ್ ಯುದ್ಧ!
ಬೆಂಗಳೂರಿಗೆ ರಾಮನಗರ ಸೇರ್ಪಡೆ ಹೇಳಿಕೆ: ಡಿಸಿಎಂ ಜೊತೆ ಚರ್ಚೆ
ರಾಮನಗರವನ್ನು ಬೆಂಗಳೂರಿಗೆ ಸೇರ್ಪಡೆ ಮಾಡುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮುಖ್ಯಮಂತ್ರಿಗಳು ಈ ಪ್ರಶ್ನೆಯನ್ನು ಅವರನ್ನೇ ಕೇಳಿ ಎಂದರು. ಈ ಬಗ್ಗೆ ನನಗೆ ಗೊತ್ತಿಲ್ಲ. ನಾನು ಈ ಬಗ್ಗೆ ಅವರ ಬಳಿ ಚರ್ಚೆ ಮಾಡುತ್ತೇನೆ ಎಂದರು.
ಬಿಜೆಪಿಗೆ ಮಾನ, ಮರ್ಯಾದೆ ಇದೆಯೇ
ಬಿಜೆಪಿ ಎಟಿಎಂ ಸರ್ಕಾರ ಎಂದು ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ಸುಳ್ಳು ಆರೋಪ. ಆಪರೇಷನ್ ಕಮಲ ಕೈಗೊಂಡು 25 ಕೋಟಿ ಹಣ ನೀಡಿ, 25 ಕೋಟಿ ಚುನಾವಣೆಗೆ ಖರ್ಚು ಮಾಡಲು ಹಣ ಎಲ್ಲಿಂದ ಬಂತು. ಇವರಿಗೆ ಏನಾದರೂ ಮಾನ, ಮರ್ಯಾದೆ ಇದೆಯೇ? ಎಂದು ಪ್ರಶ್ನಿಸಿದರು.
30,000 ಕೋಟಿ ರೂ.ಗಳಷ್ಟು ಬಾಕಿ ಬಿಲ್ಲುಗಳು
“ಹಣವಿಲ್ಲದಿದ್ದರೂ ಕೆಲಸ ಮಂಜೂರು ಮಾಡಿ, ಟೆಂಡರ್ ಕರೆದು ಬಿಲ್ಲುಗಳನ್ನು ಬಾಕಿ ಇಟ್ಟು ಹೋಗಿದ್ದಾರೆ. 30,000 ಕೋಟಿ ರೂ.ಗಳಷ್ಟು ಬಾಕಿ ಬಿಲ್ಲುಗಳಿವೆ. ಇದಕ್ಕೆ ಯಾರು ಹೊಣೆ. ನಮ್ಮ ಕಾಲದ ಹಾಗೂ ಬಿಜೆಪಿ ಕಾಲದ ಆರ್ಥಿಕಸ್ಥಿತಿ ಕುರಿತು ಶ್ವೇತಪತ್ರವನ್ನು ವಿಧಾನಮಂಡಲದಲ್ಲಿ ಮಂಡಿಸುತ್ತೇನೆ. ರಾಜ್ಯ ಹಾಳು ಮಾಡಿದ್ದಕ್ಕೆ ಜನ ತಿರಸ್ಕಾರ ಮಾಡಿದ್ದಾರೆ. ಈಗ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುತ್ತಾರೆ ಹೊರತು ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ” ಎಂದರು.
ಮಂತ್ರಿಮಂಡಲ ವಿಸ್ತರಣೆ, ವರಿಷ್ಠರಿಂದ ತೀರ್ಮಾನ
ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು ಸಚಿವರಾಗಬೇಕೆಂದು ಬಯಸುವುದರಲ್ಲಿ ತಪ್ಪಿಲ್ಲ. ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.
ಖಾಲಿ ಡಬ್ಬಗಳು ಹೆಚ್ಚು ಶಬ್ದ ಮಾಡುತ್ತವೆ
“ಜಾತಿಜನಗಣತಿ ವರದಿ ಬಿಡುಗಡೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆಯ ನಂತರ ಅವರ ಮೇಲಿನ ವಿಪಕ್ಷಗಳ ಆರೋಪಗಳು ಹೆಚ್ಚಾಗಿವೆ ಎಂಬ ಬಗ್ಗೆ ಉತ್ತರಿಸಿ ರಾಜಕೀಯವಾಗಿ ಹತಾಶರಾಗಿ ಮಾತನಾಡುತ್ತಾರೆ. ಖಾಲಿ ಡಬ್ಬಗಳು ಹೆಚ್ಚು ಶಬ್ದ ಮಾಡುತ್ತವೆ” ಎಂದರು.